ಮೂರ್ನಾಡು, ಜು. 7 : ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಸಮುದಾಯ ಭವನದಲ್ಲಿ ನಡೆಯಿತು.

ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್. ಚಂದ್ರಶೇಖರ್ ನೋಡೆಲ್ ಅಧಿಕಾರಿಯಾಗಿದ್ದ. ಸಭೆಯಲ್ಲಿ ಕುಡಿಯುವ ನೀರು, ಶುಚಿತ್ವ, ಶೌಚಾಲಯ, ಸಾರ್ವಜನಿಕ ಕೆರೆಯ ಅಭಿವೃದ್ಧಿ, ಬೀದಿ ದೀಪ, ಇನ್ನಿತರ ಸಮಸ್ಯೆಗಳ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ವಜೀರ್ ಕುಡಿಯುವ ನೀರು ಪೂರೈಕೆಗೆ ಗ್ರಾಮ ಪಂಚಾಯಿತಿ ರೂ. 15 ಲಕ್ಷ ವೆಚ್ಚದಲ್ಲಿ ಹೊಸ ಪೈಪ್‍ಲೈನ್ ಅಳವಡಿಸುವ ಯೋಜನೆ ರೂಪಿಸಿದ್ದು, ಈ ಯೋಜನೆಯ ಅವಶ್ಯಕತೆ ಇರಲಿಲ್ಲ. ಹಳೆಯ ಎರಡು ಪೈಪ್‍ಲೈನ್‍ಗಳನ್ನು ದುರಸ್ಥಿಗೊಳಿಸಿದ್ದಲ್ಲಿ ಪಟ್ಟಣದಲ್ಲಿ ಉದ್ಬವವಾಗುವ ನೀರಿನ ಸಮಸ್ಯೆ ನೀಗಿಸಬಹುದಾಗಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ರವಿ ಮಾತನಾಡಿ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಮನೆಗಳು ಜಾಸ್ತಿ ಆಗಿದೆ. ಇದರಿಂದ ಈಗಿರುವ ಎರಡು ಪೈಪ್ ಲೈನ್ ದುರಸ್ಥಿ ಪಡಿಸಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೊಸ ಪೈಪ್‍ಲೈನ್ ಅಳವಡಿಸುವ ಯೋಜನೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ನೀಗಿಸುವಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಉತ್ತರಿಸಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ದಿನಂಪ್ರತಿ ಸ್ವಚ್ಛತೆ ಕೈಗೊಳ್ಳುತ್ತಿರುವ ಗ್ರಾಮ ಪಂಚಾಯಿತಿ ಉಳಿದ ಬಡಾವಣೆಗಳ ರಸ್ತೆಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೊನ್ನು ಮುತ್ತಪ್ಪ ಆರೋಪಿಸಿದರು. ಇದಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಪ್ರತಿಯೊಂದು ಕಡೆಗಳಲ್ಲಿ ಶುಚಿತ್ವಕ್ಕೆ ಗಮನ ಹರಿಸುವದಾಗಿ ಭರವಸೆ ನೀಡಿದರು. ಪಟ್ಟಣದಲ್ಲಿ ಪಂಚಾಯಿತಿ ವಾಣಿಜ್ಯ ಮಳಿಗೆ ಪಕ್ಕ ನೂತನ ಶೌಚಾಲಯ ನಿರ್ಮಾಣವಾಗುತ್ತಿರುವದರ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಈಗಿರುವ ಶೌಚಾಲಯ ಅಶುಚಿತ್ವದಿಂದ ಕೂಡಿದೆ. ಇದರೊಂದಿಗೆ ನೂತನ ಶೌಚಾಲಯ ನಿರ್ಮಾಣ ಮಾಡಿ ಶುಚಿತ್ವ ಕಾಪಾಡಿಕೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಮುತುರ್ವಜಿ ವಹಿಸುತ್ತಿದೆಯೆ ಎಂದು ಪ್ರಶ್ನೆ ಮಾಡಿದರು. ಹೈಟೆಕ್ ಶೌಚಾಲಯ ನಿರ್ಮಿಸುವ ಯೋಜನೆ ಇದ್ದಾಗಿದ್ದು, ಮಹಿಳೆರ ಸುರಕ್ಷತೆ ದೃಷ್ಟಿಯಿಂದ ನಿರ್ಮಿಸಲಾಗುತ್ತಿದೆ. ಶುಚಿತ್ವದ ಸಮಸ್ಯೆ ಎದುರಾಗದಂತೆ ಕಾಪಾಡಿ ಕೊಳ್ಳಲಾಗುವದೆಂದು ಪಿಡಿಒ ಉತ್ತರಿಸಿದರು.

ಪಟ್ಟಣದ ಬೀದಿಗಳಲ್ಲಿ ಅಳವಡಿಸಲಾದ ಬೀದಿ ದೀಪದ ಬೆಳಕು ಮಂದ ಗತಿಯಲ್ಲಿದ್ದು, ಶುಭ್ರ ಬೆಳಕು ನೀಡದ ದೀಪಗಳಿಂದ ರಾತ್ರಿ ಪಟ್ಟಣದಲ್ಲಿ ಕತ್ತಲೆ ಆವರಿಸಿದಂತಿರುತ್ತದೆ ಇದರತ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಸರಿಪಡಿಸುವ ಭರವಸೆ ಪಿಡಿಓ ನೀಡಿದರು. ಸಾರ್ವಜನಿಕ ಕೆರೆ ಅರೆಬರೆಯ ಕಾಮಗಾರಿ ಆಗಿದ್ದು, ಸ್ವಲ್ಪ ಅರ್ಧಕ್ಕೆ ನಿಂತು ಹೋಗಿದೆ. ಕೆರೆಯಲ್ಲಿರುವ ಹೂಳನ್ನೆತ್ತಿ ಕೆರೆಯ ದಡದಲ್ಲಿ ಹಾಕಲಾಗುತ್ತದೆ. ಮಳೆಗಾಲದಲ್ಲಿ ದಡದಲ್ಲಿರುವ ಹೂಳು ಮತ್ತೆ ಕೆರೆಗೆ ಸೇರುತ್ತಿದೆ. ಇದರಿಂದ ಏನು ಪ್ರಯೋಜನ ಎಂದು ನಿವೃತ್ತ ಶಿಕ್ಷಕಿ ಪ್ರೇಮಲತಾ ಪ್ರಶ್ನೆ ಮಾಡಿದರು.

ಸಭೆಗೆ ಆಗಮಿಸಿದ ವಿವಿಧ ಇಲಾಖಾಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಬಸವ ವಸತಿ, ಅಂಬೇಡ್ಕರ್, ಪ್ರದಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ಪಲಾನುಭವಿಗಳ ಅರ್ಜಿ, ಕ್ರಿಯಾ ಯೋಜನೆ ತಯಾರಿಸಲು ಅರ್ಜಿಗಳನ್ನು ಸ್ವೀಕರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಶಶಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.