ಸಿದ್ದಾಪುರ, ಜು. 3: ನೆಲ್ಲಿಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಹರಪ್ಪಳ್ಳಿ ರವೀಂದ್ರ ಮತ್ತು ನಯನಾ ರವೀಂದ್ರ ದಂಪತಿ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿದರು.

ಒಂದನೇ ತರಗತಿಯಿಂದ 8ನೇ ತರಗತಿವರೆಗಿನ 248 ವಿದ್ಯಾರ್ಥಿಗಳಿಗೆ ಬೇಕಾದ ನೋಟ್ ಪುಸ್ತಕಗಳನ್ನು ವಿತರಿಸಿದರು. ಬಳಿಕ ಮಾತನಾಡಿ, ಬಡತನದ ಮಹತ್ವ ಅರಿತು 15 ವರ್ಷಗಳಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ತನ್ನ ಗಳಿಕೆಯ ಶೇ. 20 ರಷ್ಟು ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸುತ್ತಿದ್ದೇನೆ ಎಂದರು.

ಸೋಮವಾರಪೇಟೆ ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ರವೀಂದ್ರ ಅವರಂತಹ ಸಹೃದಯಿಗಳು ನೀಡುತ್ತಿರುವ ಸಹಾಯ ವನ್ನು ಪಡೆಯುವದರ ಜತೆಗೆ ಪೋಷಕರು ಕೂಡಾ ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.

ಈ ಸಂದರ್ಭ ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕಿ ತಾರಾಮಣಿ, ಎಸ್‍ಡಿಎಂಸಿ ಉಪಾಧ್ಯಕ್ಷ ಹಂಸ, ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿಮ್ಮಿ ಸಿಕ್ವೇರ, ಕಾಲೇಜು ಪ್ರಾಂಶುಪಾಲೆ ಜಸ್ಟಿನ್ ಕೊರಿಯಾ, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಸದಸ್ಯ ಅಫ್ಸಲ್, ಶಶಿ, ಜೋಸೆಫ್ ಸಾಂ ಮತ್ತು ಇತರರು ಇದ್ದರು.