ಮಡಿಕೇರಿ, ಜು. 3: ತೋಟಗಾರಿಕೆ ಇಲಾಖೆಯ ಹಾರ್ಟಿ ಕ್ಲಿನಿಕ್ ವಿಭಾಗ ಕಳೆದ ಕೆಲವು ವರ್ಷಗಳಿಂದ ರೈತರಿಗೆ ಮಾಹಿತಿ ನೀಡುವದರೊಂದಿಗೆ, ಜಿಲ್ಲಾ ಕಚೇರಿ, ತಾಲೂಕು ಕಚೇರಿ, ರೈತ ಸಂಪರ್ಕ ಕೇಂದ್ರಗಳು ಕೂಡ ಮಾಹಿತಿ ನೀಡುವ ಕಾರ್ಯನಿರ್ವಹಿಸುತ್ತಿದ್ದಾರೆ. ಅಬ್ಬರದ ಮಳೆಯ ಈ ಸಂದರ್ಭದಲ್ಲಿ ತೋಟಗಾರಿಕಾ ಕೃಷಿ ಚಟುವಟಿಕೆ ಬಗ್ಗೆ ಕೆಲವು ಮಾನದಂಡಗಳನ್ನು ರೈತರು ಅನುಸರಿಸಬೇಕಿದೆ.

ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳಲ್ಲಿನ ಸ್ವಲ್ಪ ಮಾರ್ಪಾಡು, ಕೃಷಿಯಲ್ಲಿ ಕೌಶಲ್ಯ ಅಭಿವೃದ್ಧಿ ಅಳವಡಿಸಿದ್ದಲ್ಲಿ ಎಂಥಹ ಸಂದರ್ಭ ಬಂದರು ಉತ್ತಮ ಬೆಳೆ ಬೆಳೆಯಬಹುದು. ಮಳೆ ಹೆಚ್ಚಾದಂತೆ ಹಾಗೂ ಮೋಡ ಕವಿದ ವಾತಾವರಣದಿಂದ ಗಿಡಗಳಲ್ಲಿ ರೋಗದ ಲಕ್ಷಣಗಳು ಉಲ್ಬಣಗೊಳ್ಳುತ್ತದೆ. ಕಾಳು ಮೆಣಸು ಹಾಗೂ ಇತರ ಬೆಳೆಗಳಲ್ಲಿ ಕೊಳೆರೋಗ, ಎಲೆ ಚುಕ್ಕೆ ರೋಗ, ಶುಂಠಿಯಲ್ಲಿ ಕಾಂಡ ಕೊಳೆ ರೋಗ, ಗೆಡ್ಡೆ ಕೊಳೆ ರೋಗ, ಹೀಗೆ ಶಿಲೀಂಧ್ರ ಹಾಗೂ ಬ್ಯಾಕ್ಟಿರಿಯದಿಂದ ರೋಗ ಹರಡುವ ಸಂಭವವಿರುತ್ತದೆ. ಹೆಚ್ಚಿನ ರೈತ ಬಾಂಧವರಿಗೆ ಇದರ ಅರಿವಿದೆ ಹಾಗೂ ಪರಿಹಾರ ಮಾಡುತ್ತಲು ಇದ್ದಾರೆ.

ಸಾಮಾನ್ಯವಾಗಿ ರೋಗ ಬರುವದಕ್ಕೆ ಮುನ್ನ ಮುಂಜಾಗರೂಕತೆ ಕ್ರಮವಹಿಸಿದರೆ ಹೆಚ್ಚಿನ ಮಟ್ಟಿಗೆ ರೋಗ ನಿಯಂತ್ರಿಸಬಹುದು. ಅವುಗಳಲ್ಲಿ ಮುಖ್ಯವಾಗಿ ಮಣ್ಣು ಪರೀಕ್ಷೆ ಹಾಗೂ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಕೃಷಿ ಪರಿಕರಗಳ ಬಳಕೆ, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವದು ಬದುಗಳ ನಿರ್ಮಾಣ, ಚರಂಡಿ/ ಕಾಲುವೆ ಸೋಸುವಿಕೆಯಿಂದ ನೀರು ಬಸಿದುಹೋಗುವದನ್ನು ನಿಯಂತ್ರಿಸುವದರೊಂದಿಗೆ ಅಧಿಕವಾಗಿ ನೀರು ಸಂಗ್ರಹವಾಗದಂತೆ ತಡೆಯಬಹುದು, ಸಾವಯವ ಗೊಬ್ಬರಗಳನ್ನು ಉಳುಮೆ/ಗಿಡ ನೆಡುವದಕ್ಕೆ ಮುಂಚಿತವಾಗಿ ಕೊಡುವದು, ಮರ ಕಪಾತು, ನೆರಳು ನಿಯಂತ್ರಣ, ಮಳೆಯ ಬಿಡುವಿನಲ್ಲಿ ಅಂಟು ಮಿಶ್ರಣ ಮಾಡಿ ಸಿಂಪಡಣೆ, ಪರಿಸರ, ಹವಾಗುಣ, ಮಣ್ಣಿನಗುಣ ಆಧರಿಸಿ ಸೂಕ್ತ ತಳಿಗಳ ಆರೈಕೆ, ನಾಟಿ ಮಾಡುವ ಮುನ್ನ ಬೀಜೋಪಚಾರ ಕಡ್ಡಾಯ, ತೋಟಗಾರಿಕೆ ಇಲಾಖೆ ತಯಾರಿಕ ಜೈವಿಕ ಗೊಬ್ಬರಗಳಾದ ಅರ್ಕ ಮೈಕ್ರೋಬಿಯಲ್ ಕನ್‍ಸೋರ್‍ಶಿಯಂ, ಟ್ರೈಕೋಡರ್ಮ (ಕ್ಯಾಪ್ಸುಲ್ ಹಾಗೂ ಪುಡಿರೂಪ), ಪಿಜಿಪಿಆರ್ (ಕ್ಯಾಪ್ಸುಲ್) ಹಾಗೂ ಇತರೆ ಜೈವಿಕ ಗೊಬ್ಬರಗಳನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ನಾಟಿ ಮಾಡುವದಕ್ಕಿಂತ ಮುಂಚಿತವಾಗಿ ಕೊಡುವದು, ಪರಿಸರ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುವದು, ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕವಹಿಸುವದು.

ಅನಿವಾರ್ಯ ಕಾರಣಗಳಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆಗದಿದ್ದಲ್ಲಿ, ರೋಗದ ಲಕ್ಷಣ ಕಾಣಿಸಿಕೊಂಡಲ್ಲಿ, ರಾಸಾಯನಿಕ ಬಳಕೆ ಅನಿವಾರ್ಯ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ರಸಾಯನಿಕ ಬಳಕೆ ನಿಯಂತ್ರಣವು ಆಗಬಹುದಾದರು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಬಳಸುವದು. ಅವಧಿ ಮೀರಿದ, ಕಳಪೆ ಗುಣ ಮಟ್ಟದ ಜೌಷಧಿ ಬಳಸುವದು ಬೇಡ. ಅಧಿಕೃತ ಮಾರಾಟಗಾರರಿಂದ ಗುಣ ಮಟ್ಟದ ಜೌಷಧಿ ಖರೀದಿಸಿ ಬಿಲ್ಲು ಪಡೆಯುವದು.

ಕೊಡಗು ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಕಾಳುಮೆಣಸು ಹಾಗೂ ಶುಂಠಿ ಬೆಳೆಯ ಬಗ್ಗೆ ಆಸಕ್ತಿ ತೋರುತ್ತಿದ್ದು ಮುಂಜಾರೂಕತೆಯಾಗಿ ಪ್ರಸಕ್ತ ಶೇ. 1 ರ ಬೋರ್ಡೊ ದ್ರಾವಣ ಸಿಂಪಡಣೆ ಹಾಗೂ 2ಗ್ರ್ರಾಂ/ಲಿ ನೀರಿನಲ್ಲಿ ಕಾಪರ್ ಆಕ್ಸಿ ಕ್ಲೋರೈಡ್ ಅನ್ನು ಮಿಶ್ರಣ ಮಾಡಿ ಬುಡಕ್ಕೆ ಸುರಿಯುವದು, ಎಲೆಗಳು ತಿರುಚಿಕೊಂಡು ಸುಳಿ ಎಲೆ ಹಾಗೂ ದಾರದಲ್ಲಿ ಕಂದು ಬಣ್ಣದ ಚುಕ್ಕೆ ಕಂಡು ಬಂದು ಉದುರುತ್ತಿದ್ದರೆ ನಿಯಂತ್ರಿಸಲು ಕಾರ್ಬನ್ ಡೈ ಸಿಮ್ 2 ಗ್ರಾಂ 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವದು. ಮಿಲಿ ಬಗ್ ಹಾಗೂ ಗೆದ್ದಲು ಬಾದೆ ಇದ್ದಲ್ಲಿ ಪೋರೆಟ್ ಹರಳುಗಳನ್ನು ಬುಡದ ಸುತ್ತ ಎರಡರಿಂದ ಮೂರು, ನಾಲ್ಕು ಇಂಚು ಆಳದ ಗುಣಿ ಮಾಡಿ 10 ಗ್ರಾಂ ನಂತೆ ಹಾಕುವದು, ಎಲೆ ಚುಕ್ಕೆ ರೋಗ ಇಲ್ಲದಿದ್ದಲ್ಲಿ ಮುಂಜಾಗ್ರತ ಕ್ರಮವಾಗಿ ಬೋರ್ಡೋ ದ್ರಾವಣ ಸಿಂಪಡಿಸುವದು, ಸೊರಗು ರೋಗ ಕಂಡುಬಂದಲ್ಲಿ ಪೊಟೇಶಿಯಂ ಪಾಸ್ಫೋನೇಟ್ 3 ರಿಂದ 5 ಮಿಲಿ/ಲೀಟರ್ ನೀರಿನಲ್ಲಿ, ಇಮ್ಮಿಡ ಕ್ಲೋಪ್ರಿಡ್ 0.5 ಮಿಲಿ ನೀರಿನಲ್ಲಿ ಮಿಶ್ರಣಮಾಡಿ ಬುಡಕ್ಕೆ ಸುರಿಯುವದು. ಮಳೆಗಾಲದ ಗೊಬ್ಬರ 15:6:21 ರ ಪ್ರಮಾಣದಲ್ಲಿ ಸಾರಜನಕ, ರಂಜಕ ಪೊಟಾಶ್ ಅನ್ನು ಗಿಡವೊಂದÀಕ್ಕೆ 100 ರಿಂದ 200 ಗ್ರಾಂ ಪ್ರಮಾಣದಲ್ಲಿ ಕೊಡುವದು. ರೋಗ ಹೆಚ್ಚಾಗಿರುವ ಗಿಡಗಳನ್ನು ಕಿತ್ತು ಸುಡುವದು. ಹೊಸ ಗಿಡ ನೆಡಲು ಇದು ಸೂಕ್ತ ಕಾಲ.ಲಘು ಪೋಷಕಾಂಶಗಳು ಹಾಗೂ ಪೆಪ್ಪರ್ ಸ್ಪಶಲ್ ಬಳಸಬಹುದು.

ಶುಂಠಿ: ಕಾಂಡ ಕೋರಕ ಹುಳದ ಬಾದೆ ಇದ್ದಲ್ಲಿ ಯಾವದಾದರು ಕೀಟನಾಶಕ ಎಂದರೆ ಕ್ವಿನಾಲ್ ಫಾಸ್, ಡೆಲ್ಟ ಮೆತ್ರ್ರಿನ್, ಲ್ಯಾಂಬ್ಡ ಸೈಲೋತ್ರಿನ್, ಕ್ಲೋರೋ ಫೈರಿಫಾಸ್ 2 ಮಿಲಿ / ಗ್ರಾಂ 1 ಲೀಟರ್ ನೀರಿನಲ್ಲಿ ಸಿಂಪಡಣೆ ಮಾಡಬಹದು. ಗೆಡ್ಡೆ ಕೊಳೆ ರೋಗ ಕಂಡು ಬಂದಲ್ಲಿ 3 ರಿಂದ 5 ಮಿಲಿ ಪೊಟಾಶಿಯಂ ಪಾಸ್ಫೋಪೋನೇಟ್ ಅಥವಾ ಮೆಟಲಾಕ್ಸಿಲ್ 1 ಗ್ರಾಂ ಅನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬಹುದು ಕಾಂಡ ಕೊಳೆ ರೋಗ ಕಂಡು ಬಂದಲ್ಲಿ ಬುಡದ ಭಾಗ ಕಪ್ಪಾಗಿ ಕಾಂಡ ಮುರಿದು ಬೀಳುತ್ತದೆ. ಅದನ್ನು ನಿಯಂತ್ರಿಸಲು ಸೆಕ್ಟಿನ್ 3ಗ್ರಾಂ, ಅಥವಾ ಶಮೀರ್ 2 ರಿಂದ 3 ಮಿಲಿ ಅಥವಾ ಕ್ಯಾಪ್ಟಾನ್ 2 ಗ್ರ್ರಾಂ ಜೊತೆಗೆ ಎಂ45 3 ಗ್ರಾಂ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಡಣೆ ಮಾಡುವದು. ರೋಗದ ತೀವ್ರತೆ ಇದ್ದಲ್ಲಿ 5 ರಿಂದ 7 ದಿನದ ಅಂತರದಲ್ಲಿ ಪುನರಾವರ್ತಿಸಬಹುದು. ಚರಂಡಿಯಲ್ಲಿ ಕಳೆ ತೆಗೆದು ನೀರು ನಿಲ್ಲದ ಹಾಗೆ ನೋಡಿಕೊಳ್ಳುವದು. ಹೆಚ್ಚಿನ ವಿವರಗಳಿಗೆ ವಿಷಯ ತಜ್ಞರು ತೋಟಗಾರಿಕೆ ಇಲಾಖೆ ಮಡಿಕೇರಿಯಲ್ಲಿ 9448401087 ಸಂಪರ್ಕಿಸಬಹುದು.