ಸುಂಟಿಕೊಪ್ಪ, ಜೂ. 25: ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಡಗಿಗೆ ವಲಸೆ ಬಂದಿರುವ ತುಳುಭಾಷಿಕರಾದ ಪರಿಶಿಷ್ಟ ಜಾತಿಗೆ ಸೇರಿದ ನಮಗೆ ಆದಿದ್ರಾವಿಡ ಜಾತಿ ಎಂಬ ಜಾತಿ ದೃಡೀಕರಣ ಪತ್ರ ನೀಡಬೇಕೆಂದು ಜಿಲ್ಲಾ ಆದಿದ್ರಾವಿಡ ಸಮಾಜದ ವತಿಯಿಂದ ನಾಡ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲಸ ಹುಡುಕಿಕೊಂಡು ಕೊಡಗಿಗೆ ಬಂದು ಕೂಲಿ ಕೆಲಸ ನಿರ್ವಹಿಸುತ್ತಿರುವ ತುಳು ಭಾಷಿಕರಾದ ಪರಿಶಿಷ್ಟ ಜಾತಿಯವರಾದ ಪಾಲೆ, ಎಡಗೈ, ಬಲಗೈ, ಹರಿಜನ, ಆದಿದ್ರಾವಿಡ, ಮೊಗೇರಾ ಇವರುಗಳಿಗೆ ಕಂದಾಯ ಇಲಾಖೆಯಿಂದ ತರಾವರಿ ಜಾತಿ ದೃಡೀಕರಣ ನೀಡಲಾಗುತ್ತದೆ. ನಮಗೆ ಪರಿಶಿಷ್ಟ ಜಾತಿಯ ಆದಿ ದ್ರಾವಿಡ ಎಂದು ನಿಖರವಾಗಿ ಜಾತಿ ದೃಢೀಕರಣ ಪತ್ರ ನೀಡಬೇಕು.

ಹಲವು ಜಾತಿಗಳಿಂದ ಗುರುತಿಸುವ ಕಾರಣ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ ಪಡೆಯಲು ತ್ರಾಸದಾಯಕವಾಗಿದೆ.

ಸುಂಟಿಕೊಪ್ಪದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ತೆರಳಿದಾಗ ಕೆಲವರಿಗೆ ಪರಿಶಿಷ್ಟ ಜಾತಿಯ ಆದಿದ್ರಾವಿಡ ಎಂದು ನಮೂದಿಸಿ ದ್ದರೂ, ಕೆಲ ದಾಖಲಾತಿಗಳನ್ನು ನೀಡಿದರೂ ನಾಡ ಕಚೇರಿ ಸಿಬ್ಬಂದಿಗಳು ತಿರಸ್ಕರಿಸಿದ್ದಾರೆ. ಕೂಡಲೇ ಗೊಂದಲಗಳನ್ನು ನಿವಾರಿಸಿ ಜಾತಿ ಪ್ರಮಾಣ ಪತ್ರವನ್ನು ಪರಿಶಿಷ್ಟ ಜಾತಿ ಆದಿದ್ರಾವಿಡ ಎಂದು ನೀಡಬೇಕೆಂದು ಉಪತಹಶೀಲ್ಧಾರ್ ಶಶಿಧರ್ ಅವರಿಗೆ ಮನವಿ ಸಲ್ಲಿಸಲಾಯಿತು.