ಸೋಮವಾರಪೇಟೆ, ಜೂ. 20: ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. ಜನರು ರಕ್ತ ದಾನ ಮಾಡಿದಲ್ಲಿ ಮಾತ್ರ ಮತ್ತೊಂದು ಜೀವ ಉಳಿಸಲು ಸಾಧ್ಯವಾಗುವದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಘಟಕ ವೈದ್ಯಾಧಿಕಾರಿ ಶಿವಕುಮಾರ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಘಟಕ ಹಾಗೂ ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆ ಸಹಯೋಗದೊಂದಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲಾ ರಕ್ತ ನಿಧಿ ಕೇಂದ್ರದಲ್ಲಿ 2000 ಯೂನಿಟ್ ರಕ್ತ ಸಂಗ್ರಹ ಇಡಬೇಕಿದೆ. ಇಂದು 1000 ಯೂನಿಟ್ ರಕ್ತವನ್ನು ಸಂಗ್ರಹಿಸಿದ್ದು, ಉಳಿದ ರಕ್ತವನ್ನು ಇಂತಹ ಶಿಬಿರಗಳಿಂದ ಸಂಗ್ರಹಿಸಲಾಗುವದು. ಜಿಲ್ಲಾ ರಕ್ತ ನಿಧಿ ಕೇಂದ್ರಕ್ಕೆ ರಕ್ತ ವಿದಳನ ಯಂತ್ರ ಬಂದಿದ್ದು, ಒಬ್ಬರು ನೀಡಿದ ರಕ್ತವನ್ನು ಕೆಂಪು ರಕ್ತ ಕಣ, ಬಿಳಿರಕ್ತ ಕಣ, ಪ್ಲಾಸ್ಮ ಗಳಂತೆ ವಿಂಗಡಿಸಿ ಅವಶ್ಯಕತೆ ಇದ್ದವರಿಗೆ ನೀಡಲಾಗುವದು ಎಂದು ಹೇಳಿದರು.

ಶಿಬಿರದ ಮೇಲ್ವಿಚಾರಕಿ ಮೈಸೂರಿನ ಡಾ. ರಶ್ಮಿ ಮಾತನಾಡಿ, 1900ರಲ್ಲಿ ಲ್ಯಾನ್‍ಸ್ಟಿನ್ ರಕ್ತದ ಗುಂಪುಗಳನ್ನು ಕಂಡು ಹಿಡಿದಿದ್ದರಿಂದ ಜೂನ್ 14ನ್ನು ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ರಕ್ತದಾನ ಮಾಡುವದರಿಂದ ಮತ್ತೊಂದು ಜೀವ ಉಳಿಸಲು ಸಾಧ್ಯ. ನಿಯಮಿತ ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆಯಾಗುವದು. ಹೃದಯಾಘಾತಗಳನ್ನು ಶೇ. 80 ರಷ್ಟು ಕಡಿಮೆ ಮಾಡಿಕೊಳ್ಳಬಹುದು. ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಮುಕ್ತರಾಗಬಹುದು ಎಂದರು.

ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ರವೀಂದ್ರ ಹಾನಗಲ್ಲು, ಗೌರವಾಧ್ಯಕ್ಷೆ ಶೋಭಾ ಶಿವರಾಜ್, ಕಾನೂನು ಸಲಹೆಗಾರ್ತಿ ರೂಪ ಕಾಳಪ್ಪ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಕಾಶ್, ತಜ್ಞ ವೈದ್ಯ ಶರತ್‍ಬಾಬು, ಇದ್ದರು. ಇದೇ ಸಂದರ್ಭ ಹಲವರು ರಕ್ತದಾನ ಮಾಡಿದರು.