ಮಾಹಿತಿ ನೀಡಲು ಮನವಿ

ಮಡಿಕೇರಿ, ಜೂ. 20: ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಕನ್ನಡ ನಾಡಿನ ಬರಹಗಾರರು ಪ್ರಕಟಿಸಿದ ಕನ್ನಡ ಭಾಷಾ ಕವಿಗಳನ್ನು ದಾಖಲಿಸಿ ರಾಜ್ಯಮಟ್ಟದಲ್ಲಿ ಸಾಹಿತ್ಯ ಕೋಶವನ್ನು ಹೊರತರುವ ಸಲುವಾಗಿ ಬಂಗಾರದ ಎಲೆಗಳು ಎಂಬ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಯೋಜನೆಯ ಕ್ಷೇತ್ರ ತಜ್ಞ ಟಿ.ಪಿ. ರಮೇಶ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ 1920 ರಿಂದ 2020 ರವರೆಗಿನ ಲೇಖಕರುಗಳು ಕನ್ನಡ ಭಾಷೆಯಲ್ಲಿ ಪ್ರಕಟಿಸಿರುವ ಕೃತಿಗಳನ್ನು ದಾಖಲಿಸುವ ಕೆಲಸ ಆರಂಭಗೊಂಡಿದ್ದು, ಕಳೆದ ಆರು ತಿಂಗಳುಗಳಿಂದ 140ಕ್ಕೂ ಹೆಚ್ಚು ಕೃತಿಕಾರರ ಹೆಸರು ದಾಖಲುಗೊಂಡಿದೆ. ಅದನ್ನು ಪ್ರಥಮ ಕಂತಾಗಿ ಅಕಾಡೆಮಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಪತ್ರಿಕೆಗಳಲ್ಲಿ, ಸ್ಥಳೀಯ ಚಾನಲ್‍ಗಳಲ್ಲಿ ಆಕಾಶವಾಣಿ ಮೂಲಕ ಈ ಕುರಿತು ಈಗಾಗಲೇ ಸುದ್ದಿ ಬಿತ್ತರಿಸಲಾಗಿದ್ದು, ಜಿಲ್ಲಾ ಮತ್ತು ತಾಲೂಕು ಕ.ಸಾ.ಪ., ಜಾನಪದ ಪರಿಷತ್ ಅಧ್ಯಕ್ಷರಿಗೆ ಪತ್ರ ಬರೆದು ಕೋರಲಾಗಿದೆ. ಜಿಲ್ಲೆಯ ಲೇಖಕರುಗಳು ಪ್ರಕಟಿಸಿರುವ ಕೃತಿಗಳಿದ್ದಲ್ಲಿ ಅಥವಾ ಅಂತಹವರ ಕೃತಿಗಳು ಯಾರ ಬಳಿಯಾದರು ಲಭ್ಯವಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಟಿ.ಪಿ. ರಮೇಶ್ ಮನವಿ ಮಾಡಿದ್ದಾರೆ. ಕೃತಿಕಾರರಲ್ಲಿ ಕೆಲವರು ನಿಧನರಾಗಿದ್ದು, ಅವರ ಕುಟುಂಬದವರ ವಿಳಾಸ, ವಿವರಗಳಿದ್ದಲ್ಲಿ ಅದನ್ನು ಕೂಡ ಈ ವಿಳಾಸಕ್ಕೆ ಕಳುಹಿಸಿ ಕೊಡುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9448422511, 08272-229957 ಸಂಪರ್ಕಿಸಬಹುದಾಗಿದೆ.