ಆಲೂರು-ಸಿದ್ದಾಪುರ, ಜೂ. 18: ಶನಿವಾರಸಂತೆ ಸೇರಿದಂತೆ ಕೊಡ್ಲಿಪೇಟೆಯಿಂದ ಸೋಮವಾರಪೇಟೆವರೆಗೆ ಜಿಯೊ ನೆಟ್‍ವರ್ಕ್ ಕೇಬಲ್ ಅಳವಡಿಕೆ ಕೆಲಸ ಬರದಿಂದ ಸಾಗುತ್ತಿದೆ. ಇದರಿಂದ ಅನೇಕರು ತುಂಬಾ ಖುಷಿಪಟ್ಟರು. ಆದರೆ ಅದರಿಂದ ಆಗುತ್ತಿರುವ ತೊಂದರೆಯನ್ನು ನೋಡಿದರೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಈ ಕೇಬಲ್ ಸುರಂಗದಲ್ಲಿ ಕೆಲವೆಡೆ ನೀರು ತುಂಬಿ ಕೆರೆಯಂತಾ ದರೆ ಇನ್ನು ಕೆಲವೆಡೆ ಗುಂಡಿಯ ಸುತ್ತ ಕುರುಚಲು ಗಿಡಗಳು ತುಂಬಿ ಕಾಡಿನಂತೆ ಮಕ್ಕಳು ಹಾಗೂ ಬೈಕ್ ಸವಾರರೂ ಪ್ರತಿನಿತ್ಯ ಈ ಗುಂಡಿಗೆ ಬಿದ್ದು-ಏಳುವದು ಸಾಮಾನ್ಯವಾಗಿದೆ.

ಈ ಕೇಬಲ್ ಅಳವಡಿಕೆಗೆ ಪ್ರತಿ ಒಂದು ಕಿಲೋ ಮೀಟರ್ ದೂರದಲ್ಲಿ ಅಲ್ಲಲ್ಲಿ ಸುಮಾರು 5 ಅಡಿ ಆಳದ 5 ಅಡಿ ಅಗಲದ ಗುಂಡಿಗಳನ್ನು ರಸ್ತೆಯ ಬದಿಯಲ್ಲಿ ತೆರೆದು ಆ ನಂತರ ಅಲ್ಲಿಂದ ಒಳ ಚರಂಡಿ ಸುರಂಗ ಮಾಡಿ ಕೇಬಲ್ ಅಳವಡಿಸ ಬೇಕು. ಆದರೆ ಆ ಗುಂಡಿಗಳನ್ನು ವ್ಯವಸ್ಥಿತವಾಗಿ ಮುಚ್ಚದೆ ತೀರಾ ಅವೈಜ್ಞಾನಿಕ ರೀತಿಯಲ್ಲಿ ಮುಚ್ಚಿರುವ ದರಿಂದ ಗುಂಡಿಗಳು ಮತ್ತೆ ಪ್ರತ್ಯಕ್ಷ ವಾಗಿದೆ. ಕೆಲ ಸರ್ಕಾರಿ ಶಾಲೆಗಳ ಮುಂಭಾಗ ಸೇರಿದಂತೆ ಜನವಸತಿ ಪ್ರದೇಶದಲ್ಲೇ ಅಪಾಯ ಎದುರಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಮೌನವಹಿಸಿರುವದು ವಿಪರ್ಯಾಸ. ಮುಂದಿನ ಒಂದು ವಾರದಲ್ಲಿ ಈ ಗುಂಡಿಗಳನ್ನು ಮುಚ್ಚದಿದ್ದರೆ ಸಂಬಂಧಪಟ್ಟ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ. ಈ ಬಗ್ಗೆ ವೇದಿಕೆಯ ಫ್ರಾನ್ಸಿಸ್ ಡಿಸೋಜ, ಹನೀಫ್ ಶನಿವಾರಸಂತೆ, ಅಭಯಚಂದ್ರ ಹೇಳಿಕೆ ನೀಡಿದ್ದಾರೆ.