ಮಡಿಕೇರಿ, ಜೂ. 18: ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಮನೆ ಒದಗಿಸುವ ಉದ್ದೇಶದಿಂದ ಸರಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗೃಹ ಸಾಲಗಳಿಗೆ ವಿಶೇಷ ಸಹಾಯಧನ ನೀಡುತ್ತಿದೆ. ಈ ಯೋಜನೆಯು ದೇಶದ ಯಾವದೇ ಸ್ಥಳಗಳಲ್ಲಿ ಸ್ವಂತ ಮನೆ ಹೊಂದಿರದ ಕುಟುಂಬಗಳಿಗೆ ಸ್ವಂತ ಮನೆ ಹೊಂದಲು ಗೃಹ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಲು ಸಹಾಯಕವಾಗಿದೆ.

ಕುಟುಂಬದ ಒಟ್ಟು ವಾರ್ಷಿಕ ವರಮಾನ 18 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವ ಅರ್ಹ ಕುಟುಂಬಗಳಿಗೆ ವಾರ್ಷಿಕ ಶೇ. 3 ರಿಂದ 6.5 ರವರೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿಯನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ. ಈ ಸೌಲಭ್ಯದಿಂದ ಗೃಹಸಾಲ ಮೇಲಿನ ನಿವ್ವಳ ಬಡ್ಡಿ ದರ ಕೇವಲ ಶೇ. 2 ರಿಂದ 5.5 ವಾಗಲಿದೆ. ಗೃಹ ಸಾಲ ಮೊತ್ತ ಹಾಗೂ ಕ್ರೆಡಿಟ್ ಲಿಂಕ್ಡ್ ಸಹಾಯಧನದ ಒಟ್ಟು ಮೊತ್ತವನ್ನು ಕುಟುಂಬದ ಒಟ್ಟು ವರಮಾನದ ಮೇಲೆ ನಿರ್ಧರಿಸಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ನಗರಗಳಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದ್ದು, ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ ಈ ಯೋಜನೆಯ ಮುಖಾಂತರ ಅರ್ಹ ಕುಟುಂಬಗಳಿಗೆ ಸ್ವಂತ ಮನೆ ಹೊಂದಲು ಗೃಹ ಸಾಲವನ್ನು ನೀಡುತ್ತಿದ್ದು. ಈ ಸೌಲಭ್ಯವನ್ನು ಪಡೆದುಕೊಳ್ಳಲು ಇಚ್ಚಿಸುವವರು ತಮ್ಮ ಸಮೀಪದ ಕೆನರಾ ಬ್ಯಾಂಕ್ ಶಾಖೆ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಮಹಾ ಪ್ರಭಂಧಕ ವಿ.ಜೆ. ಅರುಣ ತಿಳಿಸಿದ್ದಾರೆ.