ಮಡಿಕೇರಿ, ಜೂ. 14: ಕೊಡಗು ಜಿಲ್ಲೆಯಾದ್ಯಂತ ಈ ತನಕ ಸುರಿದ ಭಾರೀ ವರ್ಷಧಾರೆಯಿಂದ ಪರಿತಪ್ಪಿಸುತ್ತಿದ್ದ ಜನತೆ ಜೂ. 14 ರಂದು ತುಸು ನಿರಾಳರಾಗುವಂತಾಗಿತ್ತು. ತಾ. 13 ರಂದು ರಾತ್ರಿಯಿಡೀ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ದಕ್ಷಿಣ ಕೊಡಗು, ಸೋಮವಾರಪೇಟೆ ತಾಲೂಕು ಹಾಗೂ ಮಡಿಕೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಸುರಿದಿದೆ ಯಾದರೂ ಬೆಳಕು ಹರಿದ ಬಳಿಕ ಮಳೆ ಕೊಂಚ ಇಳಿಮುಖಗೊಂಡಿರುವ ಕುರಿತು ವರದಿಯಾಗಿದೆ.

ರಾತ್ರಿ ಹಾಗೂ ಬೆಳಗ್ಗಿನ ಜಾವ ಸುರಿದ ಮಳೆ-ಗಾಳಿಯಿಂದಾಗಿ ಬಹುತೇಕ ಕಡೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು ಮಾತ್ರವಲ್ಲದೆ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸೂಕ್ತ ವಾಹನ ವ್ಯವಸ್ಥೆಗಳು ಇಲ್ಲದಿದ್ದ ಸಾರ್ವಜನಿಕ ಅಭಿಪ್ರಾಯದಂತೆ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತದ ಮೂಲಕ ರಜೆ ನೀಡಲಾಗಿತ್ತು.

ಆದರೆ ಆನಂತರದಲ್ಲಿ ಮಳೆ ಇಳಿಮುಖಗೊಂಡರೂ ಈತನಕ ಸುರಿದ ಮಳೆ-ಗಾಳಿಯಿಂದಾಗಿ ಬಹುತೇಕ ಕಡೆಗಳಲ್ಲಿ ಜನ ಎದ್ದಿದ್ದು, ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿರಲಿಲ್ಲ. ಕೆಲವಾರು ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಮುಳುಗಡೆಯಾಗುವ ಅನೇಕ ಪ್ರದೇಶಗಳಲ್ಲಿ ಬೆಳಿಗ್ಗೆ ನೀರು ನಿಂತು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತಾದರೂ, ಕೆಲವೊಂದು ಪ್ರದೇಶ ಹೊರತುಪಡಿಸಿ ಸಂಜೆ ವೇಳೆಗೆ ಈ ಪ್ರಮಾಣ ಇಳಿಕೆಯಾದ ಕುರಿತು ವರದಿಯಾಗಿದೆ.

ವಾಯು-ವರುಣನ ಅಬ್ಬರ ತುಸು ಕಡಿಮೆಯಾಗಿದ್ದರೂ ಈ ತನಕ ಪರಿಸ್ಥಿತಿಯಿಂದಾಗಿ ಅಲ್ಲಲ್ಲಿ ಮತ್ತಷ್ಟು ಹಾನಿಗಳು ಮುಂದುವರಿದಿವೆ. ಭಾಗಮಂಡಲದ ತ್ರಿವೇಣಿ ಸಂಗಮ ಇನ್ನೂ ಜಲಾವೃತಗೊಂಡಿದೆ.

(ಮೊದಲ ಪುಟದಿಂದ) ಭಾಗಮಂಡಲ-ಅಯ್ಯಂಗೇರಿ ರಸ್ತೆಯಲ್ಲಿ ಸಂಜೆ 4.30ರ ತನಕವೂ 3 ಅಡಿಗಳಷ್ಟು ನೀರು ನಿಂತಿದ್ದರೆ, ಮಡಿಕೇರಿ ರಸ್ತೆಯಲ್ಲಿ 2 ಅಡಿ ಹಾಗೂ ಬೊಳಿಬಾಳೆ ರಸ್ತೆಯಲ್ಲಿ 3 ಅಡಿಗಳಷ್ಟು ನೀರು ನಿಂತು ಸಂಪರ್ಕ ಕಡಿತಗೊಂಡಿತ್ತು.

ಗೋಣಿಕೊಪ್ಪಲು-ಹುಣಸೂರು ರಸ್ತೆಯ ನಡುವೆ ಬರುವ ತಿತಿಮತಿಯ ಮುಖ್ಯ ರಸ್ತೆಯಲ್ಲಿ ಸೇತುವೆ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ. ಮುಖ್ಯ ರಸ್ತೆಯಲ್ಲಿ ಸಂಚಾರ ಬಂದ್ ಆದ ಪರಿಣಾಮ ವಾಹನಗಳು ಗೋಣಿಕೊಪ್ಪ, ಪಾಲಿಬೆಟ್ಟ, ಘಟ್ಟಹಳ್ಳ, ಮಾಲ್ದಾರೆ, ಪಿರಿಯಾಪಟ್ಟಣದ ಮೂಲಕ ಹುಣಸೂರು ಹಾಗೂ ಗೋಣಿಕೊಪ್ಪಲು, ಮಾಯಮುಡಿ, ಬಾಳೆಲೆ, ಕಾರ್ಮಾಡು, ಮೂರ್ಕಲ್ ಮಾರ್ಗವಾಗಿ ಹುಣಸೂರು ಕಡೆಗೆ ತೆರಳುವಂತಾಗಿತ್ತು.

ಮಳೆಯಿಂದಾಗಿ ಈಗಾಗಲೇ ಮಾಕುಟ್ಟ ರಸ್ತೆಯಲ್ಲಿ ಸಂಚಾರ ನಿಷೇಧಿಸಲ್ಪಟ್ಟಿರುವ ಕಾರಣದಿಂದಾಗಿ ಪೊನ್ನಂಪೇಟೆ ಮಾರ್ಗದಲ್ಲಿ ಅತ್ಯಧಿಕ ವಾಹನಗಳ ಓಡಾಟದಿಂದಾಗಿ ಈ ರಸ್ತೆಯೂ ತೀರಾ ಕಿಷ್ಕಿಂದೆಯಾಗಿ ಪರಿಣಮಿಸಿತ್ತು. ಇನ್ನು ಮಳೆಯಿಂದ ಜರ್ಜರಿತಗೊಂಡಂತಾಗಿದ್ದ ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಲ್ಲಿನ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಚೇತರಿಕೆ ಕಾಣುತ್ತಿದೆ.

*ಗೋಣಿಕೊಪ್ಪಲು ವರದಿ: ಬುಧವಾರ ರಾತ್ರಿ ಮಳೆಯ ರುದ್ರಾವತಾರ ತೀವ್ರವಾಗಿತ್ತಾದರೂ, ಗುರುವಾರ ಬೆಳಿಗ್ಗಿನಿಂದಲೇ ಗೋಣಿಕೊಪ್ಪಲು, ಪೆÇನ್ನಂಪೇಟೆ, ವೀರಾಜಪೇಟೆ ಭಾಗಗಳಲ್ಲಿ ಶಾಂತ ರೀತಿಗೆ ಮರಳಿದೆ.

ಗುರುವಾರ ಬೆಳಿಗ್ಗಿನಿಂದಲೇ ಮಳೆ ಆಗಿಂದಾಗ್ಗೆ ಸುರಿಯುತ್ತಿತ್ತು. ಗೋಣಿಕೊಪ್ಪಲು ಕೀರೆ ಹೊಳೆ ಭರ್ತಿಯಾಗಿ ಉಕ್ಕಿ ಹರಿಯುತ್ತಿದ್ದು, ಮೂರನೇ ವಿಭಾಗದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ತಿತಿಮತಿ, ಪೆÇನ್ನಂಪೇಟೆ, ಪಾಲಿಬೆಟ್ಟ, ಹುದಿಕೇರಿ, ಶ್ರೀಮಂಗಲ, ಬಾಳೆಲೆ, ಕಾನೂರು ಕುಟ್ಟ, ಬಿರುನಾಣಿ ಭಾಗಗಳಲ್ಲಿ ನಿನ್ನೆಯಷ್ಟು ಬಿರುಸಿನ ಮಳೆ ಕಂಡುಬರಲಿಲ್ಲ. ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು, ಅಲ್ಲಲ್ಲಿ ವಿದ್ಯುತ್ ತಂತಿ ತುಂಡಾದ ಕಾರಣ ವಿದ್ಯುತ್ ಸಮಸ್ಯೆ ಎದುರಾಗಿದೆ. ವೀರಾಜಪೇಟೆ, ಬೋಯಿಕೇರಿ, ಕೊಟ್ಟಳ್ಳಿ ಗ್ರಾಮದ ಕುಲ್ಲಚೆಟ್ಟೀರ ಕುಟುಂಬಸ್ಥರ ಗದ್ದೆ ಸಂಪೂರ್ಣ ಜಲಾವೃತಗೊಂಡಿದೆ. ವಿ ಬಾಡಗ ಗ್ರಾಮದ ಕಂಜಿತಂಡ ಚರ್ಮಣ ಅವರ ಮನೆಗೆ ತೆರಳುವ ರಸ್ತೆ ಬಿರುಕು ಬಿಟ್ಟು ಸಂಚಾರಕ್ಕೆ ಸಮಸ್ಯೆಯಾಗಿದೆ. ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಮಳೆ ಪರಿಹಾರ ನಿಧಿಯಿಂದ ಅನುದಾನ ಒದಗಿಸಿಕೊಡುವದಾಗಿ ಭರವಸೆ ನೀಡಿದ್ದಾರೆ.