ಭಾಗಮಂಡಲ, ಜೂ. 14: ನಿನ್ನೆ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ಭಗಂಡ ಕ್ಷೇತ್ರ ಭಾಗಮಂಡಲ ಸಂಪೂರ್ಣ ಮುಳುಗಡೆಗೊಂಡಿದೆ. ರಾತ್ರಿಯಿಡಿ ಧಾರಾಕಾರ ಮಳೆಯಾಗಿದ್ದು, ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾಗಮಂಡಲ ಪಟ್ಟಣ ಪೂರ್ಣ ಜಲಾವೃತವಾಗಿದ್ದು, ಭಗಂಡೇಶ್ವರ ದೇವಾಲಯದ ಮುಂಭಾಗದ ನಾಲ್ಕು ಮೆಟ್ಟಲಿನವರೆಗೆ ಪ್ರವಾಹ ನೀರು ಏರಿದೆ. (ಮೊದಲ ಪುಟದಿಂದ) ನಾಪೋಕ್ಲು ಹಾಗೂ ಮಡಿಕೇರಿ ಕಡೆಗಳಿಗೆ ಜನರಿಗೆ ತೆರಳಲು ದೋಣಿ ಹಾಗೂ ರ್ಯಾಫ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಹನ ಮುಳುಗಡೆ : ರಾತ್ರಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿದ್ದ ಬಸ್ಗಳು, ಜೀಪು, ಕಾರು, ಬೈಕ್ಗಳು ನೀರಿನಲ್ಲಿ ಬಹುತೇಕ ಮುಳುಗಡೆಯಾಗಿದ್ದವು. ಶಿವಶಂಕರ ವೈದ್ಯ ಅವರು ಇದನ್ನು ಗಮನಿಸಿ ಚಾಲಕರುಗಳನ್ನು ಎಬ್ಬಿಸಿ ವಾಹನಗಳನ್ನು ಅಲ್ಲಿಂದ ತೆರವುಗೊಳಿಸಲಾಯಿತು.
ತಾತ್ಕಾಲಿಕ ಅಂಗಡಿಗಳಿಗೆ ನೀರು ನುಗ್ಗಿ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋಗಿವೆ. ಜನ ಸಾಗಾಟಕ್ಕೆ ದೋಣಿ ವ್ಯವಸ್ಥೆ ಮಾಡಿದ್ದು, ಬೆಳಿಗ್ಗೆಯಿಂದ ಸುಮಾರು 15 ಟ್ರಿಪ್ ಮೂಲಕ ಜನರನ್ನು ಅತ್ತಿಂದಿತ್ತ ಸಾಗಿಸಲಾಗಿದೆ.
ಇತ್ತ ನಾಪೋಕ್ಲು ಕಡೆಗೆ ತೆರಳುವವರನ್ನು ರ್ಯಾಫ್ಟರ್ ಮೂಲಕ ಸಾಗಿಸಲಾಯಿತು. ಆದರೆ ರ್ಯಾಫ್ಟರ್ಗಳಿಗೆ ಅನುಭವದ ಕೊರತೆಯಿಂದಾಗಿ ಜನರು ರ್ಯಾಫ್ಟರ್ನಲ್ಲಿ ಕುಳಿತುಕೊಳ್ಳಲು ಭಯಪಡುತ್ತಿದ್ದ ಸನ್ನಿವೇಶ ಎದುರಾಯಿತು.
ಮಕ್ಕಳಾಟ : ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಲಾಗಿತ್ತಾದರೂ, ಮಳೆ ಇಲ್ಲದ ಕಾರಣ ಶಾಲಾ ಮಕ್ಕಳು ಪ್ರವಾಹದ ನೀರಿನಲ್ಲಿ ಆಟವಾಡುತ್ತಿದ್ದುದು ಕಂಡುಬಂತು.
ಭೂ ಕುಸಿತ : ಅಯ್ಯಂಗೇರಿ ರಸ್ತೆಯ ಕುಂಬೇರ ಅಂಗಡಿ ಬಳಿ ಭೂ ಕುಸಿತಗೊಂಡಿದ್ದು, ರಸ್ತೆ ಕಡೆಗೆ ಮಣ್ಣು ಜರಿಯುತ್ತಿದೆ. ದೊಡ್ಡಪುಲಿಕೋಟುವಿನ ತಂಡ್ರ ಹೊಳೆ ತುಂಬಿದ್ದು, ಅಲ್ಲಿಯೂ ಭೂ ಕುಸಿತವಾಗಿ ರಸ್ತೆಯಡಿಗೆ ಜರಿಯುತ್ತಿದೆ.