ತಿತಿಮತಿ, ಜೂ. 14: ಪ್ರಸಕ್ತ ವರ್ಷದ ಆರಂಭದ ಮುಂಗಾರು ಮಳೆ ದಕ್ಷಿಣ ಕೊಡಗಿನಲ್ಲಿ ತೀವ್ರ ಹಾನಿಯಂಟು ಮಾಡಿದೆ. ಈಗಾಗಲೇ ಪೆÀರುಂಬಾಡಿ- ಮಾಕುಟ್ಟ ಸಂಪರ್ಕ ಬಂದ್ ಆಗಿದ್ದು, ಕೇರಳ- ಕರ್ನಾಟಕದ ಪ್ರಮಖ ಸಂಚಾರಿ ವ್ಯವಸ್ಥೆಯನ್ನು ಏರು ಪೇರು ಮಾಡಿದೆ. ಇದೀಗ ತಿತಿಮತಿಯಲ್ಲಿ ಹಳೆಯ ಸೇತುವೆಯೊಂದು ಕುಸಿದಿದ್ದು ಹುಣಸೂರು-ಮೈಸೂರು ಸಂಪರ್ಕ ವ್ಯವಸ್ಥೆ ಈ ಮಾರ್ಗದಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ತೆರಳುತ್ತಿದ್ದ ಸಾವಿರಾರು ವಾಹನಗಳು ದೂರದ ಅನ್ಯ ಮಾರ್ಗ ಸಂಚಾರವನ್ನು ಅವಲಂಬಿಸುವ ಅನಿವಾರ್ಯತೆ ತಲೆದೋರಿದೆ.ತಿತಿಮತಿಯಲ್ಲಿ ಸೇತುವೆ ಕುಸಿತದಿಂದ ಗೋಣಿಕೊಪ್ಪಲು - ಮೈಸೂರು ಹೆದ್ದಾರಿ ಸಂಪರ್ಕ ಕಡಿತಗೊಂಡು, ಬದಲಿ ಮಾರ್ಗವಾಗಿ ವಾಹನಗಳು ಸಂಚರಿಸುವಂತಾಗಿದೆ.(ಮೊದಲ ಪುಟದಿಂದ) ಗುರುವಾರ ಮಧ್ಯಾಹ್ನ ಹೊತ್ತಿಗೆ ಘಟನೆ ಸಂಭವಿಸಿದೆ. ಈ ಮಾರ್ಗವಾಗಿ ಸಂಚರಿಸಬೇಕಾದ ವಾಹನಗಳು ಗೋಣಿಕೊಪಲು, ಪಾಲಿಬೆಟ್ಟ, ಘಟ್ಟದಳ್ಳ, ಮಾಲ್ದಾರೆ, ಪಿರಿಯಾಪಟ್ಟಣ ಮಾರ್ಗವಾಗಿ ಸಂಚರಿಸುತ್ತಿವೆÉ. ಮತ್ತೊಂದು ಮಾರ್ಗವಾಗಿ ಗೋಣಿಕೊಪ್ಪಲು, ಮಾಯಮುಡಿ, ಬಾಳೆಲೆ, ಕಾರ್ಮಾಡು, ಮೂರ್ಕಲ್, ನಾಗರಹೊಳೆ ಮಾರ್ಗವಾಗಿ ಹುಣಸೂರಿಗೆ ಸಂಚರಿಸುವಂತಾಗಿದೆ.ತಿತಿಮತಿ ಮುಖ್ಯ ರಸ್ತೆಯ ಬಾಳುಮಾನಿ ತೋಡಿನಿಂದ ಬರುವ ಹೊಳೆಗೆ ಲೋಕೋಪಯೋಗಿ ಇಲಾಖೆ ಮೂಲಕ ನೂತನ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಬುಧವಾರ ಸುರಿದ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ನೀರು ಸರಾಗವಾಗಿ ಹರಿಯದೆ ತಾತ್ಕಾಲಿಕ ಸೇತುವೆಯನ್ನು ಕೊಚ್ಚಿಕೊಂಡು ಸಾಗಿದೆ. ಇದರಿಂದಾಗಿ ವಾಹನಗಳು ಸಂಚರಿಸಲು ಆಗುತ್ತಿಲ್ಲ. ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳು ಓಡಾಡದಂತೆ ಕ್ರಮ ಕೈಗೊಂಡಿದ್ದಾರೆ. ಬ್ರಿಟೀಷರ ಕಾಲದ ಸೇತುವೆ ಇದಾಗಿದ್ದು, ಆ ಕಾಲದ ರಸ್ತೆಯ ಇತಿಹಾಸ ತೋರಿಸಲು ಈ ಸೇತುವೆ ಮಾಹಿತಿಗೆ ಪೂರಕವಾಗಿತ್ತು. ಆದರೆ ಕೆಲವು ವರ್ಷಗಳಿಂದ ಸೇತುವೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಶಾಸಕ ಹಾಗೂ ಸಂಸದರ ವಿಶೇಷ ಅನುದಾನದಿಂದ ರೂ. 6 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭಿಸಲಾಯಿತು. ಈ ಕಾರಣ ಸಮೀಪದಲ್ಲೇ ಮೈಸೂರು ಮಾರ್ಗಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಕ್ಕೆ ಪೂರಕವಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಗುರುವಾರ ಸುರಿದ ಮಳೆಗೆ ಸೇತುವೆ ಕುಸಿದು ಬಿದ್ದಿದೆ. ಹೆಚ್ಚು ಸಿಮೆಂಟ್ ಬಳಸದೆ ಕಳಪೆ ಕಾಮಗಾರಿ ಮಾಡಿದ್ದರ ಪರಿಣಾಮ ಸೇತುವೆ ಕುಸಿದು ಬೀಳಲು ಕಾರಣವಾಗಿದೆ ಎಂದು ಜಿ.ಪಂ. ಸದಸ್ಯರಾದ ಪಂಕಜ ಆರೋಪಿಸಿದ್ದಾರೆ. ಮೈಸೂರು ಮಾರ್ಗಕ್ಕೆ ತೆರಳಲು ಮತ್ತು ಮೈಸೂರು, ಹುಣಸೂರು, ಪಿರಿಯಾಪಟ್ಟಣ ಮಾರ್ಗದಿಂದ ಕೊಡಗಿಗೆ ಪ್ರವೇಶಿಸಲು ಸಹ ತೊಡಕಾಗಿದೆ. ಸಮೀಪದ ಗ್ರಾಮಗಳಾದ ದೇವಮಚ್ಚಿ, ಮರೂರು, ಬಾಳುಮಾನಿ, ಮಜ್ಜಿಗೆಹಳ್ಳ ಹಾಗೂ ಮತ್ತಿಗೋಡು ಗ್ರಾಮಕ್ಕೆ ತೆರಳುವ ಸಾವಿರಾರು ನಾಗರಿಕರಿಗೆ ಇದರಿಂದ ತೊಂದರೆಯಾಗಿದ್ದು ನಡೆದುಕೊಂಡೆ ಮನೆ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ.
ಸೇತುವೆ ಕುಸಿದ ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಸದಸ್ಯರುಗಳಾದ ಅನುಪ್ ಹಾಜರಿದ್ದರು. ಮಾಹಿತಿ ತಿಳಿದ ಪೊನ್ನಂಪೇಟೆ ರೆವಿನ್ಯೂ ಇಲಾಖೆಯ ಅಧಿಕಾರಿಗಳಾದ ರಾಧಾಕೃಷ್ಣ, ಮಂಜುನಾಥ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಮೀಪದಲ್ಲಿ ನೂತನ ಸೇತುವೆ ಕಾರ್ಯ ನಡೆಸುತ್ತಿದ್ದ ಗುತ್ತಿಗೆದಾರ ಹಾಗೂ ಕಾರ್ಮಿಕರ ಸಹಾಯದಿಂದ ಬಿರುಕು ಬಿಟ್ಟಿದ್ದ ಸೇತುವೆಯನ್ನು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರಾದರೂ ಹೊಳೆಯಲ್ಲಿ ರಭಸದಿಂದ ಬರುತ್ತಿದ್ದ ನೀರನ್ನು ತಡೆಯಲಾಗದೆ ಸೇತುವೆ ದುರಸ್ತಿ ಕಾರ್ಯ ಸಾಧ್ಯವಾಗಲಿಲ್ಲ. ಅನ್ಯ ಮಾರ್ಗವಿಲ್ಲದೆ ಮುಂದಾಗ ಬಹುದಾದ ಅನಾಹುತವನ್ನು ತಪ್ಪಿಸುವ ಸಲುವಾಗಿ ರಸ್ತೆ ಸಂಚಾರವನ್ನು ಸ್ಥಗಿತ ಗೊಳಿಸಲಾಯಿತು.
ಗೋಣಿಕೊಪ್ಪಲು - ಮೈಸೂರು ರಾಜ್ಯ ಹೆದ್ದಾರಿಯಾಗಿರುವದರಿಂದ ದಿನಂಪ್ರತಿ ಸಾವಿರಾರು ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಮಳೆಯೊಂದಿಗೆ ನೀರಿನ ಪ್ರಮಾಣ ಕಡಿಮೆಯಾದರೆ ಕಲ್ಲು, ಮಣ್ಣು ಹಾಕಿ ಮತ್ತೆ ರಸ್ತೆಯಲ್ಲಿ ಸಂಚರಿಸಲು ಅವಕಾಶ ಸಿಗಲಿದೆ. ಮಳೆಗಾಲಕ್ಕೂ ಮುನ್ನ ಕುಸಿಯುವ ಆತಂಕವನ್ನು ತಿತಿಮತಿ ಗ್ರಾಮ ಪಂಚಾಯ್ತಿ ಸದಸ್ಯ ಎನ್. ಎನ್. ಅನೂಪ್ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ಮಳೆ ಹೆಚ್ಚಾದ ಕಾರಣ ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಜೆಸಿಬಿ ಮೂಲಕ ಮಣ್ಣು ಹಾಕಿ ದುರಸ್ತಿ ಕಾರ್ಯ ನಡೆಯುತ್ತಿದೆ.
(ವರದಿ: ಸುದ್ದಿಪುತ್ರ, ಎನ್.ಎನ್. ದಿನೇಶ್, ಜಗದೀಶ್)