ಮಡಿಕೇರಿ, ಜೂ. 14: ಕರ್ನಾಟಕ - ಕೇರಳ ನಡುವೆ ಸಂಪರ್ಕ ಕಲ್ಪಿಸುವ ಕೊಡಗಿನ ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಬ್ರಹ್ಮಗಿರಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಹೆದ್ದಾರಿಯಲ್ಲಿ ತಾ. 12 ರಂದು ರಾತ್ರಿ ಸಂಭವಿಸಿರುವ ಸರಣಿ ಭೂ ಕುಸಿತದಿಂದ ಗಡಿಭಾಗದಲ್ಲಿ ಭಯಾನಕ ದೃಶ್ಯದೊಂದಿಗೆ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಪರಿಣಾಮ ಪೆರುಂಬಾಡಿಯಿಂದ ಜಿಲ್ಲೆಯ ಗಡಿ ಮಾಕುಟ್ಟ ತನಕ ಜಿಲ್ಲಾಡಳಿತ ಸಂಪೂರ್ಣ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹೆದ್ದಾರಿಗೆ ಹೊಂದಿ ಕೊಂಡಿರುವ ಕೊಡಗಿನ ಹೆಗ್ಗಳ ಮತ್ತು ಆಚೆಗೆ ಕೇರಳದ ಪಾಯಂ ಗ್ರಾ.ಪಂ. ವ್ಯಾಪ್ತಿಯ ಜನತೆ ಭಯದಿಂದ ನಲುಗಿ ಹೋಗಿದ್ದಾರೆ.ತಾ. 12 ರಂದು ಸುರಿದ ಧಾರಾಕಾರ ಮಳೆಯೊಂದಿಗೆ ವರುಣನ ರೌದ್ರ ನರ್ತನದಿಂದ ಈ ಹೆದ್ದಾರಿಯ ಐವತ್ತಕ್ಕೂ ಅಧಿಕ ಕಡೆಗಳಲ್ಲಿ ಭೂಕುಸಿತದಿಂದ ಭಾರೀ ಗಾತ್ರದ ಮರಗಳು ಅಲ್ಲಲ್ಲಿ ಮಣ್ಣಿನ ರಾಶಿ ಯೊಂದಿಗೆ ರಸ್ತೆಯನ್ನು ಆಕ್ರಮಿಸಿ ಕೊಂಡಿದೆ. ಪಕ್ಕದ ಹೊಳೆಯಲ್ಲಿ ಪ್ರವಾಹದೊಂದಿಗೆ ಹರಿದ ನೀರಿನಲ್ಲಿ ರಾಶಿ ರಾಶಿ ಮರಗಳು ಬುಡಮೇಲಾಗಿ ಕೊಚ್ಚಿ ಹೋಗಿವೆ. ಈ ರೀತಿ ಗಜಗಾತ್ರದ ಮರಗಳು ಮಾಕುಟ್ಟ ಸೇತುವೆಗೆ ಅಪ್ಪಳಿಸಿವೆ. ಅಷ್ಟರಲ್ಲಿ ಸೇತುವೆಯಡಿ ನೀರು ಅಣೆಕಟ್ಟೆಯಂತೆ ತಡೆ ಹಿಡಿಯಲ್ಪಟ್ಟು ಒಂದಿಷ್ಟು ಮರಗಳ ಬೃಹತ್ ದಿಮ್ಮಿಗಳು ಅಕ್ಕಪಕ್ಕದ ಮನೆ, ಹೊಟೇಲ್‍ಗಳಿಗೆ ನೀರಿನ ಪ್ರವಾಹದೊಂದಿಗೆ ಹೊಡೆತ ನೀಡಿವೆ.

ಈ ಸಂದರ್ಭ ಅಲ್ಲಿನ ನಾಲ್ಕೈದು ಹೊಟೇಲ್‍ಗಳ ಸಹಿತ ಮನೆಗಳು ಜಲಾವೃತಗೊಂಡು ಇಡೀ ಪ್ರದೇಶದ ವಿದ್ಯುತ್ ಸ್ಥಗಿತಗೊಂಡು ಅತ್ಯಂತ ಆಘಾತಕಾರಿ ಸನ್ನಿವೇಶ ಸೃಷ್ಟಿಯಾಗಿದೆ. ಗಡಿ ಪ್ರದೇಶದ ಹೆದ್ದಾರಿಯ ನಡುವೆ ವಿದ್ಯುತ್ ಕಂಬಗಳು ಬುಡಮೇಲಾಗಿ ತಂತಿಗಳು ರಸ್ತೆಯಲ್ಲಿ ಹರಡಿಕೊಂಡಿವೆ. ಸದಾ ಕೇರಳ - ಕೊಡಗು ನಡುವೆ ಸಂಚರಿಸುತ್ತಿದ್ದ ಸರಕು ಸಾಗಾಣಿಕೆ ಲಾರಿಗಳ ಸಹಿತ ಇತರ ವಾಹನಗಳು, ಅಲ್ಲಲ್ಲಿ ಭೂಕುಸಿತ ಪ್ರದೇಶಗಳಲ್ಲಿ ದಟ್ಟಾರಣ್ಯ ಮಾರ್ಗದಲ್ಲೇ ಸಿಲುಕಿಕೊಂಡಿವೆ.

ಲಾರಿಯೊಂದರ ಕಾರ್ಮಿಕ ಶರತ್ ಮಣ್ಣಿನಡಿ ಪ್ರಾಣ ಕಳೆದು ಕೊಂಡರೆ, ಇನ್ನೋರ್ವ ಕಾರ್ಮಿಕ ಬೈಜು ಎಂಬಾತನ ತಲೆಯು ಮಾರಣಾಂತಿಕ ಗಾಯದೊಂದಿಗೆ ಕಣ್ಣೂರು ಆಸ್ಪತ್ರೆ ಸೇರಿದ್ದಾನೆ. ಬೆಂಗಳೂರಿನಿಂದ ಕಣ್ಣೂರಿನಲ್ಲಿ ರಂಜಾನ್ ಹಬ್ಬಕ್ಕೆ ಹೊರಟಿದ್ದ ಅಶ್ರಫ್ ಎಂಬವರ ಕಾರು (ಕೆ.ಎಲ್. 13 - ಎಡಿ 4214) ಆಯತಪ್ಪಿ ಪ್ರಪಾತಕ್ಕೆ ಬಿದ್ದರೂ, ಅದರೊಳಗಿದ್ದ ಮಗು ಸಹಿತ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಭಯಾನಕ ದೃಶ್ಯ : ಈ ನಡುವೆ ಮಾಕುಟ್ಟ ಸೇತುವೆಯ ಅಕ್ಕಪಕ್ಕ ಹೊಟೇಲ್‍ಗಳನ್ನು ನಡೆಸುತ್ತಿರುವ ಅಬ್ದುಲ್ಲಾ, ವಿನೇಶ್ ಅಂಬು ಎಂಬವರು ಹೊಟೇಲ್‍ಗಳಿಗೆ ಪ್ರವಾಹ ಅಪ್ಪಳಿಸಿ ನಿತ್ಯೋಪಯೋಗಿ ವಸ್ತುಗಳು ಕೊಚ್ಚಿ ಹೋಗಿವೆ. ಹೊಳೆಯಲ್ಲಿ ತೇಲಿ ಬಂದ ಮರದ ತುಂಡುಗಳು ಕೆಸರು ಸಹಿತ ಇಡೀ ಕಟ್ಟಡ ಆವರಿಸಿಕೊಂಡು ಕುಟುಂಬದ ಬದುಕನ್ನು ಜರ್ಜರಿತವನ್ನಾಗಿಸಿದೆ. ಕಳೆದ 25 ವರ್ಷಗಳಿಂದ ಪ್ರಯಾಣಿಕರ ವಾಹನಗಳನ್ನು ತೊಳೆದುಕೊಟ್ಟು ಜೀವನ ಸಾಗಿಸುತ್ತಿದ್ದ ಶ್ರೀನಿವಾಸ್ (72) ಎಂಬವರ ಗುಡಿಸಲು ಸಂಪೂರ್ಣ ನಾಶಗೊಂಡಿದೆ. ಮೂರು ದಿನಗಳಿಂದ ಅಲ್ಲಿನ ನಿವಾಸಿಗಳು ಹೊಟ್ಟೆ ಪಾಡಿಗೆ ತುತ್ತು ಅನ್ನಕ್ಕೂ ಪರದಾಡುತ್ತಾ ಕಂಗಾಲಾಗಿರುವ ದೃಶ್ಯ ಗೋಚರಿಸತೊಡಗಿದೆ.

ಮರಗಳ ತೆರವು : ಮಾಕುಟ್ಟ ಹೆದ್ದಾರಿಯಲ್ಲಿ ಬುಡಮೇಲಾಗಿರುವ ಮರಗಳ ತೆರವು ಕಾರ್ಯವನ್ನು ಕೇಂದ್ರದ ಎನ್‍ಡಿಆರ್‍ಎಫ್ ತಂಡ ಕಮಾಂಡರ್ ಬಿ. ಹರಿಸಿಂಗ್ ನೇತೃತ್ವದಲ್ಲಿ ಕ್ಷಿಪ್ರಗತಿಯಲ್ಲಿ ಮಾಡತೊಡಗಿದೆ. ಹೀಗಿದ್ದೂ ಮತ್ತೆ ಮತ್ತೆ ಭೂಕುಸಿತದಿಂದ ಅನಾಹುತಗಳು ಎದುರಾಗುತ್ತಲೇ ಇವೆ. ಈ ತಂಡಕ್ಕೆ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ಮತ್ತು ತಾಲೂಕು ತಹಶೀಲ್ದಾರ್ ಸಹಿತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದೆ. ಪೆರುಂಬಾಡಿ - ಮಾಕುಟ್ಟ ನಡುವೆ ಗೇಟ್‍ಗಳಲ್ಲಿ ಪೊಲೀಸ್ ಇಲಾಖೆ ಕಣ್ಗಾವಲು ಇರಿಸಿ ವಾಹನಗಳ ಸಂಚಾರದಿಂದ ಅಪಾಯ ಎದುರಾಗದಂತೆ ನಿಗಾ ವಹಿಸಿದೆ.

ಕೇರಳ ಸಚಿವರ ಭೇಟಿ : ಈ ನಡುವೆ ಇಂದು ಕೇರಳದ ಕಂದಾಯ ಸಚಿವ

(ಮೊದಲ ಪುಟದಿಂದ) ಚಂದ್ರಶೇಖರ್ ನಿನ್ನೆ ಭೂಕುಸಿತದಿಂದ ಸಾವನ್ನಪ್ಪಿದ ಮಾಕುಟ್ಟ ಗಡಿಗ್ರಾಮ ಪಾಯಂನ ಶರತ್ ಹಾಗೂ ಮಳೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳನ್ನು ಖುದ್ದು ಭೇಟಿಯಾಗಿ ಸಾಂತ್ವನ ಹೇಳಿದರು.

ಸುನಿಲ್ ಭೇಟಿ : ಇತ್ತ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್, ತಾ.ಪಂ. ಸದಸ್ಯ ಕುಟ್ಟಂಡ ಅಜಿತ್, ಬೇಟೋಳಿ ಗ್ರಾ.ಪಂ. ಸದಸ್ಯ ಉಮ್ಮಾರ್ ಸೇರಿದಂತೆ ಕೇರಳ ರಾಜ್ಯ ಬಿಜೆಪಿ ಮುಖಂಡರಾದ ರಂಜಿತ್, ಚಂದ್ರ, ಪ್ರಕಾಶ್, ವೇಲಾಯುಧನ್ ಸೇರಿದಂತೆ ಇತರರು ಜಂಟಿಯಾಗಿ ಗಡಿ ಸಂಕಷ್ಟ ಪರಿಶೀಲಿಸಿ ಅಲ್ಲಿನ ಜನತೆಗೆ ಧೈರ್ಯ ತುಂಬಿದರು. ಇಂದು ಮಳೆಯ ಸ್ವಲ್ಪ ಬಿಡುವಿನ ಪರಿಣಾಮ ಎನ್‍ಡಿಆರ್‍ಎಫ್ ಹೆದ್ದಾರಿ ಭೂಕುಸಿತದ ತೆರವು ಕಾರ್ಯ ಚುರುಕುಗೊಳಿಸಿದ ದೃಶ್ಯ ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಗೆ ಎದುರಾಯಿತು.

ಮುಂದುವರಿದ ಅಪಾಯ: ಮಾಕುಟ್ಟ ಹೆದ್ದಾರಿ ಬಂದ್ ಆಗಿರುವ ಆತಂಕದ ನಡುವೆ ಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳಲು ಕೂಡ ತೊಡಕು ಎದುರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಕುಟ್ಟದಿಂದ ಕಲ್ಫೆಟ್ಟ ತನಕ ಪ್ರಯಾಣಮಾಡಬಹುದಾಗಿದ್ದು, ಮುಂದೆ ತಾಮರ್‍ಚೇರಿ ಘಾಟ್‍ನಲ್ಲಿಯೂ ಭೂಕುಸಿತದಿಂದ ರಸ್ತೆ ಬಂದ್ ಆಗಿರುವದಾಗಿ ಸುಳಿವು ದೊರಕಿದೆ. ಪರಿಣಾಮ ಉಭಯ ಮಾರ್ಗಗಳಲ್ಲಿ ಕೊಡಗು - ಕೇರಳ ಸಂಪರ್ಕ ಕಡಿತಗೊಂಡಿದೆ.

ರೂ. 4 ಕೋಟಿ ಪ್ರಸ್ತಾಪ : ಈಗಿನ ಮಳೆಗಾಲದ ಪರಿಸ್ಥಿತಿ ನಡುವೆ ಮಾಕುಟ್ಟ ಹೆದ್ದಾರಿಯ ಒಂದೆಡೆ ರಸ್ತೆ ಕುಸಿತ, ಹಾನಿಗೊಂಡಿರುವ ಸೇತುವೆ, ಅಲ್ಲಲ್ಲಿ ಭೂಕುಸಿತದಿಂದ ಸಂಭವಿಸಿರುವ ಭಾರಿ ಹಾನಿಯನ್ನು ಸರಿಪಡಿಸಲು ಅಸಾಧ್ಯವಿದ್ದು, 4 ತಿಂಗಳ ಮಳೆಯ ಬಳಿಕ ದುರಸ್ಥಿ ಸಾಧ್ಯವೆಂದು ಲೋಕೋಪಯೋಗಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಸಲುವಾಗಿ ರೂ. 4 ಕೋಟಿ ಹಣ ಒದಗಿಸಿ ಕಾಮಗಾರಿಗೆ ಸಹಕರಿಸುವಂತೆ ಕರ್ನಾಟಕ ಲೋಕೋಪಯೋಗಿ ಸಚಿವಾಲಯಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.

(ಪ್ರತ್ಯಕ್ಷ ವರದಿ : ಶ್ರೀಸುತ)