ಗೋಣಿಕೊಪ್ಪ ವರದಿ, ಜೂ. 15: ಸಂಪರ್ಕ ಕಳೆದುಕೊಂಡಿದ್ದ ಗೋಣಿಕೊಪ್ಪ-ಮೈಸೂರು ಹೆದ್ದಾರಿಯಾಲ್ಲಿ ಲಘು ವಾಹನಗಳು ಸಂಚರಿಸುವಂತಾಗಿದೆ. ತಿತಿಮತಿಯಲ್ಲಿ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿದ್ದ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಬಸ್ ಸೇರಿದಂತೆ ಭಾರೀ ವಾಹನಗಳು ಶನಿವಾರದಿಂದ ಸಂಚರಿಸುವಂತೆ ಮಾಡಲು ಕಾಮಗಾರಿ ನಡೆಯುತ್ತಿದೆ.

ಮಹಾಮಳೆಗೆ ತಿತಿಮತಿ ಮೂಲಕ ಹರಿಯುವ ನದಿಯಲ್ಲಿ ನೀರು ಹರಿಯಲಾಗದೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಸಂಚಾರಕ್ಕೆ ತೊಡಕುಂಟಾಗಿತ್ತು. ಪರಿಣಾಮ ಗೋಣಿಕೊಪ್ಪ – ಮೈಸೂರು ಹೆದ್ದಾರಿಯಾದ ಕಾರಣ ವಾಹನಗಳು ಸಂಚರಿಸಲಾಗದೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತಾಗಿತ್ತು. ಗುರುವಾರ ರಾತ್ರಿ ಲೋಕೋಪಯೋಗಿ ಇಲಾಖೆ ಮೂಲಕ ಜರಿದಿದ್ದ ಸೇತುವೆಗೆ ಕಲ್ಲು ಹಾಕಿ ಮತ್ತೆ ಲಘು ವಾಹನಗಳು ಓಡಾಡಲು ಅವಕಾಶ ಮಾಡಲಾಗಿತ್ತು. ಇದೀಗ ಶನಿವಾರದಿಂದ ಬಸ್ ಸೇರಿದಂತೆ ಭಾರೀ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಇಂದು ಘಟನೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ವೇಳೆ ಗುತ್ತಿಗೆ ಸಂಸ್ಥೆಯ ಸುರೇಶ್ ಮಾಹಿತಿ ನೀಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೂ. 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯನ್ನು ಮುಂದಿನ ಒಂದು ತಿಂಗಳೊಳಗೆ ಪೂರೈಸಲಾಗುವದು ಎಂದರು.

ಮೊನ್ನೆಯ ವಿಪರೀತ ಮಳೆಯಿಂದ ನಿನ್ನೆ ಮಧ್ಯಾಹ್ನ ಈ ಸೇತುವೆ ಬಳಿ ವಾಹನಗಳ ಸಂಚಾರಕ್ಕೆ ಪರ್ಯಾಯವಾಗಿ ಕಲ್ಪಿಸಿದ ಮಾರ್ಗಕ್ಕೆ ಹಾನಿಯಾಗಿದ್ದು, ಇಂದು ದುರಸ್ತಿ ಮಾಡಲಾಗಿದ್ದು, ಲಘು ವಾಹನಗಳಿಗೆ ಅವಕಾಶ ಕಲ್ಪಿಸಿರುವದಾಗಿ ನುಡಿದರು. ತಾ. 16 ರಿಂದ (ಇಂದಿನಿಂದ) ಬಸ್‍ಗಳನ್ನು ಬಿಡುವದಾಗಿಯೂ ಮಾರ್ನುಡಿದರು.

ಈ ವೇಳೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ತ್ವರಿತ ಗಮನ ಹರಿಸುವಂತೆ ಸಲಹೆ ನೀಡಿದರು. ಅವರೊಂದಿಗೆ ನಾಗರಿಕ ಪ್ರಮುಖರಾದ ಕೊಲ್ಲಿರ ಉಮೇಶ್, ಸಣ್ಣುವಂಡ ಶ್ರೀನಿವಾಸ್ ಹಾಜರಿದ್ದರು. ಹೆದ್ದಾರಿ ಸೇತುವೆಯ ಕಾಮಗಾರಿ ವಿಳಂಬದಿಂದ ಎದುರಾಗಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.