ಸೋಮವಾರಪೇಟೆ,ಜೂ.11: ಭಾರೀ ಮಳೆ-ಗಾಳಿಯ ನಡುವೆಯೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಇಂದು ಬೆಳಗ್ಗಿನಿಂದಲೇ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ತಹಸೀಲ್ದಾರ್ ವೀರೇಂದ್ರ ಬಾಡ್ಕರ್, ಕಂದಾಯ ನಿರೀಕ್ಷಕ ವಿನು, ಗ್ರಾಮ ಲೆಕ್ಕಿಗರಾದ ಹೇಮಾವತಿ, ಮೋಹನ್ ಅವರು ಗಳೊಂದಿಗೆ, ಮನೆಗೆ ಹಾನಿಯಾಗಿರುವ ಹಾನಗಲ್ಲು ಬಾಣೆ, ಸಿದ್ದಾರ್ಥ ಬಡಾವಣೆ, ಬಜೆಗುಂಡಿ ಗ್ರಾಮಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದರು.
ಸಿದ್ಧಾರ್ಥ ಬಡಾವಣೆಯಲ್ಲಿ ಪಕ್ಕದ ಕಾಫಿ ತೋಟದಿಂದ ಬೃಹತ್ ಗಾತ್ರದ ಮರ ಬಿದ್ದು, ಮನೆಗೆ ಭಾಗಶಃ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಜನವಸತಿ ಪ್ರದೇಶಗಳಲ್ಲಿ ಮನೆಗಳಿಗೆ ಹಾನಿಯಾಗು ವಂತೆ ಮರಗಳಿದ್ದರೆ ತಕ್ಷಣ ತೆರವುಗೊಳಿಸಬೇಕು. ಸಂಬಂಧಿಸಿದ ತೋಟ ಮಾಲೀಕರು ಗಳಿಗೆ ನೋಟೀಸ್ ನೀಡಬೇಕು. ಈ ಕಾರ್ಯ ತುರ್ತು ಆಗಬೇಕೆಂದು ಕಂದಾಯ ನಿರೀಕ್ಷಕ ವಿನು ಅವರಿಗೆ ಸೂಚಿಸಿದರು.
ಪಿಡಿಓ ವಿರುದ್ಧ ಗರಂ: ಬಜೆಗುಂಡಿ ಗ್ರಾಮದಲ್ಲಿ ಬರೆ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಶಾಸಕರು ಭೇಟಿ ನೀಡಿದ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಥಳದಲ್ಲಿ ಇಲ್ಲದ್ದರಿಂದ ಶಾಸಕರು ಗರಂ ಆದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಅವರನ್ನು ಉದ್ದೇಶಿಸಿ “ಏನೂಂತ ತಿಳ್ಕೊಂಡ್ಬಿಟ್ರಿ ನೀವು, ನಾವು ಬಂದಾಗ ಬರೋಕಾಗೊಲ್ವ? ನಿಮ್ ಡ್ಯೂಟಿ ಇದು, ಗ್ರಾ.ಪಂ.ನಲ್ಲಿ ತೊಂದರೆ ಆದ್ರೆ ನೀವೇ ಜವಾಬ್ದಾರಿ ತಗೋಬೇಕು, ಮಳೆಯಲ್ಲಿ ಜನರ ಅಹವಾಲು ಕೇಳೋಕೆ ಬಂದ್ರೆ ನೀವು ಅಷ್ಟು ಬೇಗ ಆಫೀಸ್‍ಗೆ ಓಡೋಗಿದೀರಾ? ಬೇಜವಾಬ್ದಾರಿ ತೋರಿದ್ರೆ ಸಸ್ಪೆಂಡ್ ಮಾಡ್ಬೇಕಾಗುತ್ತೆ” ಎಂದು ಎಚ್ಚರಿಸಿದರು.
ಉದ್ಯೋಗ ಖಾತ್ರಿ ಯೋಜನೆ ಯಡಿ ಅಗತ್ಯವಿರುವ ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಕೈಗೊಳ್ಳಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಭಾರೀ ಮಳೆಯ ನಡುವೆಯೂ ಗ್ರಾಮಕ್ಕೆ ಶಾಸಕರು ಆಗಮಿಸಿ ಅಹವಾಲು ಆಲಿಸಿದ್ದನ್ನು ಹಲವರು ಅಭಿನಂದಿಸಿದರು.
ತಹಸೀಲ್ದಾರ್ ಕಾಳಜಿ: ತಹಸೀಲ್ದಾರ್ ವೀರೇಂದ್ರ ಅವರೂ ಸಹ ಶಾಸಕರೊಂದಿಗೆ ತೆರಳಿ ಅಹವಾಲು ಸ್ವೀಕರಿಸಿದರು. ಇಲ್ಲಿನ ಆಲೇಕಟ್ಟೆ ಬಳಿ ಮನೆಗಳಿಗೆ ನೀರು ನುಗ್ಗಿದ್ದ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ವೀರೇಂದ್ರ ಬಾಡ್ಕರ್, ಸಂತ್ರಸ್ಥರೋರ್ವರಿಗೆ ತಮ್ಮ ಕೈಯಿಂದ ಹಣ ಕೊಡಲು ಮುಂದಾದರು. ಅಧಿಕಾರಿಯ ದೊಡ್ಡಗುಣವನ್ನು ಹೊಗಳಿದ ಸಂತ್ರಸ್ಥರು ಹಣವನ್ನು ಸ್ವೀಕರಿಸಲು ನಿರಾಕರಿಸಿದರು.
24 ಗಂಟೆಯೂ ಅಲರ್ಟ್ ಆಗಿರಲು ಸೂಚನೆ: ನಂತರ ಶಾಸಕರ ಕಚೇರಿಯಲ್ಲಿ ವಿವಿಧ ಇಲಾಖಾಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕ ರಂಜನ್, ಮಳೆ ಗಾಳಿ ಅಧಿಕವಿರುವದರಿಂದ ಅಧಿಕಾರಿಗಳು ದಿನದ 24 ಗಂಟೆಯೂ ‘ಅಲರ್ಟ್’ ಆಗಿರಬೇಕೆಂದು ಸೂಚಿಸಿದರು.
ತಕ್ಷಣ ರಸ್ತೆ ಬದಿಯಲ್ಲಿ ಚರಂಡಿಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು. ರಸ್ತೆಯ ಮೇಲೆ ಬೀಳುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಅರಣ್ಯ ಇಲಾಖೆಯವರು ಬರುವವರೆಗೂ ಕಾಯಬಾರದು ಎಂದು ಜಿ.ಪಂ. ಹಾಗೂ ಲೋಕೋಪಯೋಗಿ ಇಲಾಖಾ ಅಭಿಯಂತರರಿಗೆ ಸೂಚಿಸಿದರು.
ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ತಂತಿಗಳು, ಟ್ರಾನ್ಸ್ ಫಾರ್ಮರ್‍ಗಳನ್ನು ದಾಸ್ತಾನಿರಿಸಬೇಕು. ದೂರುಗಳು ಬಂದೊಡನೇ ಯಾವದೇ ಸಬೂಬು ನೀಡದೇ ಸ್ಪಂದಿಸಬೇಕು ಎಂದು ವಿದ್ಯುತ್ ಇಲಾಖಾಧಿಕಾರಿಗೆ ನಿರ್ದೇಶನ ನೀಡಿದರು. ವಿದ್ಯುತ್ ಇಲಾಖೆಯವರು ಇನ್ನಷ್ಟು ಚುರುಕಾಗಬೇಕು. ಲೈನ್‍ಮೆನ್, ಕಿರಿಯ ಅಭಿಯಂತರರು ಹೆಚ್ಚಿನ ಶ್ರಮ ವಹಿಸಬೇಕು. ವಿದ್ಯುತ್ ಲೈನ್ ಕ್ಲೀಯರ್ ಮಾಡಿ ತ್ವರಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಶೇಷ ಅನುದಾನಕ್ಕಾಗಿ ಸರ್ಕಾರಕ್ಕೆ ಒತ್ತಡ: ಪ್ರಕೃತಿ ವಿಕೋಪಗಳಿಂದ ಕೊಡಗಿನಾದ್ಯಂತ ಹಲವಷ್ಟು ಹಾನಿಗಳು ಸಂಭವಿಸುತ್ತಿದ್ದು, ಪರಿಹಾರ ಕ್ರಮಗಳಿಗಾಗಿ ವಿಶೇಷ ಅನುದಾನ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವದಾಗಿ ಶಾಸಕ ರಂಜನ್ ತಿಳಿಸಿದರು. ಹಾನಿ ಪ್ರಕರಣಗಳ ಸಮಗ್ರ ವರದಿ ತಯಾರಿಸಿ ಸರ್ಕಾರ ಮತ್ತು ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯಲಾಗುವದು ಎಂದು ‘ಶಕ್ತಿ’ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ತಹಸೀಲ್ದಾರ್ ವೀರೇಂದ್ರ ಬಾಡ್ಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಿಟ್ಟಿಯಪ್ಪ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ರಘುಕುಮಾರ್, ವೆಂಕಟೇಶ್ ನಾಯಕ್, ಶೈಜನ್ ಕೆ. ಪೀಟರ್, ಪಂಚಾಯತ್ ರಾಜ್ ಇಲಾಖೆಯ ಜಯರಾಮ್, ಭಾಸ್ಕರ್, ಜಿ.ಪಂ. ಅಭಿಯಂತರ ವೀರೇಂದ್ರ ಸೇರಿದಂತೆ ಇತರ ಇಲಾಖಾಧಿಕಾರಿಗಳು, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸದಸ್ಯೆ ಸುಶೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.