ಕೂಡಿಗೆ, ಜೂ. 11 : ಕೂಡಿಗೆ ಸೈನಿಕ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ 10 ಮಂದಿ ಡಿ ದರ್ಜೆಯ ನೌಕರರನ್ನು ಮೇ.30 ಕ್ಕೆ ಗುತ್ತಿಗೆ ಮುಗಿದಿದೆ ಎಂದು ಏಕಾಏಕಿ ಕೆಲಸದಿಂದ ತೆಗೆದ ಹಿನ್ನೆಲೆಯಲ್ಲಿ ಸೋಮವಾರ ಹತ್ತು ಮಂದಿ ನೌಕರರು ಮತ್ತು ಅವರ ಕುಟುಂಬಸ್ಥರು ಸುರಿಯುತ್ತಿರುವ ಮಳೆಯ ನಡುವೆಯೂ ಸೈನಿಕ ಶಾಲೆಯ ಎದುರು ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸಿದರು.

ಸೈನಿಕ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ 13 ಮಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಅವಧಿ ಪೂರ್ಣಗೊಂಡಿದೆ ಎಂದು ಹತ್ತು ಮಂದಿಯನ್ನು ಕೆಲಸದಿಂದ ಕೈಬಿಟ್ಟಿದ್ದು, ಮೂವರಿಗೆ ಮಾತ್ರ ಉದ್ಯೋಗವನ್ನು ನೀಡಿದ್ದಾರೆ. ಇದರಿಂದ ನಮ್ಮ ಬದುಕು ಅತಂತ್ರವಾಗಿದೆ. ತಕ್ಷಣ ಸೈನಿಕ ಶಾಲೆಯ ಆಡಳಿತ ಮಂಡಳಿ ಡಿ ದರ್ಜೆ ಹುದ್ದೆಯ ಗುತ್ತಿಗೆ ಅವಧಿಯನ್ನು ನವೀಕರಿಸುವ ಮೂಲಕ ಆರು ವರ್ಷಗಳಿಂದ ದುಡಿಯುತ್ತಿರುವ ನಮಗೆ ಮತ್ತೆ ಉದ್ಯೋಗ ಕಲ್ಪಿಸಬೇಕು ಎಂದು ಸೈನಿಕ ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರನ್ನು ಸತ್ಯಾಗ್ರಹ ನಿರತರು ಒತ್ತಾಯಿಸಿದರು.

ಮಧುಕುಮಾರ್, ಪ್ರಶಾಂತ್, ಬಿ.ಪಿ.ಕಿರಣ್, ಕೆ.ಎಸ್.ರವಿ, ಎಸ್.ಸಿ.ಚಂದ್ರಕುಮಾರ್, ತೇಜಮೂರ್ತಿ, ಗಜೇಂದ್ರ, ಕಣ್ಣನ್, ಮೋಹನ್, ಮಧು ಹಾಗೂ ಅವರ ಕುಟುಂಬಸ್ಥರು ಉಪವಾಸ ಧರಣಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿ ಪ್ರಸಾದ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ. ಭೋಗಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್. ಮಂಜುಳಾ, ಸ್ಥಳೀಯ ಪ್ರಮುಖರಾದ ಶಶಿಕಿರಣ್, ಮಂಜುನಾಥ್, ಆರ್.ಕೆ. ಕೃಷ್ಣ, ಮಣಿ, ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್‍ಕಾಳಪ್ಪ ಹಾಗೂ ಸ್ಥಳೀಯ ಗ್ರಾಮಸ್ಥರು ಬೆಂಬಲ ನೀಡಿದರು.

ಧರಣಿ ಸತ್ಯಾಗ್ರಹಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್‍ಗೌಡ ನೇತೃತ್ವದಲ್ಲಿ ಮೀಸಲು ಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.