ಕುಶಾಲನಗರ, ಜೂ 11: ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿ ಕೂಡಲೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಕುಶಾಲನಗರ ಹಿತರಕ್ಷಣಾ ವೇದಿಕೆ ಸದಸ್ಯರು ಸೋಮವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಹಿತರಕ್ಷಣಾ ಸಮಿತಿ ಸಂಚಾಲಕರಾದ ಕೆ.ಜಿ.ಮನು ನೇತೃತ್ವದಲ್ಲಿ ಸ್ಥಳೀಯ ಕಾರು ನಿಲ್ದಾಣದ ವೇದಿಕೆಯಲ್ಲಿ ಸತ್ಯಾಗ್ರಹ ಪ್ರಾರಂಭಗೊಂಡಿದೆ. ಪ್ರತಿಭಟನಾಕಾರರು ಯುಜಿಡಿ ಕಾಮಗಾರಿ ಮುಗಿಸಿ, ಸ್ವಚ್ಛತೆ ಕಾಪಾಡಿ, ಕಾವೇರಿ ಉಳಿಸಿ ಘೋಷಣೆ ಕೂಗುವದರೊಂದಿಗೆ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
2014 ರಲ್ಲಿ ಪ್ರಾರಂಭಗೊಂಡ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಇತ್ತೀಚೆಗೆ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಕೂಡಲೆ ಕಾಮಗಾರಿ ಪೂರ್ಣ ಗೊಳಿಸುವಂತೆ ಮನವಿ ಮಾಡಿದ್ದರು. 50 ಕೋಟಿ ರು ವೆಚ್ಚದ ಕಾಮಗಾರಿಯಲ್ಲಿ ಶೇ. 75 ರಷ್ಟು ಕಾಮಗಾರಿ ಮುಗಿದಿದ್ದು ಪ್ರಮುಖವಾದ ತ್ಯಾಜ್ಯ ಶುದ್ಧೀಕರಣ ಘಟಕ ಮತ್ತಿತರ ಕಾಮಗಾರಿಗಳು ನಡೆಯದೆ ಸ್ಥಗಿತಗೊಂಡಿದೆ.
ಈ ಮೂಲಕ ಕುಶಾಲನಗರ ಪಟ್ಟಣದ ಸ್ವಚ್ಛತೆಗೆ ಹಾಗೂ ಕಾವೇರಿ ನದಿ ಕಲುಷಿಕೆ ತಪ್ಪಿಸಲು ಅನುಷ್ಠಾನಗೊಂಡ ಯೋಜನೆಯೊಂದು ನೆನೆಗುದಿಗೆ ಬಿದ್ದಿದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಯೋಜನೆಯನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ವೇದಿಕೆ ಪ್ರಮುಖರಾದ ಕೆ.ಎನ್.ದೇವರಾಜ್, ಎಂ.ಎಸ್.ರಾಜೇಶ್, ಹರೀಶ್, ಡಿ.ವಿ.ರಾಜೇಶ್, ಮಂಜು, ಎಂ.ಡಿ.ಕೃಷ್ಣಪ್ಪ, ಕೆ.ಎಸ್.ನಾಗೇಶ್, ವಿ.ಎಸ್. ಆನಂದಕುಮಾರ್, ಸಂತೋಷ್, ಉಮಾಶಂಕರ್, ಎಂ.ಕೃಷ್ಣ, ಶಿವಾಜಿ, ಭಾಸ್ಕರ್ ನಾಯಕ್, ನಂಜುಂಡಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. ಕುಶಾಲನಗರ ವಕೀಲರ ಸಂಘದ ಅಧ್ಯಕ್ಷರಾದ ಆರ್.ಕೆ.ನಾಗೇಂದ್ರ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್.ಚಂದ್ರಮೋಹನ್ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಕೂಡಲೆ ಕಾಮಗಾರಿ ಪೂರ್ಣ ಗೊಳಿಸುವಂತೆ ಒತ್ತಾಯಿಸಿದ್ದಾರೆ.