ಸಿದ್ದಾಪುರ, ಜೂ.11: ಪಾಲಿಬೆಟ್ಟದ ಸಹಕಾರ ಸಂಘದವರು ಸಾರ್ವಜನಿಕ ಕುಡಿಯುವ ನೀರಿನ ತೆರೆದ ಬಾವಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆಂದು ಆರೋಪಿಸಿ ಅಮ್ಮತ್ತಿ ಹೋಬಳಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಪಾಲಿಬೆಟ್ಟ ಗ್ರಾ.ಪಂ. ಕಛೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ ಹೋರಾಟ ಸಮಿತಿಯ ಮುಖಂಡ ಮಹದೇವ್ ಮಾತನಾಡಿ, ಕೂಡಲೇ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭ ಪ್ರತಿಭಟನಾಕಾರರು ಸುರಿಯುವ ಮಳೆಯಲ್ಲಿ ತಹಶೀಲ್ದಾರರು ಬರುವವರೆಗೂ ಕಾದರು. ನಂತರ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಗೋವಿಂದ ರಾಜ್ ಅವರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಹಾಗೂ ಗ್ರಾ.ಪಂ ಅಧ್ಯಕ್ಷರೊಂದಿಗೆ ಚರ್ಚಿಸಿದರು. ಮತ್ತು ತೆರದ ಬಾವಿ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರತಿಭಟನೆಯಲ್ಲಿ ರಾಮ್ ದಾಸ್,ಎ.ಮೊಹಮ್ಮದ್, ಅಬ್ದುಲ್ ನಾಸೇರ್ ,ಲೈಲಾ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಪಾಲಿಬೆಟ್ಟ ಗ್ರಾ.ಪಂ.ಅಧ್ಯಕ್ಷ ಪುಲಿಯಂಡ ಬೋಪಣ್ಣ ಮಾತನಾಡಿ ಬಾವಿಯ ವಿಚಾರದಲ್ಲಿ ಪ್ರತಿಭಟನೆ ಮಾಡಿದ್ದು ಸರಿಯಾದ ಕ್ರಮವಲ್ಲ. ಇದು ರಾಜಕೀಯ ಪ್ರೇರಿತ ಪ್ರತಿಭಟನೆ ಯಾಗಿದೆ ಎಂದರು. ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಟ್ಯಾಂಕರ್ ಮುಖಾಂತರ ನಿವಾಸಿಗಳಿಗೆ ನೀರು ಸರಬರಾಜು ಮಾಡಿಕೊಡಲಾಗುವದು ಎಂದರು.
ಪಾಲಿಬೆಟ್ಟದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೂಕೊಂಡ ವಿಜುಸುಬ್ರಮಣಿ ಮಾತನಾಡಿ ಸಹಕಾರಿ ಸಂಘಕ್ಕೆ ಸೇರಿದ ಜಾಗದಲ್ಲಿರುವ ತೆರೆದ ಬಾವಿಯು ಸಹಕಾರಿ ಸಂಘಕ್ಕೆ ಸೇರಿದಾಗಿದ್ದು ಯಾವದೇ ಜಾಗವನ್ನು ಒತ್ತುವರಿ ಮಾಡಿಕೊಂಡಿಲ್ಲ. 1956 ರಲ್ಲಿ ಸಹಕಾರಿ ಸಂಘಕ್ಕೆ ಮಂಜೂರಾದ ಜಾಗವಾಗಿದ್ದು, ಎಲ್ಲ ಅಧಿಕೃತ ದಾಖಲೆಗಳನ್ನು ಸಂಘವು ಹೊಂದಿಕೊಂಡಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ, ಪಿ.ಡಿ .ಓ ಅಬ್ದುಲ್ಲಾ, ಕಂದಾಯ ಪರಿವೀಕ್ಷಕ ಅನಿಲ್ ಹಾಜರಿದ್ದರು.