*ಗೋಣಿಕೊಪ್ಪಲು, ಜೂ. 11: ನಿತ್ಯ ನೂರಾರೂ ರೋಗಿಗಳ ಆರೋಗ್ಯ ಕಾಪಾಡುವ ಗೋಣಿಕೊಪ್ಪಲು ಸಮುದಾಯ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲೇ ಆಸ್ಪತ್ರೆಯ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು, ವಿವಿಧ ರೋಗಗಳನ್ನು ಹರಡಲು ಕಾರಣವಾಗುತ್ತಿದೆ. ಆರೋಗ್ಯ ಕೇಂದ್ರದಲ್ಲಿ ಸಂಗ್ರಹವಾಗುವ ಔಷಧಿ ಬಾಟಲಿಗಳು, ಚುಚ್ಚುಮದ್ದು ಸಿರಿಂಜುಗಳು, ಗಾಯಗಳಿಗೆ ಬಳಸಿದ ಬ್ಯಾಂಡೇಜ್‍ಗಳು, ಹತ್ತಿ ಸೇರಿದಂತೆ ಇತರ ತ್ಯಾಜ್ಯ ವಸ್ತುಗಳನ್ನು ನೇರವಾಗಿ ರಸ್ತೆಯ ಬದಿಗೆ ಸುರಿಯಲಾಗುತ್ತಿದೆ. ನಿತ್ಯ ಸಂಗ್ರಹವಾಗುವ ತ್ಯಾಜ್ಯಗಳನ್ನು ರಸ್ತೆಯ ಬದಿಗೆ ಸುರಿಯಲಾಗುತ್ತಿದೆ ಇದನ್ನು ಪೌರ ಕಾರ್ಮಿಕರು ಕೂಡ ವಿಲೇವಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸುರಿದ ತ್ಯಾಜ್ಯದಲ್ಲಿ ಗಾಜಿನ ಚೂರುಗಳು, ಸಿರಿಂಜಿನ ಸೂಜಿಗಳು ಇರುವದರಿಂದ ತ್ಯಾಜ್ಯ ತೆಗೆಯುವಾಗ ಕೈ ಕಾಲುಗಳಿಗೆ ಚುಚ್ಚಿಕೊಂಡು ಗಾಯಗಳಾಗುತ್ತದೆ. ಈ ಕಾರಣ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಪೌರ ಕಾರ್ಮಿಕರು ಮುಂದಾಗುತ್ತಿಲ್ಲ. ಆಸ್ಪತ್ರೆಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಬೇರೆಡೆ ವಿಲೇವಾರಿಗೊಳಿಸಿ ಸುಟ್ಟು ಹಾಕಬೇಕು ಆದರೆ ಇಲ್ಲಿ ತ್ಯಾಜ್ಯಗಳು ವಿಲೇವಾರಿಗೊಳಿಸಲು ಪ್ರತ್ಯೇಕ ಸ್ಥಳ ಇಲ್ಲದೇ ಇರುವದರಿಂದ ಸಮಸ್ಯೆ ಎದುರಾಗಿದೆ. ನೂರಾರು ರೋಗಿಗಳು ಬೇಟಿ ನೀಡುವ ಆರೋಗ್ಯ ಕೇಂದ್ರದಲ್ಲಿ ಶುಚಿತ್ವದ ಕೊರತೆ ಕಾಣುತ್ತಿದೆ. ಆಸ್ಪತ್ರೆಯ ಸುತ್ತಲಿನ ಆವರಣದ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಸೊಳ್ಳೆ, ನೊಣಗಳ ವಾಸಸ್ಥಾನವಾಗಿದೆ. ಈ ಹಿಂದೆ ಆರೋಗ್ಯ ಕೇಂದ್ರದಲ್ಲಿನ ಹಳೆಯ ಕಟ್ಟಡವನ್ನು ನವೀಕರಣ ಗೊಳಿಸಿದ ಸಂದರ್ಭ ಕೊಠಡಿಯಲ್ಲಿದ್ದ ಹಾಸಿಗೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ಆಸ್ಪತ್ರೆಯ ಆವರಣ ಒಳಗಿನ ತಡೆಗೋಡೆಯ ಒತ್ತಿನಲ್ಲಿ ಹಾಕಲಾಗಿದೆ. ಮಳೆಯ ನೀರು ಬಿದ್ದು ಕೊಳೆಯುತ್ತಿದೆ.

ಇಲ್ಲಿ ಸೊಳ್ಳೆಗಳು ತನ್ನ ಸಂತಾನ ಅಭಿವೃದ್ದಿ ಪಡಿಸಿಕೊಳ್ಳುತ್ತಿದೆ. ಆದರೂ ಆರೋಗ್ಯ ಕೇಂದ್ರದ ನಿರ್ವಹಣಾ ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಶುಚಿತ್ವಕ್ಕೆ ಒತ್ತು ನೀಡಬೇಕಾದ ಆರೋಗ್ಯ ಕೇಂದ್ರ ಜನರಿಗೆ ಮಾರಕ ರೋಗಗಳನ್ನು ಹರಡುವ ವಾತಾವರಣವಾಗಿ ಪರಿಣಮಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ವಿಂಗಡಿಸಿ ಕಸ ವಿಲೇವಾರಿ ಮಾಡಿದರೆ ಕಸ ಸಾಗಿಸಲು ಸಾಧ್ಯವಾಗುತ್ತದೆ. ಆರೋಗ್ಯ ಕೇಂದ್ರದ ತ್ಯಾಜ್ಯದಲ್ಲಿ ಗಾಜಿನ ಚೂರುಗಳು, ರಕ್ತ ಮೆತ್ತಿದೆ ಬ್ಯಾಂಡೇಜ್‍ಗಳು, ಸಿರಿಂಜುಗಳು ಸೇರಿದಂತೆ ಹಲವು ತ್ಯಾಜ್ಯಗಳು ಇರುತ್ತವೆÉ. ಇದು ಪೌರ ಕಾರ್ಮಿಕರ ಕೈಗಳಿಗೆ ಚುಚ್ಚುವದರಿಂದ ಗಾಯಗಳಾಗುತ್ತದೆ. ಆದ್ದರಿಂದ ನೌಕರರು ಕಸ ತೆಗೆಯಲು ಮುಂದಾಗುತ್ತಿಲ್ಲ ಎಂದು ಹಂಗಾಮಿ ನೌಕರ ನೌಷಾದ್ ಹೇಳಿದ್ದಾರೆ.

ಆಸ್ಪತ್ರೆಯ ತ್ಯಾಜ್ಯಗಳನ್ನು ಮೈಸೂರಿನಿಂದ ಬಂದು ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ವಾರಕ್ಕೆ 2 ಬಾರಿ ಕಸವನ್ನು ಸಾಗಿಸಲಾಗುತ್ತಿದೆ. ಆರೋಗ್ಯ ಕೇಂದ್ರದ ಹೊರಭಾಗದಲ್ಲಿ ಸಾರ್ವಜನಿಕರೆ ಕಸ ತಂದು ಹಾಕುತ್ತಿದ್ದಾರೆ ಎಂದು ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಡಾ. ಸುರೇಶ್ ತಿಳಿಸಿದ್ದಾರೆ.

-ಎನ್.ಎನ್. ದಿನೇಶ್