ಕೂಡಿಗೆ, ಜೂ. 11 : ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆ ಹೆಚ್ಚಳಗೊಂಡಿದೆ. ಪರಿಣಾಮ ಕೂಡಿಗೆಯಲ್ಲಿನ ಕಾವೇರಿ-ಹಾರಂಗಿ ನದಿ ಸಂಗಮದ ಸ್ಥಳದಲ್ಲಿ ಹೆಚ್ಚಿನ ನೀರು ಹರಿಯುತ್ತಿದ್ದು, ನೀರು ಹಿಂತಳ್ಳುವಿಕೆ ಕಂಡುಬರುತ್ತಿದೆ. ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೂಡಿಗೆ ಸೇತುವೆಯ ಮುಕ್ಕಾಲು ಭಾಗದಷ್ಟು ನೀರು ಹೆಚ್ಚಾಗಿದೆ. ಅಲ್ಲದೆ, ಕೂಡಿಗೆ-ಕಣಿವೆ ಮಧ್ಯೆ ಕಾವೇರಿ ನೀರಿನ ಹೆಚ್ಚಳದಿಂದಾಗಿ ಹಳ್ಳ ಪ್ರದೇಶಗಳಿಗೆ ನೀರು ನುಗ್ಗಿ, ಬೇಸಿಗೆ ಬೆಳೆಯಲ್ಲಿ ಬೆಳೆದ ಭತ್ತದ ಬೆಳೆಯು ನೀರಿನಿಂದ ಆವೃತ್ತಗೊಂಡಿದ್ದು, ನಷ್ಟವುಂಟಾಗಿದೆ.