ಮಡಿಕೇರಿ, ಜೂ. 10: ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದ ಲಕ್ಷ್ಮಣ ತೀರ್ಥ ಹೊಳೆಯ ದಡದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂದಿಸಿದ್ದಾರೆ.ತಾ. 6 ರಂದು ಲಕ್ಷ್ಮಣತೀರ್ಥ ಹೊಳೆಯ ದಡದಲ್ಲಿ ಅಕ್ರಮವಾಗಿ ಜೆ.ಸಿ.ಬಿ ಯಂತ್ರದಿಂದ ರವಿ ಮತ್ತು ಭಜನ್ ದೇವಯ್ಯ ಎಂಬವರುಗಳು ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಟ್ರ್ಯಾಕ್ಟರ್‍ಗೆ ತುಂಬಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊನ್ನಂಪೇಟೆ ಪೊಲೀಸರು ಪತ್ತೆ ಹಚ್ಚಿ ಮಾಲು ಸಹಿತಿ ಆರೋಪಿಗಳನ್ನು ಬಂಧಿಸಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ತಾ. 8 ರಂದು ಲಕ್ಷ್ಮಣತೀರ್ಥ ಹೊಳೆಯ ದಡದಲ್ಲಿ ಅಕ್ರಮವಾಗಿ ಚೆರಿಯಂಡ ರೋಷನ್ ಎಂಬಾತ ಅಕ್ರಮವಾಗಿ ಮರಳನ್ನು ಶೇಖರಿಸಿಟ್ಟಿರುವದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಅಕ್ರಮವಾಗಿ ಮರಳನ್ನು ತೆಗೆಯಲು ಉಪಯೋಗಿಸುತ್ತಿದ್ದ ಒಂದು ಕಬ್ಬಿಣದ ತೆಪ್ಪ ಹಾಗೂ ಮರಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ರೋಷನ್‍ನನ್ನು ಬಂದಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಅವರ ನಿರ್ದೇಶನದಂತೆ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಾಗಪ್ಪ
(ಮೊದಲ ಪುಟದಿಂದ) ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಕೆ.ಪಿ. ಹರಿಶ್ಚಂದ್ರ ಹಾಗೂ ಪೊನ್ನಂಪೇಟೆ ಠಾಣೆಯ ಪಿಎಸ್‍ಐ ಬಿ.ಜಿ.ಮಹೇಶ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೊಡಗು ಜಿಲ್ಲೆಯ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳೇ ಅಲ್ಲದೆ ಯಾವದೇ ಹೊಳೆಯದಡಗಳಲ್ಲಿ ಹಾಗೂ ಬೇರೆ ಕಡೆಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಎಸ್‍ಪಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರ - 08272 - 228330, ಡಿವೈಎಸ್‍ಪಿ, ಮಡಿಕೇರಿ ಉಪ ವಿಭಾಗ - 9480804920, ಡಿವೈಎಸ್‍ಪಿ, ಸೋಮವಾರಪೇಟೆ ಉಪ ವಿಭಾಗ - 9480804921, ಡಿವೈಎಸ್‍ಪಿ, ವೀರಾಜಪೇಟೆ ಉಪ ವಿಭಾಗ - 9480804922, ಪೊಲೀಸ್ ನಿರೀಕ್ಷಕರು, ಡಿಸಿಐಬಿ ವಿಭಾಗ - 9480804908.