ಸೋಮವಾರಪೇಟೆ,ಜೂ.10 : ಸಾವು..! ಎಲ್ಲರಿಗೂ ಎಲ್ಲಾ ಮನೆಯಲ್ಲೂ ಇದ್ದೇ ಇದೆ. ಸಾವನ್ನು ಜಯಿಸಿದವರು ಯಾರೂ ಇಲ್ಲ, ಒಂದಷ್ಟು ಸಾವುಗಳು ಆ ಕ್ಷಣಕ್ಕೆ ಕಣ್ಣೀರಧಾರೆ ಹರಿಸಿದರೂ ದಿನಕಳೆದಂತೆ ಮರೆಯಾಗುತ್ತದೆ. ಆದರೆ ಈ ಸಾವು ಹಾಗಲ್ಲ, ಅಗ್ನಿಸಾಕ್ಷಿಯಾಗಿ ಕೈ ಹಿಡಿದ ಹೆಂಡತಿಯ ಕಣ್ಣೀರ ಕೋಡಿ ನಿಲ್ಲುವಂತೆ ಕಾಣುವದಿಲ್ಲ. ಅದನ್ನು ಹೇಗಾದರೂ ಮರೆಯುತ್ತೇನೆಂದರೂ ಹಾಸಿಗೆಯಲ್ಲಿ ಮಲಗಿರುವ 2 ವಿಕಲಚೇತನ ಮಕ್ಕಳು ಮತ್ತೆ ಮತ್ತೆ ನೆನಪಿಸುತ್ತಾರೆ.., ಮತ್ತೆ ಮತ್ತೆ ಅವರು ನೆನಪಾಗುತ್ತಾರೆ. ಆದರೆ.., ಮುಂದೇನೆಂಬ ದಿಕ್ಕಿಲ್ಲ.., ದೆಸೆಯಿಲ್ಲ..! ಈಗ ಕುಟುಂಬದ ಕೈಹಿಡಿಯಬೇಕಿರುವದು ಸಮಾಜದಲ್ಲಿರುವ ಸಹೃದಯರ ನೆರವು ಮಾತ್ರ!

ಮಣ್ಣಿನ ಗೋಡೆ, ಬಿದಿರಿನ ಬೊಂಬುಗಳನ್ನು ಅಳವಡಿಸಿ ಹೆಂಚಿನಿಂದ ನಿರ್ಮಿಸಿರುವ 3 ಕೋಣೆಯೊಳಗೆ ನಡೆಯುತ್ತಿದ್ದ ಜೀವನ, ಮನೆಯ ಯಜಮಾನನ ಸಾವಿನ ನಂತರ ಹೊರ ಜಗತ್ತಿಗೆ ತೋರಿಸಲ್ಪಟ್ಟಿದೆ.

ಮುಂದಿನ ಕೋಣೆಯಲ್ಲಿ ಮಂಚದ ಮೇಲೆ ಅತ್ತಿಂದಿತ್ತ ಹೊರಳಾಡಲೂ ಅಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ ಮಲಗಿರುವ 2 ಮುದ್ದು ಕಂದಮ್ಮಗಳು, ಒಳಗಿನ ಕೋಣೆಯಲ್ಲಿ ಅತ್ತೂ ಅತ್ತೂ ಗುಳಿಬಿದ್ದ ಕಣ್ಣುಗಳಿಂದ ಮುಖದ ತೇಜಸ್ಸು-ಬದುಕುವ ಉತ್ಸಾಹವನ್ನೂ ಕಳೆದುಕೊಂಡಿರುವ ಹೆಣ್ಣುಮಗಳು. ಅಪ್ಪನ ಸಾವಿನ ಶೋಕದ ನಡುವೆಯೂ ಮೂರನೇ ತರಗತಿಗೆ ತೆರಳುತ್ತಿರುವ ಪುಟ್ಟ ಬಾಲಕಿ, ಕಡುಬಡತನದ ಜೀವನಕ್ಕೆ ಜೀವಂತ ಸಾಕ್ಷಿಯಾಗಿರುವ ಕೌಟುಂಬಿಕ ಜೀವನ, ‘ದೇವರು ನನಗ್ಯಾಕೆ ಈ ರೀತಿ ಕಷ್ಟ ಕೊಟ್ಟ’? ಎಂದು ಭಗವಂತನನ್ನೇ ಕಣ್ಣೀರಿನೊಂದಿಗೆ ಪ್ರಶ್ನಿಸುವ ಮೃತನ ಪತ್ನಿ..!

ಇಂತಹ ಸನ್ನಿವೇಶ ಕಂಡುಬರುವದು ಕಳೆದ ಮೇ ತಿಂಗಳ 31ರಂದು ಸೋಮವಾರಪೇಟೆಯ ವಿವೇಕಾನಂದ ಸರ್ಕಲ್ ಮತ್ತು ಕಕ್ಕೆಹೊಳೆ ಜಂಕ್ಷನ್ ನಡುವಿನ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕ ಗರಗಂದೂರು ಬಿ. ಗ್ರಾಮದ ಗಣೇಶ್ ಅವರ ಮನೆಯಲ್ಲಿ.

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಗಣೇಶ್ ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲ ಅವಳಿ ಜವಳಿ ಮಕ್ಕಳಿಗೆ ಹುಟ್ಟುವಾಗಲೇ ಅಂಗವೈಕಲ್ಯ. ಈಗ ಹತ್ತು ವರ್ಷವಾದರೂ ಮಂಚದ ಮೇಲೆಯೇ ಜೀವನ. ಇದರಲ್ಲಿ ಓರ್ವ ಬಾಲಕಿ ಕೆಲವೊಂದು ಮಾತುಗಳನ್ನಾಡಿದರೂ ಮತ್ತೋರ್ವ ಬಾಲಕಿಗೆ ಎಲ್ಲಿ ಏನಾಗುತ್ತಿದೆ ಎಂಬ ಅರಿವೆಯೇ ಇಲ್ಲ. ಎಲ್ಲವೂ ಮಲಗಿದ್ದಲ್ಲಿಯೇ. ಅತ್ತಿಂದಿತ್ತ.., ಇತ್ತಿಂದತ್ತ ಮಕ್ಕಳನ್ನು ಎತ್ತಿಕೊಂಡೇ ತಿರುಗಾಡಬೇಕಾದ ಪರಿಸ್ಥಿತಿ.

ಇವರ ನಂತರ ಹುಟ್ಟಿದ ಮೂರನೇ ಮಗಳು ಆರೋಗ್ಯವಾಗಿದ್ದು, ಇದೀಗ ಸಾಂದೀಪನಿ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆಟೋ ಬಾಡಿಗೆಯಲ್ಲಿ ಬರುತ್ತಿದ್ದ ಹಣದಲ್ಲಿ ದೈನಂದಿನ ಖರ್ಚು ನಡೆಯುತ್ತಿತ್ತು. ಮಕ್ಕಳಿಗೆ ಔಷಧಿ, ತಿಂಡಿ, ಹಣ್ಣುಹಂಪಲು ಖರೀದಿಯೊಂದಿಗೆ ಮನೆಗೆ ಬೇಕಾದ ಊಟದ ವ್ಯವಸ್ಥೆಗೆ ಆಧಾರವಾಗಿದ್ದುದು ಒಂದು ಆಟೋ ಮಾತ್ರ.

ಕಳೆದ ಮೇ 31ರಂದು ಮಕ್ಕಳಿಗೆ ತಿಂಡಿ, ಸೇಬು ಹಣ್ಣನ್ನು ಖರೀದಿಸಿಕೊಂಡು ತೆರಳುತ್ತಿದ್ದ ಸಂದರ್ಭ ಎದುರಾದ ಬೊಲೇರೋ ವಾಹನ ಯಮಸ್ವರೂಪಿಯಾಗಿತ್ತು. ಆಟೋದ ಬದಿಗೆ ಅಪ್ಪಳಿಸಿದ ರಭಸಕ್ಕೆ ಆಟೋ ಚಾಲಕ ಗಣೇಶ್ ಸ್ಥಳದಲ್ಲೇ ಅರ್ಧ ಜೀವ ತ್ಯಜಿಸಿದ್ದರು. ನಂತರ ಆಸ್ಪತ್ರೆಗೆ ಸಾಗಿಸಿ ಮಡಿಕೇರಿಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಇದು ಅಂದು ನಡೆದ ಘಟನೆ. ನಂತರದ ಘಟನೆಗಳು ಗಣೇಶ್ ಅವರ ಮನೆಯ ಶೋಚನೀಯ ಪರಿಸ್ಥಿತಿಯನ್ನು ಇತರರಿಗೆ ತೋರಿಸಿಕೊಟ್ಟಿತು. ಸಂಕಷ್ಟದ ನಡುವೆಯೂ ಜೀವನ ಸಾಗಿಸುತ್ತಿದ್ದ, ಇದ್ದುದರಲ್ಲೇ 2 ವಿಕಲ ಚೇತನ ಮಕ್ಕಳನ್ನು ಸಲಹುತ್ತಾ, ಮತ್ತೋರ್ವಳನ್ನು ಶಾಲೆಗೆ ಕಳುಹಿಸುತ್ತಾ ಹೊಟ್ಟೆ ಬಟ್ಟೆ ಕಟ್ಟಿ ನೆಲೆಕಂಡುಕೊಂಡಿದ್ದ ಗಣೇಶ್ ಅವರ ಪತ್ನಿ ಸವಿತ ಅವರಿಗೆ ಗಂಡನ ಸಾವು ಸಿಡಿಲಾಘಾತ.

ಇನ್ನು ತಾನು ಬದುಕಿದ್ದೂ ಪ್ರಯೋಜನವೇನು? ಎಂದುಕೊಳ್ಳುವಷ್ಟರಲ್ಲೇ ಮಂಚದ ಮೇಲೆ ಮಲಗಿ ಪಿಳಿ ಪಿಳಿ ಕಣ್ಣು ಬಿಡುವ ಹೆಣ್ಣುಮಕ್ಕಳು, ಶಾಲೆಗೆ ತೆರಳಿರುವ ಮತ್ತೋರ್ವ ಮಗಳ ನೆನಪು ಇವರನ್ನು ಬದುಕಿಸಿತು. ಅವರೇ ಇಲ್ಲದ ಮೇಲೆ ಇವರನ್ನು ಹೇಗೆ ಸಲಹಲಿ? ಎಂದು ಕೊರಗುತ್ತಿದ್ದಂತೆಯೇ ಒಂದಷ್ಟು ಸಹೃದಯರು ಕುಟುಂಬದ ನೆರವಿಗೆ ನಿಂತು ಕೈಲಾದ ಧನ ಸಹಾಯ ನೀಡಿದ್ದೂ ಅಲ್ಲದೇ, ಇತರರಿಂದ ಸಂಗ್ರಹಿಸಲು ಮುಂದಾದರು.

ಮನೆಯ ಮುಂದೆ ಆಟೋ ಶಬ್ದವಾದರೆ ‘ಅಪ್ಪ’ ಎಂದು ಪುತ್ರಿ ರಮ್ಯ ಹೇಳಿದರೆ, ಮತ್ತೋರ್ವ ಮಗು ರಶ್ಮಿಯ ಕಣ್ಣು ಕೊಂಚ ಅರಳುತ್ತದೆ. ಆಗೊಮ್ಮೆ ಈಗೊಮ್ಮೆ ‘ಅಪ್ಪ.. ಪಪ್ಪ..,’ ಎಂದು ರಮ್ಯ ಕರೆಯುತ್ತಾಳೆ. ಅಮ್ಮನ ಮೊಬೈಲ್ ರಿಂಗಣಿಸಿದರೆ ‘ಅಪ್ಪ..ಪಪ್ಪ’ ಎಂದು ಹಂಬಲಿಸುವ ಮಕ್ಕಳಿಗೆ ಅಪ್ಪ ಇನ್ನೆಂದೂ ಬರುವದಿಲ್ಲ ಎಂಬ ಕಟುಸತ್ಯ ತಿಳಿದಿಲ್ಲ, ತಿಳಿಯುವ ಮನಸ್ಥಿತಿಯೂ ಅವರಿಗೆ ಇಲ್ಲ. ‘ಮದುವೆಯಾಗಿ 11 ವರ್ಷಕ್ಕೆ ದೇವರು ಮಾಂಗಲ್ಯ ಕಿತ್ತುಕೊಂಡ, ಈ ಎರಡು ಮಕ್ಕಳನ್ನು ಹೇಗೆ ಸಲಹಲಿ.., ನಿಜಕ್ಕೂ ದೇವರಿದ್ದಾನಾ. ನನಗೇ ಯಾಕಿಷ್ಟು ಕಷ್ಟ-ನೋವು ಕೊಡ್ತಾನೆ ಅಣ್ಣಾ?’ ಎಂದು ಸಂತೈಸಲು ತೆರಳಿದ ಐಗೂರಿನ ಪ್ರಭಾಕರ್ ಮತ್ತು ಅವಿಲಾಶ್ ಅವರನ್ನು ಪ್ರಶ್ನಿಸುವ ಸವಿತಾ ಅವರ ಕಣ್ಣುಗಳಲ್ಲಿ ಧಾರಾಕಾರ ನೋವಿನ ನೀರು ಜಿನುಗುತ್ತಿತ್ತು.

‘ಸಂಕಷ್ಟದ ನಡುವೆಯೂ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಮೂರನೇ ಮಗಳನ್ನು ಐಪಿಎಸ್ ಮಾಡಿಸುತ್ತೇನೆ ಎಂದು ಹೇಳಿದ್ದರು. ಇದೀಗ ನನ್ನನ್ನು ಈ ಪರಿಸ್ಥಿತಿಯಲ್ಲಿ ಬಿಟ್ಟು ಹೋದರು’ ಎಂದು ಕಣ್ಣೀರಾಗುವ ಸವಿತಾ ಅವರನ್ನು ಸಂತೈಸಲು ಯಾವ ಪದಗಳಿಂದಲೂ ಕಷ್ಟಸಾಧ್ಯ.

‘ಊರಲ್ಲಿ ಒಳ್ಳೇ ಹೆಸರು ಮಾಡಿದ್ದ. ಹಿಂದೆ ಗ್ರಾ.ಪಂ. ಚುನಾವಣೆಯಲ್ಲಿ ಒಂದೇ ಓಟಿಂದ ಸೋತಿದ್ದ. ಅಕ್ಕಪಕ್ಕದವರು, ಊರಿನವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದ. ತುಂಬಾ ಒಳ್ಳೇ ಹುಡುಗ, ಪರರ ನೋವು ತನ್ನದೆಂದು ಭಾವಿಸಿ ನೆರವಿಗೆ ಬರುತ್ತಿದ್ದ. ಈಗ ಅವನ ಕುಟುಂಬಕ್ಕೆ ಬಂದ ಕಷ್ಟ ಯಾರಿಗೂ ಬೇಡಪ್ಪಾ ಭಗವಂತ’ ಎನ್ನುವ ನೆರೆಮನೆಯ ಜಯಮ್ಮ ಅವರು ಗಣೇಶನ ಮನೆಯ ಕಷ್ಟವನ್ನು ಕಣ್ಣೀರಿನ ಮೂಲಕ ತೋರ್ಪಡಿಸುತ್ತಾರೆ.

ಅಂಗವೈಕಲ್ಯತೆ ಹೊಂದಿರುವ ಈರ್ವರು ಹೆಣ್ಣು ಮಕ್ಕಳು ಮಂಚದ ಮೇಲಿದ್ದರೂ ದಿನೇ ದಿನೇ ಬೆಳೆಯುತ್ತಿದ್ದಾರೆ. ಶಾಲೆಗೆ ತೆರಳಿರುವ ಮಗು ವಿದ್ಯಾಭ್ಯಾಸದಲ್ಲೂ ಮುಂದಿದೆ. ಎರಡೂ ಮಕ್ಕಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಪಾಡಿಕೊಂಡು ಬರಲಾಗುತ್ತಿದೆ. ಪ್ರತಿ ದಿನ ಪ್ರತಿ ಕ್ಷಣ ಮಕ್ಕಳ ಪಕ್ಕದಲ್ಲಿಯೇ ತಾಯಿ ಸವಿತ ಇರಬೇಕಿದೆ. ಗಂಡನ ಅಗಲಿಕೆಯ ನಂತರ ಹೊರಗೆ ತೆರಳಿ ಕೂಲಿ ಮಾಡಿಯಾದರೂ ಮಕ್ಕಳನ್ನು ಸಾಕುತ್ತೇನೆ ಎಂದುಕೊಂಡರೂ ಇಬ್ಬರು ಹೆಣ್ಣು ಮಕ್ಕಳ ಆರೈಕೆಯ ಜವಾಬ್ದಾರಿ ತಡೆಯುತ್ತಿದೆ. ಅವರ ಪಕ್ಕದಲ್ಲಿಯೇ ಇರಬೇಕು. ಹೊಟ್ಟೆಯನ್ನೂ ತುಂಬಿಸಿಕೊಳ್ಳಬೇಕು ಎಂಬಂತಹ ತ್ರಿಶಂಕು ಸ್ಥಿತಿಗೆ ಸವಿತ ಅವರ ಜೀವನ ತಲುಪಿದೆ.

ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಕುಟುಂಬದ ನೆರವಿಗೆ ಸಹೃದಯಿ ಸಮಾಜ ಧಾವಿಸಬೇಕಿದೆ. ಮಕ್ಕಳ ಔಷಧಿ-ಚಿಕಿತ್ಸೆ, ಮನೆಯ ಖರ್ಚು, ಮತ್ತೋರ್ವ ಮಗಳ ವಿದ್ಯಾಭ್ಯಾಸ ಇತ್ಯಾದಿಗೆ ತಮ್ಮ ಕೈಲಾದ ಸಹಾಯ ಹಸ್ತ ಚಾಚಬೇಕಿದೆ. ಸಮಾಜದ ಸಹಾಯದ ನೆರವನ್ನು ಕುಟುಂಬ ಬೇಡಿದೆ.

ಈರ್ವರು ಅಂಗವೈಕಲ್ಯ ಮಕ್ಕಳ ಆರೈಕೆ, ಮತ್ತೋರ್ವ ಮಗಳಿಗೆ ವಿದ್ಯಾಭ್ಯಾಸ ನೀಡಿ, ಐಪಿಎಸ್ ಅಧಿಕಾರಿಯಾಗಿಸುವ ತಂದೆ ಗಣೇಶ ಅವರ ಕನಸನ್ನು ನನಸಾಗಿಸಲು ಸಮಾಜ ಮುಂದೆ ಬರಬೇಕಿದೆ. ಈ ಕುಟುಂಬಕ್ಕೆ ನೆರವು ನೀಡಬಯಸುವ ಸಹೃದಯಿ ದಾನಿಗಳು ಐಗೂರಿನ ವಿಜಯಾ ಬ್ಯಾಂಕ್‍ನಲ್ಲಿರುವ ಕೆ.ಟಿ. ಸವಿತ, ಖಾತೆ ಸಂಖ್ಯೆ: 125801011001617, ಐಎಫ್‍ಎಸ್‍ಸಿ ಸಂಖ್ಯೆ:ವಿಐಜೆಬಿ0001258 ಇಲ್ಲಿಗೆ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮೊ:8762821489ನ್ನು ಸಂಪರ್ಕಿಸಬಹುದು.

- ವಿಜಯ್ ಹಾನಗಲ್