ವೀರಾಜಪೇಟೆ, ಜೂ. 10 : ಕಳೆದ ನಾಲ್ಕು ದಿನಗಳಿಂದ ವಿರಾಜಪೇಟೆ ವಿಭಾಗಕ್ಕೆ ಸುರಿಯುತ್ತಿರುವ ಮುಂಗಾರು ಮಳೆ ಇಂದು ಮುಂದುವರೆದಿದ್ದು ಪಟ್ಟಣದ ವಿವಿಧೆಡೆಗಳಲ್ಲಿ ಮಳೆ ಹಾನಿ ಮುಂದುವರೆದಿದೆ.ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸುಂಕದಕಟ್ಟೆ ಬಳಿ ಟೆಲಿಫೋನ್ ತಂತಿ ಮೇಲೆ ಮರ ಬಿದ್ದು ಹಾನಿಯಾಗಿದೆ. ಇಲ್ಲಿನ ತೆಲುಗರಬೀದಿಯ ಮುಖ್ಯ ರಸ್ತೆಯಲ್ಲಿ ಟೆಲಿಫೋನ್ ಕೇಬಲ್ ಅಳವಡಿಕೆಗೆ ತೋಡಿದ್ದ ಗುಂಡಿಯನ್ನು ಇಲಾಖೆ ಕಾಟಾಚಾರಕ್ಕಾಗಿ ಮುಚ್ಚಿದ್ದರಿಂದ ವಿದ್ಯುತ್ ಕಂಬದ ಬಳಿಯಲ್ಲಿಯೇ ರಸ್ತೆ ಕುಸಿದು ಸುಮಾರು ಎರಡೂವರೆ ಅಡಿಗಳಷ್ಟು ಆಳವಾಗಿದ್ದು ವಾಹನಗಳ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಭಾರೀ ಮಳೆಯ ಕಾರಣ ಪಟ್ಟಣ ಪಂಚಾಯಿತಿಗೂ ಇದನ್ನು ದುರಸ್ತಿ ಪಡಿಸಲು ಸಾಧ್ಯವಾಗಿಲ್ಲ. ಇಂದು ಬೆಳಗಿನ ಜಾವ ಬಿದ್ದ ಭಾರೀ ಮಳೆಯ ಪರಿಣಾಮ ವಾಗಿ ಇಲ್ಲಿನ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆಯ ಬಳಿಯ ಸೇತುವೆ ಬಳಿಯ

(ಮೊದಲ ಪುಟದಿಂದ) ತೋಡು ನೀರಿನಿಂದ ತುಂಬಿ ರಸ್ತೆಯ ಮೇಲೆ ಸುಮಾರು ಒಂದೂವರೆ ಅಡಿಯಷ್ಟು ನೀರು ಹರಿಯಿತು. ಇದೇ ರೀತಿ ಮೀನುಪೇಟೆಯಲ್ಲಿ ಚರಂಡಿಯಿಂದ ತುಂಬಿ ಬಂದ ನೀರು ರಸ್ತೆಯ ಮೇಲೆ ಹರಿಯುವಂತಾಯಿತು. ನಿನ್ನೆ ಬೆಳಗಿನಿಂದ ಇಂದು ಬೆಳಗಿನ 8ಗಂಟೆಯ ತನಕ ವೀರಾಜಪೇಟೆ ವಿಭಾಗಕ್ಕೆ 2.22 ಇಂಚುಗಳಷ್ಟು ಮಳೆ ಸುರಿದಿದೆ. ವೀರಾಜಪೇಟೆ ತಾಲೂಕಿನ ಆರ್ಜಿ, ಪೆರುಂಬಾಡಿ ಸುತ್ತ ಮುತ್ತಲ ಪ್ರದೇಶದಲ್ಲಿಯೂ ಭಾರೀ ಮಳೆಯಾಗಿದ್ದು ಆರ್ಜಿ ಗ್ರಾಮದಲ್ಲಿ ಎಲ್ಲ ಗದ್ದೆ ಬಾಣೆ ಜಾಗಗಳು ನೀರಿನಿಂದ ಜಲಾವೃತಗೊಂಡಿದೆ.

ವೀರಾಜಪೇಟೆಯಿಂದ ಮಡಿಕೇರಿಗೆ ಹೋಗುವ ಕದನೂರು ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿರುವ ಗದ್ದೆಗಳು ಜಲಾವೃತಗೊಂಡಿದೆ. ಗದ್ದೆಯ ಸುತ್ತಮುತ್ತಲಿರುವ ಖಾಲಿ ಜಾಗದಲ್ಲಿಯೂ ಮಳೆ ನೀರು ತುಂಬಿದೆ. ಬೇತರಿ ಗ್ರಾಮದ ಕಾವೇರಿ ಹೊಳೆಯ ನೀರಿನ ಮಟ್ಟ ಏರುತ್ತಿದೆ. ಕದನೂರು ಗ್ರಾಮದ À ತೋಡು ತುಂಬಿ ಹರಿಯುತ್ತಿದೆ.

ಇಂದು ಬೆಳಿಗ್ಗೆ ಬೇತರಿ ಗ್ರಾಮದ ನಾಲ್ಕೇರಿಯ ಹೆಮ್ಮಾಡು ಬಿ. ಭಾಗದಲ್ಲಿ ಭದ್ರಕಾಳಿ ದೇವಸ್ಥಾನದ ಪೌಳಿ ಮೇಲೆ ಭಾರೀ ಗಾತ್ರದ ಮರ ಬಿದ್ದು ರೂ 75000 ನಷ್ಟ ಸಂಭವಿಸಿದ್ದು ಪರಿಹಾರಕ್ಕಾಗಿ ದೂರು ದಾಖಲಿಸಲಾಗಿದೆ. ಕುಟ್ಟಂದಿ ಗ್ರಾಮದ ಚಂದೂರ ಪೂವಯ್ಯ ಎಂಬುವರ ಮನೆ ಮೇಲೆ ಮರ ಬಿದ್ದು ರೂ50,000 ನಷ್ಟ ಉಂಟಾಗಿದ್ದು ಪೊನ್ನಂಪೇಟೆ ಬಳಿಯ ಭದ್ರಗೊಳ ಗ್ರಾಮದ ರೇಷ್ಮೆ ಹಾಡಿಯ ಕರ್ಪ ಎಂಬುವರ ಮನೆ ಮೇಲೆ ಮರ ಬಿದ್ದು ರೂ 6000 ನಷ್ಟ ಉಂಟಾಗಿದೆ ಎಂದು ಆಯಾ ವಿಭಾಗಗಳ ಕಂದಾಯ ಪರಿವೀಕ್ಷಕರು ವರದಿ ಮಾಡಿರುವದಾಗಿ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದ್ದಾರೆ.