ಸೋಮವಾರಪೇಟೆ, ಜೂ. 10: ಸೋಮವಾರಪೇಟೆ ತಾಲೂಕಿನಾದ್ಯಂತ ವಾಯು-ವರುಣನಾರ್ಭಟ ಮುಂದು ವರೆದಿದೆ. ಭಾರೀ ಗಾಳಿಯೊಂದಿಗೆ ಮಳೆ ಬೀಳುತ್ತಿರುವ ಹಿನ್ನೆಲೆ ಅಲ್ಲಲ್ಲಿ ಹಾನಿಗಳು ಸಂಭವಿಸುತ್ತಲೇ ಇದ್ದು, ಶಾಂತಳ್ಳಿ ಹೋಬಳಿಗೆ ಕಳೆದ 24 ಗಂಟೆಗಳಲ್ಲಿ ದಾಖಲೆಯ 9 ಇಂಚು ಮಳೆ ಸುರಿದಿದೆ. ಸೋಮವಾರಪೇಟೆ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಅಕ್ಷರಶಃ ಸ್ತಬ್ಧಗೊಂಡಿದ್ದು, ಜನತೆ ಮನೆಯಿಂದ ಹೊರಬರಲೂ ಹಿಂದೇಟು ಹಾಕುತ್ತಿದ್ದಾರೆ. ಮುಂದುವರೆದ ಹಾನಿ: ಭಾರೀ ಗಾಳಿ ಮಳೆಗೆ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿ ಹಾಡಿಯ ನಿವಾಸಿ ಮಂಜ ಎಂಬವರ ಮನೆ ಮೇಲೆ ವಿದ್ಯುತ್ ಕಂಬ ಹಾಗೂ ತಂತಿ ಬಿದ್ದಿದೆ. ಇದರಿಂದಾಗಿ 5 ಸಿಮೆಂಟ್ ಶೀಟ್‍ಗಳು ಒಡೆದಿದ್ದು, ವಿದ್ಯುತ್ ಸ್ಥಗಿತಗೊಂಡಿದ್ದ ಹಿನ್ನೆಲೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅರೆಯೂರು ಗ್ರಾಮದ ಬಸವರಾಜು ಎಂಬವರಿಗೆ ಸೇರಿದ ದನದಕೊಟ್ಟಿಗೆ

(ಮೊದಲ ಪುಟದಿಂದ) ನೆಲಸಮಗೊಂಡಿದೆ. ಬಳಗುಂದ ಗ್ರಾಮದ ಯಶೋಧ ಬಾಬು ಎಂಬವರ ವಾಸದ ಮನೆಗೆ ಮಳೆಯಿಂದ ಹಾನಿಯಾಗಿದ್ದು, 12 ಶೀಟ್‍ಗಳು ಜಖಂಗೊಂಡಿವೆ. ಸುಮಾರು 18 ಸಾವಿರ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಮಹದೇಶ್ವರ ಬಡಾವಣೆಯ ಅಣ್ಣಪ್ಪ ಅವರ ಮನೆಗೆ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿದೆ.

ಸಂಚಾರಕ್ಕೆ ಅಯೋಗ್ಯ: ಅಬ್ಬೂರುಕಟ್ಟೆ-ಸೀಗೇಹೊಸೂರು-ಯಲಕನೂರು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು, ಬೃಹತ್ ವಾಹನಗಳನ್ನು ಹೊರತು ಪಡಿಸಿ ಲಘು ವಾಹನಗಳ ಓಡಾಟಕ್ಕೆ ಸಂಚಕಾರ ಎದುರಾಗಿದೆ. ಪ್ರಗತಿಯಲ್ಲಿದ್ದ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ ರಸ್ತೆಯಲ್ಲಿ ಕೆಸರು ನಿರ್ಮಾಣವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ.

ರಸ್ತೆಗಳ ದುಸ್ಥಿತಿ: ಲೋಕೋಪಯೋಗಿ ಇಲಾಖೆಗೆ ಒಳಪಡುವ ತಾಲೂಕಿನ ಬಹುತೇಕ ರಸ್ತೆಗಳ ಬದಿಯಲ್ಲಿ ಚರಂಡಿ ನಿರ್ಮಿಸದೇ ಇರುವದರಿಂದ ಮಳೆಯ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ವಾರ್ಷಿಕ ನಿರ್ವಹಣೆಗೆಂದು ಲಕ್ಷಾಂತರ ರೂಪಾಯಿ ಬಿಲ್ ಮಾಡಿಕೊಂಡಿರುವ ಅಭಿಯಂತರರು ಹಾಗೂ ಗುತ್ತಿಗೆದಾರರ ಕರಾಮತ್ತಿನಿಂದ ಮಳೆಗಾಲದಲ್ಲಿ ಸಾರ್ವಜನಿಕರು ತೊಂದರೆ ಎದುರಿಸಬೇಕಿದೆ. ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವದರಿಂದ ವಾಹನಗಳು ಸಂಚರಿಸುವ ಸಂದರ್ಭ ಸಾರ್ವಜನಿಕರಿಗೆ ಕೆಸರಿನ ಸಿಂಚನವಾಗುತ್ತಿದೆ. ಹಲವೆಡೆ ಸುಸ್ಥಿತಿಯಲ್ಲಿದ್ದ ರಸ್ತೆಗಳೂ ದುರಸ್ತಿಗೀಡಾಗಿವೆ ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಹೇಳಿದ್ದಾರೆ.

ಶಾಂತಳ್ಳಿಗೆ ದಾಖಲೆ ಮಳೆ: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಶಾಂತಳ್ಳಿ ಹೋಬಳಿಯಾದ್ಯಂತ ಭಾರೀ ಮಳೆಯಾಗುತ್ತಿದೆ. ಹೆಗ್ಗಡಮನೆ, ನಾಡ್ನಳ್ಳಿ, ತಡ್ಡಿಕೊಪ್ಪ, ಕೊತ್ನಳ್ಳಿ, ಕುಡಿಗಾಣ, ಕುಂದಳ್ಳಿ, ಮಲ್ಲಳ್ಳಿ, ಬೆಟ್ಟದಳ್ಳಿ, ಹರಗ, ಕಿಕ್ಕರಳ್ಳಿ ಭಾಗದಲ್ಲಿ ದಿನದ 24 ಗಂಟೆಯೂ ಎಡೆಬಿಡದೇ ಮಳೆ ಸುರಿಯುತ್ತಿದೆ. ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನ 24 ಗಂಟೆ ಅವಧಿಯಲ್ಲಿ ಒಟ್ಟಾರೆ ಶಾಂತಳ್ಳಿ ಹೋಬಳಿಗೆ 9 ಇಂಚು ಮಳೆ ಸುರಿದ ಬಗ್ಗೆ ವರದಿಯಾಗಿದೆ. ಇದು ಈ ವರ್ಷದ ದಾಖಲೆಯ ಮಳೆಯಾಗಿದೆ.

ಸ್ತಬ್ಧಗೊಂಡ ವ್ಯಾಪಾರ ವಹಿವಾಟು: ಭಾರೀ ಮಳೆ ಗಾಳಿಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ವ್ಯಾಪಾರ ವಹಿವಾಟಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಸೋಮವಾರಪೇಟೆ ಪಟ್ಟಣದಲ್ಲಿ ಭಾನುವಾರದಂದು ಜನ ಸಂಚಾರ ವಿರಳವಾಗಿದ್ದುದು ಕಂಡುಬಂತು. ಹಲವಷ್ಟು ಅಂಗಡಿಗಳು ಬೆಳಗ್ಗಿನಿಂದಲೇ ಬಂದ್ ಆಗಿದ್ದರೆ, ಕೆಲವು ಅಂಗಡಿಗಳು 10 ಗಂಟೆಯ ನಂತರ ತೆರೆಯಲ್ಪಟ್ಟವು. ಬಸ್‍ಗಳಲ್ಲೂ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿತ್ತು. ಬಾರ್‍ಗಳನ್ನು ಹೊರತುಪಡಿಸಿದರೆ ಉಳಿದಂತೆ ಯಾವ ಅಂಗಡಿಯಲ್ಲೂ ಹೆಚ್ಚಿನ ವ್ಯಾಪಾರ ನಡೆಯಲಿಲ್ಲ.

ಪಟ್ಟಣದ ಸಭಾಂಗಣಗಳಲ್ಲಿ ಆಯೋಜಿಸಲಾಗಿದ್ದ ವಿವಾಹ ಸಮಾರಂಭಗಳಿಗೂ ಮಳೆಯಿಂದ ಅನಾನುಕೂಲವಾಯಿತು. ಆಮಂತ್ರಿತರಲ್ಲಿ ಅನೇಕರು ಮಳೆಯ ಕಾರಣದಿಂದ ಹೊರಬಾರದ ಹಿನ್ನೆಲೆ ಮದುವೆ ಮಂಟಪದಲ್ಲಿ ಬೇಸಿಗೆಯಲ್ಲಿ ಕಾಣಬರುತ್ತಿದ್ದ ಜನ ಕಂಡುಬರಲಿಲ್ಲ.

ಕಾರ್ಮಿಕರಿಗೆ ರಜೆ: ಭಾರೀ ಗಾಳಿ ಬೀಸುತ್ತಿರುವದರಿಂದ ಹಲವಷ್ಟು ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸ ನೀಡಲಿಲ್ಲ. ತೋಟದೊಳಗೆ ಮರಗಳು ಮುರಿದು ಬೀಳುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಕೈಕೊಡುತ್ತಿರುವ ಹಿನ್ನೆಲೆ ವರ್ಕ್‍ಶಾಪ್, ಮರಕೆಲಸಗಾರರು ಸೇರಿದಂತೆ ಇತರ ಕಾರ್ಮಿಕರ ಕೆಲಸ ಸ್ಥಗಿತಗೊಂಡಿದೆ.

ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 461.5 ಮಿ.ಮೀ. ಮಳೆ ಸುರಿದಿದೆ. ಸೋಮವಾರಪೇಟೆ ಕಸಾಬ ಹೋಬಳಿ ವ್ಯಾಪ್ತಿಗೆ 62.0, ಶಾಂತಳ್ಳಿಗೆ 222.0, ಕುಶಾಲನಗರಕ್ಕೆ 11.4, ಸುಂಟಿಕೊಪ್ಪಕ್ಕೆ 41.0, ಶನಿವಾರಸಂತೆಗೆ 56.7, ಕೊಡ್ಲಿಪೇಟೆಗೆ 68.4 ಮಿ.ಮೀ. ಮಳೆಯಾದ ಬಗ್ಗೆ ತಾಲೂಕು ಕಚೇರಿಯಲ್ಲಿ ವರದಿಯಾಗಿದೆ. – ವಿಜಯ್