ಮಡಿಕೇರಿ, ಜೂ. 10: ಕೊಡಗು ಜಿಲ್ಲೆಯಲ್ಲಿ ವಾಯು -ವರುಣ ರುದ್ರನರ್ತನ ಮುಂದುವರೆಸಿದ್ದು, ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಗತ್ತಲೆ ಆವರಿಸಿದೆ. ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಕಾವೇರಿಯು ತುಂಬಿ ಹರಿಯಲಾರಂಭಿಸಿದ್ದು, ಭಾಗಮಂಡಲ - ಅಯ್ಯಂಗೇರಿ, ಭಾಗಮಂಡಲ- ನಾಪೋಕ್ಲು ಹಾಗೂ ಭಾಗಮಂಡಲ- ಮಡಿಕೇರಿ ಮಾರ್ಗದಲ್ಲಿ ರಸ್ತೆ ಮುಳುಗಡೆಯೊಂದಿಗೆ ಸಂಚಾರ ಸ್ಥಗಿತಗೊಂಡಿದೆ. ಭಾಗಮಂಡಲಕ್ಕೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಖುದ್ದು ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು. ಆ ಬಳಿಕ ಅವರು ತಾ.11ರಂದು (ಇಂದು) ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ಮುನ್ನೆಚ್ಚರಿಕೆ ದೃಷ್ಟಿಯಿಂದ ರಜೆ ಘೋಷಿಸಿದ್ದಾರೆ. ಜಿಲ್ಲೆಯ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ವಿದ್ಯುತ್ ಕಣ್ಣುಮುಚ್ಚಾಲೆ ಆಡುತ್ತಿದ್ದು, ಗ್ರಾಮೀಣ ಭಾಗದ ಕಡಗದಾಳು, ಕತ್ತಲೆಕಾಡು, ಮುಕ್ಕೋಡ್ಲು, ಗಾಳಿಬೀಡು, ನಾಪೋಕ್ಲು, ಭಾಗಮಂಡಲ - ತಲಕಾವೇರಿ ಮುಂತಾದೆಡೆ ಮೂರು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದೆ. ಇತರೆಡೆಗಳಲ್ಲಿ ನಾಲ್ಕು ದಿನಗಳಿಂದ ಕಾರ್ಗತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದೆ ಎಂದು ಆಯಾ ಗ್ರಾಮವಾಸಿಗಳು ‘ಶಕ್ತಿ’ಯೊಂದಿಗೆ ಅಸಹಾಯಕತೆ ತೋಡಿಕೊಂಡಿದ್ದಾರೆ.
ಭಾಗಮಂಡಲ ವರದಿ: ಇಂದು ಬೆಳಿಗ್ಗೆ 9 ಗಂಟೆ ವೇಳೆಗೆ ಅಯ್ಯಂಗೇರಿ ರಸ್ತೆಯು ಜಲಾವೃತಗೊಂಡರೆ, ಮಧ್ಯಾಹ್ನ ಹೊತ್ತಿಗೆ ಭಾಗಮಂಡಲ- ಮಡಿಕೇರಿ ರಸ್ತೆ ಮುಳುಗಡೆಯಾಗಿದೆ. ಆ ಬೆನ್ನಲ್ಲೇ ಜಿಲ್ಲಾಧಿಕಾರಿ ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ತಹಶೀಲ್ದಾರ್ ಶಕುಂತಲಾ ಕಂದಾಯ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಿದರು. ಪೊಲೀಸ್ ಇಲಾಖೆಯ ಸಹಕಾರದಿಂದ ಹಲವು ಮಂದಿ ಪ್ರವಾಸಿಗರ ಆಕ್ಷೇಪದ ನಡುವೆಯೂ, ತಲಕಾವೇರಿ ಭೇಟಿಗೆ ಅವಕಾಶ ನೀಡದೆ ಮುನ್ನೆಚ್ಚರಿಕೆ ಕ್ರಮವಾಗಿ ಹಿಂದಕ್ಕೆ ಕಳುಹಿಸಿದರು. ಸ್ಥಳೀಯರ ಅನಿವಾರ್ಯ ಸಂಚಾರ ವೇಳೆ ತೀವ್ರ ನಿಗಾವಹಿಸುವದರೊಂದಿಗೆ ಸ್ಥಳದಲ್ಲೇ ಪೊಲೀಸರು ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಯಿತು.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸ್ಥಳದಲ್ಲಿ ಯಾವದೇ ಸಮಸ್ಯೆ ಎದುರಿಸಲು ಮುನ್ನೆಚ್ಚರಿಕೆ ವಹಿಸಿದ್ದು, ದೋಣಿ ವ್ಯವಸ್ಥೆ ಒಳಗೊಂಡಂತೆ ಸದಾ ಕಣ್ಗಾವಲು ಇರಿಸಲು ಕೆಳ ಹಂತದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮರದ ಕೊಂಬೆ ಬಿದ್ದು ಹಾನಿ: ಜಿಲ್ಲಾಧಿಕಾರಿ ವಸತಿಗೃಹಕ್ಕೆ ಹೊಂದಿಕೊಂಡಂತೆ ಭದ್ರತಾ ಸಿಬ್ಬಂದಿಯ ಕೊಠಡಿ ಮೇಲ್ಚಾವಣಿಗೆ ಹೊಂದಿಕೊಂಡಂತೆ ಮರದ ಕೊಂಬೆಯೊಂದು ಮುರಿದುಬಿದ್ದು, ಹೆಂಚುಗಳು ಒಡೆದು ಹೋದ ಘಟನೆಯೂ ಎದುರಾಯಿತು. ತಕ್ಷಣವೇ ಸಂಬಂಧಿಸಿದ ಇಲಾಖೆಯ ಮಂದಿ ಧಾವಿಸಿ ಹಾನಿಗೊಂಡಿದ್ದ ಛಾವಣಿ ದುರಸ್ತಿಗೊಳಿಸಿ, ಅಪಾಯ ಎದುರಾಗಲಿದ್ದ ಕೊಂಬೆಗಳನ್ನು ಅಲ್ಲಿಂದ ತೆರವುಗೊಳಿಸಿದರು.
ಸೋರುತ್ತಿರುವ ಬಂಗಲೆ: ಈ ನಡುವೆ ತೀರಾ ಹಳೆಯದಾಗಿರುವ ಜಿಲ್ಲಾಧಿಕಾರಿ ನಿವಾಸ ವಿಪರೀತ ಮಳೆಯಿಂದ ಎಲ್ಲೆಂದರಲ್ಲಿ ಸೋರತೊಡಗಿದ್ದು, ತುರ್ತು ಮೇಲ್ಚಾವಣಿ ಸೋರುವಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಪರಿಣಾಮ ಮಳೆಯ ತೀವ್ರತೆಯ ಅರಿವು ಜಿಲ್ಲಾಧಿಕಾರಿಗಳಿಗೂ ಅವರ ನಿವಾಸದಲ್ಲೇ ಆಗುವಂತಾಗಿದೆ.
ಕಾರ್ಗತ್ತಲೆ: ಜಿಲ್ಲಾ ಕೇಂದ್ರದ ಸುತ್ತಮುತ್ತಲಿನ ಗ್ರಾಮಗಳ ಸಹಿತ ಕೊಡಗಿನ ಕುಟ್ಟದಿಂದ ಕೊಡ್ಲಿಪೇಟೆ ತನಕ ಹಾಗೂ
(ಮೊದಲ ಪುಟದಿಂದ) ಅತ್ತ ಶಿರಂಗಾಲ ಗಡಿಯಿಂದ ಸಂಪಾಜೆ ಗಡಿ ಸುತ್ತಮುತ್ತಲಿನ ಬಹುತೇಕ ಕಡೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಾಗಿದೆ. ಗ್ರಾಮೀಣ ಜನತೆಯಂತೂ ಗಾಳಿ - ಮಳೆಯ ತೀವ್ರತೆ ನಡುವೆ ಇಡೀ ರಾತ್ರಿ ಕತ್ತಲೆಯಲ್ಲಿ ಕಳೆಯುವಂತಾಗಿದೆ. ಮೊಬೈಲ್‍ಗಳನ್ನು ಚಾರ್ಜು ಮಾಡಲಾಗದೆ ಸ್ಥಗಿತಗೊಂಡಿವೆ ಎಂದು ಮುಕ್ಕೋಡ್ಲುವಿನ ನೊಂದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಕಡಗದಾಳುವಿನ ಜಯಪ್ಪ ಕೂಡ ಗ್ರಾಮೀಣ ಜನತೆಯ ದುಸ್ಥಿತಿ ಕುರಿತು ವಿಷಾದ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಕಳೆದ 96 ಗಂಟೆಗಳಿಂದ ಸುರಿಯುತ್ತಿರುವ ಬಿಡುವಿಲ್ಲದ ಮಳೆ ಜನಜೀವನದೊಂದಿಗೆ ಜಾನುವಾರುಗಳ ಮೇವಿಗೂ ತೊಡಕಾಗಿ ಪರಿಣಮಿಸಿದೆ. ಸೋಮವಾರವೂ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿರುವದು ಸ್ವಲ್ಪ ನೆಮ್ಮದಿ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಕಳೆದ 48 ಗಂಟೆಗಳಲ್ಲಿ ತಲಕಾವೇರಿ - ಭಾಗಮಂಡಲ, ಬಿರುನಾಣಿ, ಶ್ರೀಮಂಗಲ ಸೇರಿದಂತೆ ಉತ್ತರ ಕೊಡಗಿನ ಶಾಂತಳ್ಳಿ ಹಾಗೂ ಪುಷ್ಪಗಿರಿ ತಪ್ಪಲು ಪ್ರದೇಶಗಳಾದ ಮುಟ್ಲು, ಹಮ್ಮಿಯಾಲ, ಕುಂಬಾರ ಗಡಿಗೆ, ಕಿಕ್ಕರಳ್ಳಿ, ಬೆಟ್ಟದಳ್ಳಿ, ಹೆಗ್ಗಡೆಮನೆ, ಕುಮಾರಳ್ಳಿ ಸುತ್ತಮುತ್ತ ಗಾಳಿಯ ತೀವ್ರತೆ ನಡುವೆ ಭಾರೀ ಮಳೆ ಸುರಿಯಲಾರಂಭಿಸಿದೆ. ಪರಿಣಾಮ ಕಾವೇರಿ ಹೊಳೆ, ಹಟ್ಟಿಹೊಳೆ, ಮಾದಾಪುರ ಹೊಳೆಗಳ ಸಹಿತ ದಕ್ಷಿಣ ಕೊಡಗಿನ ಬರಪೊಳೆ, ಲಕ್ಷ್ಮಣ ತೀರ್ಥ ಹರಿಯುವಿಕೆ ರಭಸಗೊಂಡು ನದಿ ತಟಗಳಲ್ಲಿ ನೀರಿನ ಮಟ್ಟ ಏರತೊಡಗಿದೆ ಎಂದು ಕಗ್ಗತ್ತಲಿನಲ್ಲಿ 4 ಗ್ರಾಮಗಳು
ಮಡಿಕೇರಿಯಿಂದ ಅನತಿ ದೂರದಲ್ಲಿರುವ ಮೇಕೇರಿ, ಕಗ್ಗೋಡ್ಲು, ಬಿಳಿಗೇರಿ, ಹಾಕತ್ತೂರು ಗ್ರಾಮಗಳಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಈ ನಾಲ್ಕು ಗ್ರಾಮಗಳು ಕೂಡ ಕಗ್ಗತ್ತಲಲ್ಲಿ ಮುಳುಗಿವೆ.
ಪರಿಣಾಮ ಸಾರ್ವಜನಿಕರ ದೈನಂದಿನ ಕೆಲಸಗಳಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಲೈನ್‍ಮೆನ್‍ಗೆ ಸಂಪರ್ಕಿಸಿದರೆ, ಕರೆ ಸ್ವೀಕರಿಸುವದಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವದಾಗಿ ಹಾಕತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಯು. ಹನೀಫ್, ಹಾಕತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶರೀನ್, ಹಾಕತ್ತೂರು ಎಸ್‍ಎಸ್ ಬ್ಯಾಂಕ್ ಜಾಜಿ ಅಧ್ಯಕ್ಷ ತೋರೆರ ಉದಯ ಹಾಗೂ ಸ್ಥಳೀಯ ಪ್ರಮುಖರು ಎಚ್ಚರಿಕೆಯಿತ್ತಿದ್ದಾರೆ.
ಸುರಕ್ಷತೆಗಾಗಿ ಪ್ರವಾಸಿಗರಿಗೆ ತಡೆ
ಮಡಿಕೇರಿ ಪೊಲೀಸ್ ಉಪ ವಿಭಾಗದ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡುತ್ತಾ, ಭಾಗಮಂಡಲದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯ ಕಾರಣ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರನ್ನು ತಲಕಾವೇರಿಗೆ ಬಿಡದೆ ವಾಪಾಸು ಕಳುಹಿಸಬೇಕಾಯಿತು ಎಂದು ತಿಳಿಸಿದರು. ಅಪಾಯದ ಮುನ್ಸೂಚನೆ ಇರುವ ಕಾವೇರಿ ಹೊಳೆ ದಂಡೆ ಪ್ರದೇಶಗಳು ಹಾಗೂ ಇತರ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರಲ್ಲದೆ, ತುರ್ತು ಸೇವೆಗಾಗಿ ಸಮೀಪದ ಪೊಲೀಸ್ ಠಾಣೆಗಳಿಗೆ ಅಥವಾ ಕಂಟ್ರೋಲ್ ರೂಂಗೆ ಸಂಪರ್ಕಿಸಲು ಜನತೆಗೆ ಸಲಹೆ ನೀಡಿದರು.
ತಲಕಾವೇರಿ 9, ಶಾಂತಳ್ಳಿ 8 ಇಂಚು ಮಳೆ
ಕೊಡಗಿನ ಪುಣ್ಯಕ್ಷೇತ್ರ ಕಾವೇರಿ ಉಗಮಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 9.14 ಇಂಚು ಮಳೆಯಾಗಿದೆ. ಭಾಗಮಂಡಲ ಸುತ್ತಮುತ್ತ 7.08 ಇಂಚು ಮಳೆಯಾದರೆ, ಉತ್ತರ ಕೊಡಗಿನ ಶಾಂತಳ್ಳಿಗೆ 8.74 ಇಂಚು ಮಳೆ ಸುರಿಯುವದರೊಂದಿಗೆ ಸುತ್ತಮುತ್ತಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಸರಾಸರಿ 6.93 ಇಂಚು ಮಳೆ ಸುರಿದರೆ, ನಾಪೋಕ್ಲು ವ್ಯಾಪ್ತಿಯಲ್ಲಿ 5.32 ಇಂಚು ಮಳೆಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ 3.81 ಇಂಚು, ಸಂಪಾಜೆ ಆಸುಪಾಸು 3.34 ಇಂಚು ಮಳೆ ಬಿದ್ದಿದೆ. ದಕ್ಷಿಣ ಕೊಡಗಿನ ಹುದಿಕೇರಿ 5.90 ಇಂಚು, ಶ್ರೀಮಂಗಲ ಸುತ್ತಮುತ್ತ 4.22 ಇಂಚು ಮಳೆಯಾಗಿದೆ. ಬಾಳೆಲೆಯಲ್ಲಿ 2.24 ಇಂಚು, ಅಮ್ಮತ್ತಿ 3.14 ಇಂಚು, ಪೊನ್ನಂಪೇಟೆ 1.07 ಇಂಚು ಮಳೆ ದಾಖಲಾಗಿದೆ. ತಾಲೂಕು ಕೇಂದ್ರ ವೀರಾಜಪೇಟೆ ಸುತ್ತಮುತ್ತ 2.12 ಇಂಚು ಮಳೆಯಾಗಿದೆ.
ಸೋಮವಾರಪೇಟೆ ತಾಲೂಕು ಕೇಂದ್ರದ ಆಸುಪಾಸಿನಲ್ಲಿ 2.44 ಇಂಚು, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 2.67 ಇಂಚು, ಶನಿವಾರಸಂತೆ 2.23 ಇಂಚು ಹಾಗೂ ಕುಶಾಲನಗರಕ್ಕೆ 0.44 ಇಂಚು ಮಳೆಯಾಗಿದ್ದು, ಸುಂಟಿಕೊಪ್ಪ 0.62 ಇಂಚು ಮಳೆ ದಾಖಲಾಗಿದೆ.