ಮಡಿಕೇರಿ, ಜೂ. 10: ರಾಜ್ಯ ಸಹಕಾರ ಮಹಾಮಂಡಲದ ವತಿಯಿಂದ ಮೈಸೂರಿನಲ್ಲಿ ತಾ. 8 ರಂದು ನಡೆದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಕೊಡಗಿಗೆ ಎರಡು ಪ್ರಶಸ್ತಿಗಳು ಲಭ್ಯವಾಗಿವೆ. ಈ ಸ್ಪರ್ಧೆಯಲ್ಲಿ ಮಡಿಕೇರಿಯ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್‍ನ 115ನೇ ತಂಡದ ಶಿಕ್ಷಣಾರ್ಥಿಗಳಾದ ಹರ್ಷಿತ ಪಿ.ಎಂ. ಹಾಗೂ ದೇಚಮ್ಮ ಎ.ಎಲ್. ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹರ್ಷಿತ ವೈಯಕ್ತಿಕ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ಗುಂಪು ವಿಭಾಗದಲ್ಲಿ ಹರ್ಷಿತ ಹಾಗೂ ದೇಚಮ್ಮ ರಾಜ್ಯಕ್ಕೆ ಚಾಂಪಿಯನ್ ಆಗಿದ್ದಾರೆ. ಧಾರವಾಡಕ್ಕೆ ಎರಡನೇ ಸ್ಥಾನ ಹಾಗೂ ಬೆಳಗಾಂ ತೃತೀಯ ಸ್ಥಾನ ಪಡೆದಿದೆ. ಒಟ್ಟು 8 ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿದ್ದು, ಕೊಡಗಿನ ಈ ಸ್ಪರ್ಧಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.
‘ಸಹಕಾರ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ಮತ್ತು ಆವಿಷ್ಕಾರಗಳು ಮಾತ್ರವೇ ಸಹಕಾರ ಚಳುವಳಿಯನ್ನು ಉಳಿಸಬಲ್ಲವು - ಬೆಳೆಸಬಲ್ಲವು’ ಎಂಬ ವಿಷಯದ ಪರಮತ್ತು ವಿರೋಧವಾಗಿ ಇವರುಗಳು ಸ್ಪರ್ಧೆಯಲ್ಲಿ ವಾದ ಮಂಡಿಸಿ ಜಿಲ್ಲಾ ಸಂಸ್ಥೆಗೆ ಪ್ರಥಮ ಸ್ಥಾನದೊಂದಿಗೆ ಪಾರಿತೋಷಕ ಪಡೆದಿರುವದಾಗಿ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿರುವ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು ತಿಳಿಸಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಂಡಳದ ರಾಜ್ಯ ಅಧ್ಯಕ್ಷ ಎನ್. ಗಂಗಣ್ಣ, ನಿರ್ದೇಶಕರಾದ ಮನುಮುತ್ತಪ್ಪ, ಚಂದ್ರಶೇಖರ್, ವ್ಯವಸ್ಥಾಪಕ ನಿರ್ದೇಶಕ ಅರುಣ್‍ಕುಮಾರ್ ಹಾಜರಿದ್ದರು.
ಅಂತರ ಸಹಕಾರ ತರಬೇತಿ ಕೇಂದ್ರಗಳ ಚರ್ಚಾ ಸ್ಪರ್ಧೆಯ ವಿಜೇತರಾಗಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ ಇದರ 115ನೇ ತಂಡದ ಶಿಕ್ಷಣಾರ್ಥಿಗಳಾದ ಹರ್ಷಿತ ಪಿ.ಎಂ ಹಾಗೂ ದೇಚಮ್ಮ ಎ.ಎಲ್ ಅವರು “ಸಹಕಾರ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ಮತ್ತು ಆವೀಷ್ಕಾರಗಳು ಮಾತ್ರವೇ ಸಹಕಾರ ಚಳುವಳಿಯನ್ನು ಉಳಿಸಬಲ್ಲವು ಬೆಳೆಸಬಲ್ಲವು” ಎಂಬ ವಿಷಯದ ಪರ ಮತ್ತು ವಿರೋಧವಾಗಿ ವಾದವನ್ನು ಮಂಡಿಸಿ ತರಬೇತಿ ಸಂಸ್ಥೆಗೆ ಪ್ರಥಮ ಸ್ಥಾನವನ್ನು ಮತ್ತು ಪಾರಿತೋಷಕವನ್ನು ತಂದುಕೊಟ್ಟಿರುತ್ತಾರೆ.