ವೀರಾಜಪೇಟೆ, ಜೂ. 9 : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಅಪರಾಹ್ನದಿಂದ ನಿರಂತರ ಮಳೆ ಸುರಿದಿದೆ. ಮಧ್ಯ ರಾತ್ರಿ ನಂತರವೂ ಗುಡುಗು ಮಿಂಚು ಸಹಿತ ಮಳೆ ಸುರಿದ ಪರಿಣಾಮವಾಗಿ ಇಲ್ಲಿನ ನೆಹರೂನಗರದಲ್ಲಿರುವ ಪಟ್ಟಣ ಪಂಚಾಯಿತಿಗೆ ಸೇರಿದ ನೀರು ಪೊರೈಕೆಯ ಪಂಪ್ ಹೌಸ್ ಕಟ್ಟಡದ ಮೇಲೆ ಇಂದು ಬೆಳಿಗ್ಗೆ ಬುಡ ಸಮೇತವಾಗಿ ಮರ ಬಿದ್ದು ಹಾನಿಯಾಗಿದೆ. ಇಲ್ಲಿನ ತೆಲುಗರ ಬೀದಿಯ ಸುಭಾಷ್ ಎಂಬವರ ಮನೆಯ ಹಿಂಭಾಗದಲ್ಲಿ ಮನೆ ಮೇಲೆ ಮರಬಿದ್ದು ಜಖಂಗೊಂಡಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ಮರ ಬಿದ್ದ ಸ್ಥಳಕ್ಕೆ ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್ ಸಿಬ್ಬಂದಿಗಳು ಖುದ್ದು ಭೇಟಿ (ಮೊದಲ ಪುಟದಿಂದ) ನೀಡಿ ಮರಗಳನ್ನು ತೆರವುಗೊಳಿಸಿದರು. ವೀರಾಜಪೇಟೆ ವಿಭಾಗದಲ್ಲಿ ಭಾರೀ ಮಳೆಯಾಗುತ್ತಿರುವದರಿಂದ ಪಟ್ಟಣ ಪಂಚಾಯಿತಿಯಿಂದ ಆರು ಮಂದಿಯ ವಿಪತ್ತು ತಂಡವನ್ನು ರಚಿಸಲಾಗಿದ್ದು ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಈ ತಂಡ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಲಿದ್ದಾರೆ. ಪಟ್ಟಣದ ಆಯ್ದ ಭಾಗಗಳಲ್ಲಿ ಚರಂಡಿಯನ್ನು ಕಸ ಕಡ್ಡಿಗಳನ್ನು ತೆಗೆದು ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡÀಲಾಗಿದೆ ಮಳೆ ನಿಂತ ಕೂಡಲೇ ಮುಂಜಾಗರೂತಾ ಕ್ರಮವನ್ನು ಕೈಗೊಳ್ಳಲು ಪೂರ್ವ ಸಿದ್ಧತೆ ನಡೆಸಲಾಗಿದೆ ಎಂದು ಹೇಮ್‍ಕುಮಾರ್ ತಿಳಿಸಿದ್ದಾರೆ.

ನಿರಂತರವಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗುತ್ತಿರುವದರಿಂದ ವೀರಾಜಪೇಟೆ ಪಟ್ಟಣದ ಜನತೆಗೆ ಸಮರ್ಪಕವಾಗಿ ನಲ್ಲಿ ನೀರು ಪೊರೈಸಲು ಅಡಚಣೆ ಉಂಟಾಗುತ್ತಿದೆ. ವಿದ್ಯುತ್ ಸಂಪರ್ಕ ಸರಿಯಾಗುವ ತನಕ ಪಟ್ಟಣದಲ್ಲಿ ನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಹೇಮ್‍ಕುಮಾರ್ ತಿಳಿಸಿದರು.

ನಿನ್ನೆ ದಿನ ಬೆಳಗಿನಿಂದ ಇಂದು ಬೆಳಗಿನ ಎಂಟು ಗಂಟೆಯವರೆಗೆ ವೀರಾಜಪೇಟೆ ವಿಭಾಗಕ್ಕೆ ಒಟ್ಟು 1.6 ಇಂಚುಗಳಷ್ಟು ಮಳೆ ಸುರಿದಿದೆ. ಇಂದು ಬೆಳಗಿನಿಂದಲೇ ಈ ವಿಭಾಗಕ್ಕೆ ಮಳೆ ಸುರಿಯುತ್ತಿದ್ದು ಅಪರಾಹ್ನದ ನಂತರವೂ ರಭಸದಿಂದ ಮಳೆ ಸುರಿಯಿತು. ಮೋಡ ಕವಿದ ವಾತಾವರಣವು ಮುಂದುವರೆದಿದೆ.

ನಿರಂತರ ಮಳೆಯ ಪರಿಣಾಮವಾಗಿ ಬೇತರಿ ಗ್ರಾಮದ ಕಾವೇರಿ ಹೊಳೆ ನೀರಿನ ಮಟ್ಟ ಇಂದು ನಾಲ್ಕು ಅಡಿಗಳವರೆಗೆ ಏರಿಕೆ ಕಂಡಿದೆ. ವೀರಾಜಪೇಟೆಗೆ ಸಮೀಪದ ಕದನೂರು ಹೊಳೆ ತುಂಬಿ ಹರಿಯುತ್ತಿದೆ.

ನಿನ್ನೆ ದಿನ ರಾತ್ರಿ ಸುರಿದ ಮಳೆಯ ಪರಿಣಾಮವಾಗಿ ಕರಡ ಗ್ರಾಮದ ಮುಖ್ಯರಸ್ತೆಯಿಂದ ನಾಪೋಕ್ಲುವಿಗೆ ಹೋಗುವ ಮುಖ್ಯರಸ್ತೆಯಲ್ಲಿ ಇಂದು ಬೆಳಿಗ್ಗೆ ಮರ ಬಿದ್ದು ಕೆಲ ಗಂಟೆಗಳ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ತಿತಿಮತಿ ಬಳಿ ಮನೆ ಜಖಂ - ಗಾಳಿಗೆ ಬಿದ್ದ ಮರ

ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಣಿಜ್ಯ ನಗರ ಗೋಣಿಕೊಪ್ಪಲಿನ ಕೀರೆ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹಳ್ಳ,ಕೊಳ್ಳಗಳು ತುಂಬಿ ಹರಿಯುತ್ತಿವೆ.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಣಿಹಡ್ಲು ಗ್ರಾಮದ ಕಾರ್ಮಿಕ ಮಹಿಳೆ ಮುತ್ತಮ್ಮ ಎಂಬುವರ ಮನೆಯ ಮೇಲೆ ಮರ ಉರುಳಿ ಬಿದ್ದಿದು ಮನೆ ಭಾಗಶಃ ಮುರಿದು ಬಿದ್ದಿದೆ. ಯಾವದೇ ಪ್ರಾಣ ಹಾನಿ ಸಂಭವಿಸಿರುವದಿಲ್ಲ. ಸುದ್ದಿ ತಿಳಿದ ಪೊನ್ನಂಪೇಟೆಯ ರೆವಿನ್ಯೂ ಅಧಿಕಾರಿಗಳಾದ ಮಂಜುನಾಥ್, ಮುಕುಂದ, ಇನ್ನಿತರರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ.ನಗರದ ನಿವಾಸಿಗಳಾದ ಸಂಶುನ್ನಿಶಾ ಹಾಗೂ ಅಬ್ದುಲ್ ಮನ್ನಸಾ ಎಂಬುವರ ಮನೆಗೆ ಸಮೀಪದಲ್ಲಿದ್ದ ಮರ ಉರುಳಿ ಬಿದ್ದಿದೆ. ಒಂದೇ ಮರವು ಎರಡು ಮನೆಗಳಿಗೂ ಹಾನಿ ಮಾಡಿವೆ. ಬೆಳ್ಳಿಗೆಯಿಂದಲೇ ಮಳೆ ಸುರಿಯುತ್ತಿದ್ದು ಸಂಜೆಯ ವೇಳೆಗೆ ಮಳೆ ಸ್ವಲ್ಪ ಪ್ರಮಾಣದ ಬಿಡುವು ನೀಡಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾದ ಕಾರಣ ಮಕ್ಕಳು ಶಾಲೆಗೆ ಬರುವ ಪ್ರಯತ್ನ ಮಾಡಲಿಲ್ಲ.

ಗೋಣಿಕೊಪ್ಪ ನಗರ ಹೊರತು ಪಡಿಸಿ ಗ್ರಾಮೀಣ ಪ್ರದೇಶವಾದ ತಿತಿಮತಿ, ಬಾಳೆಲೆ,ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇಲ್ಲದೆ ಜನತೆ ತಮ್ಮ ಮೊಬೈಲ್‍ಗಳನ್ನು ಚಾರ್ಜ್ ಮಾಡಿಸಿಕೊಳ್ಳಲು ನಗರದತ್ತ ಆಗಮಿಸುತ್ತಿದ್ದರು.ಗ್ರಾಮೀಣ ಭಾಗದಲ್ಲಿ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಸಿಬ್ಬಂದಿಗಳು ಮಳೆಯ ನಡುವೆ ಕೆಲಸದಲ್ಲಿ ನಿರತರಾಗಿದ್ದರು. ಕೆಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸಿಗಲು ಕೆಲವು ದಿನಗಳು ಬೇಕಾಗಲಿದೆ. ಶೀಮಂಗಲ,22,ಬಾಳೆಲೆ,18, ಗೋಣಿಕೊಪ್ಪ,23, ವಿದ್ಯುತ್ ಕಂಬಗಳು ಹಾಗೂ 8 ಟ್ರಾನ್ಸ್‍ಫಾರಂ ಹಾಳಾಗಿವೆ. ನಿಟ್ಟೂರು ಬಳಿ ಇರುವ ಲಕ್ಷ್ಮಣ ತೀರ್ಥ ನದಿ ನೀರು ಅಪಾಯ ಮಟ್ಟ ಮೀರಿರುವದಿಲ್ಲ. ವಾಹನ ಸಂಚಾರ ಎಂದಿನಂತೆ ಸಾಗಿದೆ.

ಸಿದ್ದಾಪುರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ.

ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಭಾರಿ ಗಾಳಿಗೆ ಮರಗಳು ಧರೆಗುರುಳಿದೆ. ಸಿದ್ದಾಪುರದ ಅಂಬೇಡ್ಕರ್ ನಗರ, ಒಂಟಿಯಂಗಡಿ ಹಾಗೂ ಗುಹ್ಯ ಗ್ರಾಮದಲ್ಲಿ ರಸ್ತೆಗೆ ಮರಗಳು ಉರುಳಿದ್ದು, ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅಲ್ಲದೆ, ಕೆಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಗುಹ್ಯ ಹಾಗೂ ಕರಡಿಗೋಡುವಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕರಾದ ಅನಿಲ್, ಗ್ರಾಮಲೆಕ್ಕಿಗ ಮಂಜುನಾಥ್, ಸಹಾಯಕರಾದ ಕೃಷ್ಣನ್‍ಕುಟ್ಟಿ, ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸದ್ಯದಲ್ಲೇ ಅಪಾಯದಂಚಿನಲ್ಲಿರುವ ನದಿ ದಡದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ನೋಟೀಸ್ ಜಾರಿ ಮಾಡಲಾಗುವದೆಂದು ಕಂದಾಯ ಇಲಾಖಾಧಿಕಾರಿಗಳು ‘ಶಕ್ತಿ’ಗೆ ತಿಳಿಸಿದರು.

ಅಭ್ಯತ್‍ಮಂಗಲ : ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಗಾಳಿ - ಮಳೆಗೆ 16 ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಮಡಿಕೇರಿ-ಸಿದ್ದಾಪುರ ರಸ್ತೆಯಲ್ಲಿ ಮರವೊಂದು ವ್ಯಾನ್ ಮೇಲೆ ಬೀಳುವ ಸಂಭವವಿತ್ತು. ಅದೃಷ್ಟವಶಾತ್ ಸ್ವಲ್ಪದರಲ್ಲೇ ಅಪಾಯ ತಪ್ಪಿದಂತಾಗಿದೆ. ನೆಲ್ಲಿಹುದಿಕೇರಿ ಶಾಲೆ ಬಳಿ ಬೃಹತ್ ಮರ ರಸ್ತೆಗಡ್ಡಲಾಗಿ ಬಿದ್ದು ಒಂದೂವರೆ ಗಂಟೆಗಳ ಕಾಲ ಸಂಚಾರ ಅವ್ಯವಸ್ಥೆಗೊಂಡಿತು.

ದಕ್ಷಿಣದಲ್ಲೂ ಕಾರ್ಗತ್ತಲೆ : ದಕ್ಷಿಣ ಕೊಡಗಿನ ಬಿರುನಾಣಿ, ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ, ಗೋಣಿಕೊಪ್ಪಲು ಹಾಗೂ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಕಳೆದ 48 ಗಂಟೆಗಗಳಲ್ಲಿ ವಿಪರೀತ ಮಳೆಯೊಂದಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ನಿನ್ನೆ ಹಾಗೂ ಇಂದು ಅಲ್ಪ ವೇಳೆ ವಿದ್ಯುತ್ ಕಾಣಿಸಿಕೊಂಡರೂ, ಗ್ರಾಮೀಣ ಭಾಗಗಳಲ್ಲಿ ಕಳೆದ ರಾತ್ರಿಯಿಂದಲೇ ಕತ್ತಲೆಯಿಂದ ಕಳೆಯುವಂತಾಗಿದೆ ಎಂದು ಗ್ರಾಮ ವಾಸಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಗಾಳಿ-ಮಳೆಯಿಂದ ಅಲ್ಲಲ್ಲಿ ಮರಗಳು, ಕೊಂಬೆಗಳು ಬಿದ್ದು ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವರದಿ : ರಾಜ್‍ಕುಮಾರ್, ಹೆಚ್.ಕೆ. ಜಗದೀಶ್, ವಾಸು, ಸುಧಿ