ಮಡಿಕೇರಿ, ಜೂ. 9: ಕೊಡಗು ಜಿಲ್ಲೆಯಲ್ಲಿ ಜೂನ್ ಎರಡನೇ ವಾರದಲ್ಲಿ ಮುಂಗಾರು ಮಳೆ ಮುಂದಡಿಯಿಟ್ಟಿದ್ದು, ಆರಂಭಿಕ ಎರಡು ದಿನಗಳ ವಾಯು - ವರುಣನ ಆರ್ಭಟಕ್ಕೆ ಜಿಲ್ಲೆ ತತ್ತರಿಸುವಂತಾಗಿದೆ. ಶೀತ - ಚಳಿಯ ನಡುವೆ ಗಾಳಿ ಸಹಿತವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಒಂದೆಡೆಯಾದರೆ ಅಲ್ಲಲ್ಲಿ ಧರೆಗು ರುಳಿರುವ ನೂರಾರು ವಿದ್ಯುತ್ ಕಂಬಗಳು, ಮರಗಳು, ಬರೆಕುಸಿತ ನದಿ - ತೊರೆಗಳಲ್ಲಿ ಏರುತ್ತಿರುವ ನೀರಿನ ಮಟ್ಟದೊಂದಿಗೆ ಮೂಲ ಸೌಕರ್ಯವಾದ ವಿದ್ಯುತ್ ಸಂಪರ್ಕ ಇಲ್ಲದ ಗಾಡಾಂಧಕಾರದಲ್ಲಿ ಜಿಲ್ಲೆ ಮುಳುಗಿದೆ. ಈ ಸನ್ನಿವೇಶದ ನಡುವೆ ಮಳೆ- ಗಾಳಿ ಶುರುವಾದ ಎರಡನೇ ದಿನದಲ್ಲೇ ಜಿಲ್ಲೆಯಲ್ಲಿ ವ್ಯಕ್ತಿಯೋರ್ವರು ಮುಂಗಾರಿನ ಪ್ರತಾಪಕ್ಕೆ ಅಮೂಲ್ಯ ಜೀವವನ್ನು ಕಳೆದುಕೊಂಡಿರುವಂತಹ ಸನ್ನಿವೇಶವನ್ನು ಜಿಲ್ಲೆ ಕಾಣು ವಂತಾಗಿದೆ. ಮಳೆಗಾಲ ಆರಂಭಗೊಂಡ ಎರಡನೇ ದಿನವೇ ಜಿಲ್ಲೆಯಲ್ಲಿನ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲ್ಪಟ್ಟಿರುವದು ಮಳೆಗಾಲದ ತೀವ್ರತೆಗೆ ಸಾಕ್ಷಿಯಾ ದಂತಾಗಿದೆ.

ಸಿದ್ದಾಪುರದಲ್ಲಿ ಇಂದು ವ್ಯಕ್ತಿಯೋರ್ವರು ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮರಬಿದ್ದು ಸಾವನ್ನಪ್ಪಿರುವ ದುರ್ಘಟನೆ ಒಂದೆಡೆಯಾದರೆ ಬೋಯಿಕೇರಿಯಲ್ಲಿ ಮರಬಿದ್ದು, ರಸ್ತೆ ಸಂಚಾರ ಸ್ಥಗಿತ ಗೊಳ್ಳುವಂತಾಗಿದ್ದು ಮತ್ತೊಂದೆಡೆ ಯಾಗಿದೆ. ಇದಲ್ಲದೆ ಹಲವಾರು ಕಡೆಗಳಲ್ಲಿ ಮರ ಉರುಳಿ ಕಟ್ಟಡ ಜಖಂಗೊಂಡಿರುವದು, ವಿದ್ಯುತ್ ಕಂಬಗಳು ಧರಾಶಾಹಿಯಾಗಿರುವ ಕುರಿತೂ ವರದಿಯಾಗಿದೆ. ಬಹುತೇಕ ಇಡೀ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.

ಬೆಳೆಗಾರರೋರ್ವರ ದಾರುಣ ಸಾವು

ಗಾಳಿ ಮಳೆಗೆ ಮರದ ಕೊಂಬೆಯೊಂದು ತೆಲೆ ಮೇಲೆ ಬಿದ್ದು ಕಾಫಿ ಬೆಳೆಗಾರರೋರ್ವರು ದಾರುಣವಾಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಮೀಪದ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ನೆಲ್ಯಹುದಿಕೇರಿ ಗ್ರಾಮದ ನಿವಾಸಿ, ಕಾಫಿ ಬೆಳೆಗಾರರು ಹಾಗೂ ವಿಂಟೇಜ್ ಕಾರ್‍ನ ಮಾಲೀಕರಾದ ಪಿ.ಸಿ ಅಹಮ್ಮದ್ ಕುಟ್ಟಿ ಹಾಜಿ ಅವರು ಎಂದಿನಂತೆ ಸಿದ್ದಾಪುರದಲ್ಲಿರುವ ತನ್ನ ಮನೆಯಿಂದ ನೆಲ್ಯಹುದಿಕೇರಿಯ ತೋಟಕ್ಕೆ ತೆರಳುತ್ತಿದ್ದು, ಶನಿವಾರದಂದು ಕೂಡ ತೋಟದಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರನ್ನು ನೋಡಲು ತೆರಳಿದ್ದಾರೆ ಎನ್ನಲಾಗಿದೆ. ಪೂರ್ವಾಹ್ನ 11 ಗಂಟೆ ಸಮಯದಲ್ಲಿ ತೋಟದಲ್ಲಿ ಕಾರ್ಮಿಕರ ಕೆಲಸವನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಮರದಿಂದ ಕೊಂಬೆಯೊಂದು ಬಿದ್ದಿದೆ. ಈ ಸಂದರ್ಭ ಅಹಮ್ಮದ್ ಕುಟ್ಟಿ ಹಾಜಿ ಅವರು ಕೊಂಬೆ ಬೀಳುವದನ್ನು ಗಮನಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ವಿಧಿಯಾಟ ಬೇರೆಯೇ ಇತ್ತು. ಕೊಂಬೆಯು ನೇರವಾಗಿ ಅಹಮ್ಮದ್ ಕುಟ್ಟಿ ಹಾಜಿ ಅವರ ತಲೆಯ ಮಧÀ್ಯ ಭಾಗಕ್ಕೆ ಬಿದ್ದಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಮಾತ್ರವಲ್ಲದೆ, ತಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ಅಲ್ಲೇ ಸ್ಥಳದಲ್ಲಿ ಜೊತೆಗಿದ್ದ ಸಂಬಂಧಿ ಯುವಕ ಹಾಗೂ ಕಾರ್ಮಿಕರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅವರನ್ನು ಕರೆದೊಯ್ಯ ಲಾಯಿತಾದರೂ, ಆಸ್ಪತ್ರೆಗೆ ತಲಪುವಷ್ಟರಲ್ಲಿ ಮೃತಪಟ್ಟಿದ್ದರು. ಸ್ಥಳಕ್ಕೆ ವೀರಾಜಪೇಟೆ ಹಾಗೂ ಸೋಮವಾರಪೇಟೆ ಕಂದಾಯ ತಹಶೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರ, ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಮೃತರು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷರಾದ ಪಿ.ಸಿ ಹಸೈನಾರ್ ಹಾಜಿ ಸಹೋದರರು.

ಸೌಮ್ಯ ಸ್ವಬಾವದ ವ್ಯಕ್ತಿತ್ವ

ಅಹಮ್ಮದ್ ಕುಟ್ಟಿ ಹಾಜಿರವರು ವಿಂಟೇಜ್ ಕಾರ್ ಎಂಬ ಪುರಾತನ ಕಾರುಗಳ ಸಂಗ್ರಹಾಲಯವನ್ನು ತನ್ನ ನೆಲ್ಯಹುದಿಕೇರಿಯ ತೋಟದಲ್ಲಿ ಹೊಂದಿದ್ದು, ಸ್ಥಳೀಯರೊಂದಿಗೆ ಹಾಗೂ ಕಾರನ್ನು ವೀಕ್ಷಿಸಲು ಬರುತ್ತಿದ್ದ ಪ್ರವಾಸಿಗರೊಂದಿಗೆ ಸೌಮ್ಯ ಸ್ವಬಾವದಿಂದ ಮಾತನಾಡಿಸುತ್ತಿದ್ದರು. ಮಾತ್ರವಲ್ಲದೇ ಸಿದ್ದಾಪುರ, ನೆಲ್ಯಹುದಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಜನರಿಗೆ ಚಿರ ಪರಿಚಿತರಾಗಿದ್ದರು.

(ಮೊದಲ ಪುಟದಿಂದ) ಕಾರುಗಳ ಸಂಗ್ರಹ ಹವ್ಯಾಸ : ಮೃತ ಅಹಮ್ಮದ್ ಕುಟ್ಟಿ ಅವರು ಪುರಾತನ ಕಾರುಗಳನ್ನು ಸಂಗ್ರಹಿಸುವ ಹವ್ಯಾಸಿಯಾಗಿದ್ದು, ಸುಮಾರು 100 ಕ್ಕೂ ಹೆಚ್ಚು ಹಳೇಯ ಕಾರುಗಳ ಒಡೆಯರಾಗಿದ್ದರು. ಸ್ವಾತಂತ್ರ್ಯಕ್ಕೂ ಮೊದಲಿನ ಕಾರುಗಳು ಸೇರಿದಂತೆ ವಿವಿಧ ಬಗೆಯ ಕಾರುಗಳನ್ನು ಹೊಂದಿದ್ದ ಹಾಜಿ ಅವರು ಮೊದಲಿಗೆ ಸಿದ್ದಾಪುರ ಪಟ್ಟಣದಲ್ಲಿ ಕಾರುಗಳ ವೀಕ್ಷಣೆಗೆ ಸಂಗ್ರಹಾಲಯವನ್ನು ಆರಂಭಿಸಿ, ಬಳಿಕ ನೆಲ್ಯಹುದಿಕೇರಿಯ ಅವರ ತೋಟದ ವಿಶಾಲ ಪ್ರದೇಶದಲ್ಲಿ ವಿಂಟೇಜ್ ಕಾರ್ ಎಂಬ ಹೆಸರಿನ ಸಂಗ್ರಹಾಲಯ ಹೊಂದಿದ್ದರು. ದಿನಂಪ್ರತಿ ನೂರಾರು ಮಂದಿ ಪ್ರವಾಸಿಗರು ವಿಂಟೇಜ್ ಕಾರ್ ವೀಕ್ಷಣೆಗೆ ಆಗಮಿಸಿ, ಕಾರುಗಳ ವೀಕ್ಷಣೆ ಮಾಡುತ್ತಿದ್ದಾರೆ.

ಸಂತಾಪ ಸೂಚಿಸಿ ಬಂದ್: ಮೃತ ಅಹಮ್ಮದ್ ಕುಟ್ಟಿ ಹಾಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ಪಟ್ಟಣದ ವ್ಯಾಪಾರಿಗಳು ಸಂಜೆ 4 ರಿಂದ 6 ಗಂಟೆಯವರೆಗೆ ಸ್ವಯಂಘೋಷಿತವಾಗಿ ಮುಚ್ಚುವದರೊಂದಿಗೆ ಸಂತಾಪ ಸೂಚಿಸಿದರು.

ಕಾರ್ಗತ್ತಲಿನಲ್ಲಿ ಮುಳುಗಿದ ಕೊಡಗು : ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮುಂಗಾರು ಮಳೆ ಹಾಗೂ ಬೀಸುತ್ತಿರುವ ರಭಸದ ಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಗಲೋ- ರಾತ್ರಿಯೋ ಎಂದು ತಿಳಿಯದಂತೆ ಹಗಲು ವೇಳೆ ಕೂಡ ಮುಸುಕಿದ ಮೋಡದಿಂದ ಗಾಡಾಂಧಕಾರ ವ್ಯಾಪಿಸಿದೆ. ಈ ನಡುವೆ ಜಿಲ್ಲೆಯಾದ್ಯಂತ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರನ್ನು ಅಸಹಾಯಕರನ್ನಾಗಿಸಿದೆ. ಮಡಿಕೇರಿಯಲ್ಲಿ ಕಳೆದೆರಡು ದಿನಗಳಿಂದಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕೇವಲ ಕಣ್ಣಾಮುಚ್ಚಾಲೆಯಂತೆ ಬಂದು ಹೋಗುತ್ತಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ವಿದ್ಯುತ್ ಸರಬರಾಜು ಸಂಪೂರ್ಣ ನಿಲುಗಡೆಗೊಂಡಿದೆ. ಭಾರೀ ಮಳೆ- ಗಾಳಿಯೊಂದಿಗೆ ಜನರು ಹೊರಹೋಗದಂತಾಗಿದೆ ಎಂದು ಭಾಗಮಂಡಲ ನಿವಾಸಿ ಕೆ.ಜೆ. ಭರತ್ ‘ಶಕ್ತಿ’ಗೆ ತಿಳಿಸಿದರು.

ಚೆಟ್ಟಳ್ಳಿ, ಸಿದ್ದಾಪುರ, ಮಾದಾಪುರ ಮತ್ತು ಮಡಿಕೇರಿ ವಿಭಾಗಗಳಲ್ಲಿ ಈಗಿನ ಮಳೆಯಿಂದಾಗಿ ಮರಗಳು ಬಿದ್ದು, ಅಲ್ಲಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿವೆ ಎಂದು ಜಿಲ್ಲಾ ಸೆಸ್ಕ್ ಇಇ ಬಿ. ಸೋಮಶೇಖರ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಕಳೆದೆರಡು ದಿನಗಳಲ್ಲಿಯೇ ಸುಮಾರು 70 ವಿದ್ಯುತ್ ಕಂಬಗಳು ಬಿದ್ದಿವೆ. ಹಂತಹಂತವಾಗಿ ಕಂಬಗಳನ್ನು ಹೊಸದಾಗಿ ಅಳವಡಿಸಲಾಗುತ್ತಿದೆ. 380 ಮಂದಿ ಲೈನ್‍ಮೆನ್‍ಗಳು ಜಿಲ್ಲೆಯಲ್ಲಿ ಸಮಾರೋಪಾದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಇ ತಿಳಿಸಿದರು. ಈ ವರ್ಷ ಇದುವರೆಗೆ 800 ವಿದ್ಯುತ್ ಕಂಬಗಳು ನೆಲಕಚ್ಚಿವೆ. ದಿನಕ್ಕೆ ಹೆಚ್ಚೆಂದರೆ 25 ಕಂಬಗಳನ್ನು ಮಾತ್ರ ಅಳವಡಿಸಲು ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ. ಸದ್ಯದಲ್ಲಿಯೇ ಸರಕಾರದಿಂದ 150 ಮಂದಿ ಗ್ಯಾಂಗ್‍ಮೆನ್‍ಗಳನ್ನು ನಿಯೋಜಿಸಲು ಅವಕಾಶ ದೊರಕಿದೆ. ಇದರಿಂದಾಗಿ ಹೆಚ್ಚಿನ ಗಮನ ಕೊಡುವ ಸಾಧ್ಯತೆಯಿದೆ. ಅಲ್ಲದೆ ಹೊಸದಾಗಿ 24 ಪಿಕ್‍ಅಪ್ ವಾಹನಗಳಿಗೆ ಮಂಜೂರಾತಿ ದೊರಕಿದ್ದು, ಸದ್ಯದಲ್ಲಿಯೇ ಈ ವಾಹನಗಳು ಬಳಕೆಗೆ ಲಭ್ಯವಾಗಲಿದೆ ಎಂದು ಸೋಮಶೇಖರ್ ವಿವರಿಸಿದರು. ವಿದ್ಯುತ್ ಲೈನ್‍ಗಳಲ್ಲಿ ಅಪಾಯದ ಸಂದರ್ಭ ಕೊಡಗಿನ ಜನತೆ ಟೋಲ್‍ಫ್ರೀ ದೂರವಾಣಿ ಸಂಖ್ಯೆ 1912ಕ್ಕೆ ಕರೆ ಮಾಡುವ ಮೂಲಕ ಜಾಗೃತಿಗೊಳಿಸಬಹು ದಾಗಿದೆ. ತುರ್ತು ಸನ್ನಿವೇಶವಿದ್ದಲ್ಲಿ ಇಲಾಖಾ ಸಿಬ್ಬಂದಿ ತಕ್ಷಣವೇ ಸ್ಪಂದಿಸುತ್ತಾರೆ ಎಂದು ಇಇ ಭರವಸೆಯಿತ್ತಿದ್ದಾರೆ.

ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಗುರುವಾರ ಸಂಜೆಯಿಂದ ಆರಂಭಗೊಂಡ ಮಳೆಯು ಬಿರುಸಿನಿಂದ ಸುರಿಯತ್ತಿದ್ದು, ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಮಡಿಕೇರಿ ರಸ್ತೆಯ ಕೊಟ್ಟಮುಡಿ, ಮುರ್ನಾಡು ರಸ್ತೆಯ ಬೊಳಿಬಾಣೆ, ಪಾರಾಣೆ ರಸ್ತೆಯ ಕೈಕಾಡು, ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆ ಸೇರಿದಂತೆ ಯಾವ ರಸ್ತೆಯಲ್ಲಿಯೂ ಪ್ರವಾಹದ ಭೀತಿ ಉಂಟಾಗಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಿರುವದನ್ನು ಬಿಟ್ಟರೆ ಪಟ್ಟಣದಲ್ಲಿ ಜನ ಜೀವನ ಸಾಮಾನ್ಯವಾಗಿತ್ತು.

ಗಾಳಿಯಿಂದ ಆತಂಕ: ಮಳೆಯೊಂದಿಗೆ ಬಿರುಸಿನಿಂದ ಬೀಸುತ್ತಿರುವ ಭಾರೀ ಗಾಳಿ ಜನರಲ್ಲಿ ಆತಂಕ ಮೂಡಿಸಿದೆ. ಗಾಳಿಯ ಪರಿಣಾಮ ಕಾಫಿ ತೋಟಗಳಲ್ಲಿ ಮರ ಮುರಿದು ನಷ್ಟ ಸಂಭವಿಸಿದೆ.

ಕತ್ತಲಲ್ಲಿ ಗ್ರಾಮಗಳು: ಗಾಳಿ- ಮಳೆಯ ರಭಸಕ್ಕೆ ವಿದ್ಯುತ್ ತಂತಿ ಮತ್ತು ಕಂಬದ ಮೇಲೆ ಮರ ಬಿದ್ದ ಕಾರಣ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಗ್ರಾಮಗಳು ಕತ್ತಲಿನಿಂದ ಕೂಡಿದಂತಾಗಿದೆ. ಇದರಿಂದ ಸಣ್ಣ ಕೈಗಾರಿಕೆ ನಡೆಸುವವರು. ಕಿರಾಣಿ ಅಂಗಡಿಯವರು ಸೇರಿದಂತೆ ಎಲ್ಲರಿಗೂ ಸಮಸ್ಯೆಯಾಗಿದೆ. ಸಾರ್ವಜನಿಕರು ಮೊಬೈಲ್ ಚಾರ್ಚ್ ಮಾಡಲೂ ಒದ್ದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ದೂರವಾಣಿ ವಿನಿಮಯ ಕೇಂದ್ರದಲ್ಲಿ ವಿದ್ಯುತ್ ಇಲ್ಲದ ಕಾರಣ ಮೊಬೈಲ್ ನೆಟ್‍ವರ್ಕ್ ಇಲ್ಲದಂತಾಗಿದೆ.

ನೆಲಜಿ ಗ್ರಾಮದ ಮಾಜಿ ಸೈನಿಕ ಮಾಣಿಚಂಡ ಎಸ್.ಪಳಂಗಪ್ಪ ಅವರ ಮನೆಯ ಮೇಲೆ ಶನಿವಾರ ಮಧ್ಯಾಹ್ನ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದು ಹಾನಿ ಸಂಭವಿಸಿದೆ. ಮನೆಯ ಸಮೀಪದ ಗೋಡೌನ್ ಮೇಲೆ ಮರ ಬಿದ್ದು ಶೀಟುಗಳು ಧ್ವಂಸಗೊಂಡಿವೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರಾಮಯ್ಯ ಗ್ರಾಮಲೆಕ್ಕಿಗರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೂಡಿಗೆ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಗಳಲ್ಲಿ ರೈತರು ಇದೀಗ ಬಿತ್ತನೆ ಮಾಡಿದ ಜೋಳವು ನೀರಿನಲ್ಲಿ ಕೊಚ್ಚಿಹೋಗಿ, ಕರಗುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ-ಹಾರಂಗಿ ನದಿ ಸಂಗಮವಾಗುವ ಕೂಡಿಗೆಯಲ್ಲಿ ಕಾವೇರಿ ನದಿಯ ನೀರಿನ ಹರಿಯುವಿಕೆ ಹೆಚ್ಚಾಗಿದೆ. ಸಮೀಪದ ಕಣಿವೆಯ ಶ್ರೀರಾಮಲಿಂಗೇಶ್ವರ ದೇವಾಲಯ ಎದುರಿನಲ್ಲಿರುವ ತೂಗು ಸೇತುವೆಯ ಮೇಲೆ ನಿಂತು ಪ್ರವಾಸಿಗರು ವೀಕ್ಷಿಸುತ್ತಿದ್ದುದು ಕಂಡುಬರುತ್ತಿದೆ.

ಹೆಬ್ಬಾಲೆ- ಬಾಣಾವರ ರಸ್ತೆಯ ಸಿದ್ಧಲಿಂಗಪುರ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಎರಡು ಮರಗಳು ರಸ್ತೆಗುರುಳಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ನಂತರ ರಸ್ತೆಯಿಂದ ಸಾರ್ವಜನಿಕ ಸಹಾಯದಿಂದ ಮರಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಯಿತು.

ಸುಂಟಿಕೊಪ್ಪ :ಮೃಗಶಿರ ಮಳೆಯ ಆರ್ಭಟದಿಂದ ಸುಂಟಿಕೊಪ್ಪ ಹೋಬಳಿ ವಿಭಾಗದಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ತೊಡಕಾಗಿದೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವು ಗ್ರಾಮಗಳು ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಗತ್ತಲು ಆವರಿಸಿದೆ. ತಾ.8.ರಂದು ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕಾಫಿ ತೋಟಕ್ಕೆ ಕೂಲಿ ಕೆಲಸ ನಿರ್ವಹಿಸಲು ಗಾಳಿ - ಮಳೆಯಿಂದ ಮಾಲೀಕರು ಕೆಲಸ ಮಾಡಲು ತೊಡಕುಂಟಾಗಿದೆ.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಮನೆಗೆ ತೆರಳುವ ಕುಂಬೂರು (ಲಕ್ಕೇರಿ) ಬಳಿ ರಸ್ತೆಗೆ ಬೃಹದಾಕಾರದ ಮರ ಮಳೆಗಾಳಿ ಹೊಡೆತ ಧರೆಗೆ ಬಿದ್ದಿದೆ. ಇದರಿಂದ ವಿದ್ಯುತ್ ಕಂಬ ವಯರ್‍ಗಳು ಮುರಿದು ಬಿದ್ದಿದೆ ಸೆಸ್ಕ್ ಇಲಾಖೆಯವರು, ಕಾರ್ಮಿಕರು ಮರವನ್ನು ಕೊಯ್ದು ತೆಗೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಾದಾಪುರದ ಜಂಬೂರು ಹೊಸತೋಟ, ಕಾಜೂರು, ಕೋವರ್‍ಕೊಲ್ಲಿ ಬಳಿ ಮರಗಳು ರಸ್ತೆಗೆ ಬಿದ್ದಿದೆ. ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಮಳೆಯ ಆರ್ಭಟ ಮುಂದುವರಿಯುವ ಸೂಚನೆ ಇದೆ. ಮಳೆಯಿಂದ ಚಳಿ ಗಾಳಿಯಿಂದ ದನಕರುಗಳು ಮೇವು ಅರಸಲು ಹೋಗದೆ ಕೊಟ್ಟಿಗೆಯಲ್ಲಿ ಬೀಡುಬಿಟ್ಟಿದೆ. ರೈತರು ಆಶಾದಾಯಕ ಮಳೆಯಿಂದ ಗದ್ದೆ ಉಳುಮೆ ಕಾಯಕದಲ್ಲಿ ತೊಡಗಿದ್ದಾರೆ. ಬೋಯಿಕೇರಿಯ ಸಿಂಕೋನ ಬಳಿ ಮರವೊಂದು ರಸ್ತೆಗುರುಳಿ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕುಂಟಾಗಿತ್ತು.

ಕುಶಾಲನಗರ : ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಬೀಳುತ್ತಿರುವ ಕಾರಣ ಕುಶಾಲನಗರ ಬಳಿ ಹರಿಯುತ್ತಿರುವ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಿನೆÀ್ನಲೆಯಲ್ಲಿ ಅಂದಾಜು 6 ಅಡಿಗಿಂತಲೂ ಅಧಿಕ ನೀರು ಹರಿಯುತ್ತಿದೆ. ಕುಶಾಲನಗರ ಕೊಪ್ಪ ಸೇತುವೆ ಕೆಳಭಾಗದಲ್ಲಿ ಇದೇ ಪ್ರಥಮ ಬಾರಿಗೆ ನದಿ ತುಂಬಿ ಹರಿಯುತ್ತಿರುವ ದೃಶ್ಯ ಕಾಣಬಹುದು.

ಕುಶಾಲನಗರ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ಮಳೆ ಸುರಿದಿದೆ. ಯಾವದೇ ಅನಾಹುತ ವರದಿಯಾಗಿಲ್ಲ.

ಗುಮ್ಮನಕೊಲ್ಲಿ ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ನಿವಾಸಿ ರಮೇಶನ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಕುಶಾಲನಗರ ಪೊಲೀಸರು ತಿಳಿಸಿದ್ದಾರೆ. ಮೃತನ ಕುಟುಂಬಸ್ಥರು ಕುಶಾಲನಗರಕ್ಕೆ ಬಂದಿದ್ದು ಮೃತದೇಹದ ಶೋಧದಲ್ಲಿ ತೊಡಗಿದ್ದಾರೆ.

ಶನಿವಾರಸಂತೆ : ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ಗಾಳಿಯ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿಯಿತು. ಶನಿವಾರಸಂತೆಯಿಂದ ಸೋಮವಾರಪೇಟೆಗೆ ಹೋಗುವ ಗುಡುಗಳಲೆ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಒಣಗಿದ ಮರದ ರೆಂಬೆ ಬಿದ್ದ ಪರಿಣಾಮ ಸವಾರ ಹಿತ್ತಲಕೇರಿ ಗ್ರಾಮದ ಗುಂಡಯ್ಯ ಗಾಯಗೊಂಡರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಕಾಲದಲ್ಲಿ ಮುಂಗಾರು : ಜಿಲ್ಲೆಯಲ್ಲಿ ಈ ಬಾರಿ ಸಕಾಲದಲ್ಲಿ ಮುಂಗಾರು ಆರಂಭಗೊಂಡಿದೆ. ಸಾಮಾನ್ಯವಾಗಿ ನೈಋತ್ಯ ಭಾಗಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಮಾಡಿ, ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳ ಮೂರನೇ ಅಥವಾ ಕೊನೆ ವಾರದಲ್ಲಿ ಚುರುಕು ಪಡೆದುಕೊಳ್ಳುತ್ತಿದ್ದ ಮುಂಗಾರು, ಈ ಬಾರಿ ಸಕಾಲದಲ್ಲಿ ಆರಂಭವಾಗಿರುವದು ರೈತರಲ್ಲಿ ಸಂತಸ ಹೆಚ್ಚಿಸಿದೆ. ಕಳೆದ 30-35 ವರ್ಷಗಳಲ್ಲಿ ಅತ್ಯಧಿಕ ಮಳೆಯಾಗಿ ದಾಖಲೆ ಸೇರಿದ್ದು 2007 ಮತ್ತು 2013ರ ಮುಂಗಾರು ಮಳೆ. 2013ರ ಜೂನ್ ಅಂತ್ಯ ಹಾಗೂ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ಕಣಿವೆಯ ಜಲಾಶಯಗಳು ಭರ್ತಿಯಾಗಿದ್ದವು. ಈ ಬಾರಿ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಚುರುಕು ಪಡೆದಿರುವದರಿಂದ ನದಿ, ತೊರೆ, ಹಳ್ಳಕೊಳ್ಳ, ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಈ ಬಾರಿ ವಾಡಿಕೆಯಂತೆ ಮಾರ್ಚ್ ಏಪ್ರಿಲ್, ಮೇ ತಿಂಗಳಲ್ಲಿ ಮಳೆಯಾದ್ದರಿಂದ ಕುಡಿಯುವ ನೀರಿಗೆ ಅಷ್ಟಾಗಿ ತೊಂದರೆ ಬರಲಿಲ್ಲ. ಸದ್ಯ ಸಕಾಲದಲ್ಲಿ ಉತ್ತಮ ಮಳೆಯಾಗುತ್ತಿರುವದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದ ವರೆಗೆ ವಾಡಿಕೆ ಮಳೆಯ ಪ್ರಮಾಣವು 9.66 ಇಂಚುಗಳಾಗಿದ್ದು, 2018 ರ ಜನವರಿಯಿಂದ ಇಲ್ಲಿಯ ವರೆಗೆ 16.68 ಇಂಚು ಮಳೆಯಾಗಿದೆ, 2017ರ ಇದೇ ಅವಧಿಯಲ್ಲಿ 12ಇಂಚು, 2016 ರ ಇದೇ ಅವಧಿಯಲ್ಲಿ 6.22 ಇಂಚು ಮಳೆಯಾಗಿರುವದನ್ನು ಗಮನಿಸಬಹುದಾಗಿದೆ.

ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 9.98 ಇಂಚುಗಳಾಗಿದ್ದು, 2018ರ ಜನವರಿಯಿಂದ ಇಲ್ಲಿಯವರೆಗೆ 24.2 ಇಂಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 13.55 ಇಂಚು ಮಳೆಯಾಗಿತ್ತು. 2016ರ ಇದೇ ಅವಧಿಯಲ್ಲಿ 9.24 ಇಂಚು ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 8.31 ಇಂಚುಗಳಾಗಿದ್ದು, 2018 ರ ಜನವರಿಯಿಂದ ಇಲ್ಲಿಯವರೆಗೆ 13.53 ಇಂಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 10.48 ಇಂಚು ಮಳೆಯಾಗಿತ್ತು. ಹಾಗೆಯೇ 2016 ರ ಇದೇ ಅವಧಿಯಲ್ಲಿ 4.81 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 10.69 ಇಂಚುಗಳಾಗಿದ್ದು, 2018ರ ಜನವರಿಯಿಂದ ಇಲ್ಲಿಯವರೆಗೆ 12.30 ಇಂಚು ಮಳೆಯಾಗಿದ್ದು, 2017ರ ಇದೇ ಅವಧಿಯಲ್ಲಿ 11.99 ಇಂಚು ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 4.62 ಇಂಚು ಮಳೆಯಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಮೇ ಅಂತ್ಯದ ವರೆಗೆ ಮಳೆಯ ಪ್ರಮಾಣ ಸರಾಸರಿ ವಾಡಿಕೆಗಿಂತ 6.69 ಇಂಚು ಹೆಚ್ಚು ಮಳೆಯಾಗಿರುವದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಹವಾಮಾನ ವಿಜ್ಞಾನಿಗಳ ಪ್ರಕಾರ ಈಗಾಗಲೇ ನೈಋತ್ಯ ಭಾಗದಲ್ಲಿ ಮಳೆ ಮುಂದುವರೆಯುವ ಲಕ್ಷಣ ಇರುವುದರಿಂದ, ಇನ್ನೂ ಎರಡು ಮೂರು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

-ವರದಿ: ಎ.ಎನ್. ವಾಸು, ಸಿಂಚು, ರಾಜುರೈ, ನಾಗರಾಜಶೆಟ್ಟಿ, ಪ್ರಭಾಕರ್, ದುಗ್ಗಳ, ನರೇಶ್.