ಸೋಮವಾರಪೇಟೆ, ಜೂ. 9: ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆ, ಬೃಹತ್ ಗಾತ್ರದ ಮರಗಳೂ ಅಲುಗಾಡುವಂತಹ ರಭಸದ ಗಾಳಿಗೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಮಂದಿ ತತ್ತರಿಸಿದ್ದು, ದಿನದ 24 ಗಂಟೆಯೂ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದೆ. ಕುಂಬೂರಿನಲ್ಲಿರುವ ಶಾಸಕರ ಮನೆಗೆ ತೆರಳುವ ರಸ್ತೆ ಬದಿಯಲ್ಲಿದ್ದ ಅಂಗನವಾಡಿ ಕೇಂದ್ರದ ಕಾಂಪೌಂಡ್ ಮೇಲೆ ಮರಬಿದ್ದು, ಸಂಪೂರ್ಣ ಜಖಂಗೊಂಡಿದೆ. ಇದರೊಂದಿಗೆ ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಹಾನಿಗಳ ಬಗ್ಗೆ ಮಾಹಿತಿ ಕೇಳಬೇಕಾದ ತಾಲೂಕು ಕಚೇರಿಯ ಕಂಟ್ರೋಲ್ ರೂಂ ಸ್ತಬ್ಧಗೊಂಡಿದೆ.

ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಗ್ರಾಮೀಣ ಭಾಗದ ಮಂದಿ ಮನೆಯಿಂದ ಹೊರಬರಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ಮೇಲೆಯೇ ಮರಗಳು ಉರುಳಿ ಬೀಳುತ್ತಿರುವದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಎಚ್ಚರಿಕೆಯಿಂದ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಂತೂ ಭಾರೀ ಮಳೆ ಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ವ್ಯಾಪ್ತಿಗೆ 6 ಇಂಚಿನಷ್ಟು ಮಳೆ ದಾಖಲಾಗಿದೆ. ಬೆಟ್ಟಶ್ರೇಣಿ ಪ್ರದೇಶದಲ್ಲಿ ವರ್ಷಾಧಾರೆಯಾಗುತ್ತಿರುವದರಿಂದ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಶಾಂತಳ್ಳಿ ಭಾಗಕ್ಕೆ 4 ಇಂಚು ಮಳೆ ದಾಖಲಾಗಿದೆ. ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರ ಹೋಗಲೂ ಅಸಾಧ್ಯವಾಗಿದೆ ಎಂದು ಬಸವನಕಟ್ಟೆ ಗ್ರಾಮದ ರವಿಕುಮಾರ್ ತಿಳಿಸಿದ್ದಾರೆ.

ಅಂಗನವಾಡಿ ಕಾಂಪೌಂಡ್ ಸಂಪೂರ್ಣ ಜಖಂ : ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮನೆಗೆ ತೆರಳುವ ಕುಂಬೂರು ಗ್ರಾಮದಲ್ಲಿನ ಲಕ್ಕೇರಿ ಪೈಸಾರಿ ಅಂಗನವಾಡಿ ಕೇಂದ್ರದ ಕಾಂಪೌಂಡ್ ಮೇಲೆ ಮರಬಿದ್ದು, ಸಂಪೂರ್ಣ ಜಖಂಗೊಂಡಿದೆ.

(ಮೊದಲ ಪುಟದಿಂದ) ಇಂದು ನಸುಕಿನ ವೇಳೆ ಮರಬಿದ್ದ ಪರಿಣಾಮ ಆವರಣಗೋಡೆ ಸಂಪೂರ್ಣ ಮುರಿದುಬಿದ್ದಿದೆ. ಇದರೊಂದಿಗೆ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆ ಬಿದ್ದಿದ್ದರಿಂದ ಶಾಸಕರ ಮನೆಗೆ ಸಂಪರ್ಕ ಹೊಂದಿರುವ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.