ಸೋಮವಾರಪೇಟೆ, ಜೂ. 9: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯು ಸ್ಥಳೀಯ ಪತ್ರಿಕಾ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಮಾತನಾಡಿ, ಸಂಘವು ರಾಷ್ಟ್ರೀಯ ಹಬ್ಬ ಸೇರಿದಂತೆ ಮಹಾನ್ ನಾಯಕರ ಹುಟ್ಟು ಹಬ್ಬಗಳನ್ನು ಆಚರಿಸುತ್ತಾ ಬರುತ್ತಿದೆ. ಅದಕ್ಕೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಪಾಲ್ಗೊಳ್ಳುವ ಮೂಲಕ ಆಚರಣೆಯ ಯಶಸ್ಸಿಗೆ ಸಹಕಾರ ನೀಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಇದೇ ರೀತಿಯಲ್ಲಿ ಮುಂದಿನ ಅವಧಿಯಲ್ಲಿಯೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು. ಮೃತಪಟ್ಟ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು. ಹಾಲಿ ಇರುವ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ಇದೇ ಆಡಳಿತ ಮಂಡಳಿಯನ್ನು ಮುಂದುವರೆಸುವಂತೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಎನ್. ನಾಗರಾಜು, ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಎಂ.ಕೆ. ಸುಕುಮಾರ್, ಲೆಕ್ಕ ಪರಿಶೋಧಕ ಎ.ಕೆ. ಮಾಚಯ್ಯ, ಮೇಜರ್ ಮಂದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.