ಮಡಿಕೇರಿ, ಜೂ. 9: ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಆರಂಭಿಕವಾದ ನಿರ್ಣಾಯಕ ಘಟ್ಟ. ಈ ಮೆಟ್ಟಿಲನ್ನು ಯಶಸ್ವಿಯಾಗಿ ಏರಲು ಪ್ರತಿಯೊಬ್ಬರೂ ಅದೆಷ್ಟೋ ಸಾಹಸ ಪಡುತ್ತಾರೆ. ಈ ರೀತಿಯ ಸಾಹಸದ ನಡುವೆ ಕೊಡಗಿನ ವಿದ್ಯಾರ್ಥಿಯೋರ್ವ ಅಭೂತಪೂರ್ವ ಸಾಧನೆ ತೋರಿ ಇಡೀ ಕರ್ನಾಟಕ ರಾಜ್ಯಕ್ಕೆ ಪ್ರಥಮ ರ್ಯಾಂಕ್‍ಗಳಿಸಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿರುವ ಯಶೋಗಾಥೆ ಇದು. ಈ ಬಾಲಕ ನೆರೆಯ ಹಾಸನ ಜಿಲ್ಲೆಯ ವಿದ್ಯಾರ್ಥಿಯಾಗಿದ್ದರೂ ಮೂಲತಃ ವೀರಾಜಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮಕ್ಕೆ ಸೇರಿದವರು ಎಂಬದು ಕೊಡಗಿಗೆ ಕೀರ್ತಿ.ಬಹುಶಃ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಈತನಕ ಕೊಡಗು ಜಿಲ್ಲೆಯ ಅಥವಾ ಕೊಡಗು ಮೂಲದ ವಿದ್ಯಾರ್ಥಿಗಳು ಶೇ. 100 ರಷ್ಟು ಫಲಿತಾಂಶ ಪಡೆದಿರುವ ನಿದರ್ಶನಗಳಿಲ್ಲ. ಶೇಕಡವಾರು ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆದಿ ದ್ದರೂ ನೂರಕ್ಕೆ ನೂರರಷ್ಟು ಫಲಿತಾಂಶ ಈತನಕ ಬಂದಿಲ್ಲ.

(ಮೊದಲ ಪುಟದಿಂದ) ಇದೀಗ ಹಳ್ಳಿಗಟ್ಟು ಗ್ರಾಮದವರಾದ ಮಚ್ಚಿಯಂಡ ಕಾಳಪ್ಪ ಹಾಗೂ ಪವಿತ್ರಾ ದಂಪತಿಯ ಪುತ್ರನಾದ ಕಾವೇರಪ್ಪ (ದೀಪು) ಈ ಇತಿಹಾಸ ಸೃಷ್ಟಿಸಿದ್ದಾನೆ. ಒಟ್ಟು 625 ಅಂಕಕ್ಕೆ 625 ಅಂಕಗಳಿಸಿರುವದು ಈತನ ಸಾಧನೆ.

ಕಾವೇರಪ್ಪ ಈ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್‍ಗಳಿಸಿದ್ದರೆ, ಈತನ ಅವಳಿ ಸಹೋದರ ಎಂ.ಕೆ. ಕುಶಾಲಪ್ಪ ಕೂಡ 601 ಅಂಕದೊಂದಿಗೆ ಶೇ. 96.18 ರಷ್ಟು ಸಾಧನೆ ತೋರಿರುವದು ಮತ್ತೊಂದು ವಿಶೇಷವಾಗಿದ್ದು, ತಂದೆ-ತಾಯಿಗೆ ಹೆಮ್ಮೆಯ ಅವಳಿ-ಜವಳಿ ಪುತ್ರರಾಗಿದ್ದಾರೆ.

ಆರಂಭದಲ್ಲಿ ಸಿಕ್ಕಿದ್ದು ಮೂರನೇ ಸ್ಥಾನ

ಪ್ರಸಕ್ತ ನಡೆದಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಾಗ ಕಾವೇರಪ್ಪನಿಗೆ ಸಿಕ್ಕಿದ್ದು 623 ಅಂಕದೊಂದಿಗೆ ರಾಜ್ಯದಲ್ಲಿ ಮೂರನೇ ಸ್ಥಾನ. ಈತ ಹಾಸನದ ಚಿಕ್ಕಹೊನ್ನೇನಹಳ್ಳಿಯ ವಿಜಯ ಆಂಗ್ಲ ಶಾಲೆಯ ವಿದ್ಯಾರ್ಥಿಯಾಗಿದ್ದು, ಪ್ರಾರಂಭದಿಂದಲೂ ಅತ್ಯುನ್ನತ ಶ್ರೇಣಿಯಲ್ಲಿಯೇ ಉತ್ತೀರ್ಣನಾಗುತ್ತಿದ್ದ. ಈತನ ಬಗ್ಗೆ ಪೋಷಕರು ಮಾತ್ರವಲ್ಲ ಆ ಶಾಲೆಯ ಶಿಕ್ಷಕರಲ್ಲೂ ಅಪಾರ ನಂಬಿಕೆ ಇತ್ತು. ಆದರೆ 625 ಕ್ಕೆ ಎರಡು ಅಂಕ ಕಡಿಮೆ ಬಂದಾಗ ಎಲ್ಲರಿಗೂ ನಿರಾಶೆಯಾಗಿತ್ತು. ಆದರೆ ಕಾವೇರಪ್ಪ ತನಗೆ ಪೂರ್ಣ ಅಂಕ ಸಿಗಲೇ ಬೇಕಿದೆ ಎಂದು ಖಚಿತ ವಿಶ್ವಾಸ ವ್ಯಕ್ತಪಡಿಸಿದ್ದ. ಈತನಿಗೆ ಇಂಗ್ಲೀಷ್‍ನಲ್ಲಿ ಎರಡು ಅಂಕ ಕಡಿಮೆಯಾಗಿತ್ತು. ಈ ಹಿನ್ನೆಲೆ ಪೋಷಕರು ರೂ. 305 ಹಣವನ್ನು ಪಾವತಿಸಿ ಇಲಾಖೆಯಿಂದ ಉತ್ತರ ಪ್ರತಿಯ ನಕಲು ಪಡೆದರು. ಇದನ್ನು ವೀಕ್ಷಿಸಿದ ಬಳಿಕ ಮತ್ತೆ ನಿಗದಿತ ಶುಲ್ಕ ಪಾವತಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದರಂತೆ ಮರು ಮೌಲ್ಯಮಾಪನಗೊಂಡು ಫಲಿತಾಂಶ ಬಂದಾಗ 625 ಕ್ಕೆ 625 ಅಂಕ ಲಭ್ಯವಾಗಿದ್ದು ರಾಜ್ಯದಲ್ಲಿ ಪ್ರಥಮ ರ್ಯಾಂಕ್‍ಗಳಿಸಿದ್ದ ಇನ್ನಿಬ್ಬರು ವಿದ್ಯಾರ್ಥಿಗಳ ಪಟ್ಟಿಗೆ ಕಾವೇರಪ್ಪ ಸೇರ್ಪಡೆಯಾಗಿದ್ದಾನೆ.

ಪೋಷಕರ ಹರ್ಷ

ಕಾವೇರಪ್ಪನ ಈ ಸಾಧನೆಗೆ ಪೋಷಕರಾದ ಮಚ್ಚಿಯಂಡ ಕಾಳಪ್ಪ ಹಾಗೂ ಪವಿತ್ರಾ (ತಾಮನೆ ಅಜ್ಜಿಕುಟ್ಟೀರ) ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆ ಆರಂಭದಲ್ಲಿ ಹುಸಿಯಾದಾಗ ನಿರಾಶೆಯಾಗಿತ್ತು. ಆದರೂ ಪುತ್ರನ ಬಗ್ಗೆ ವಿಶ್ವಾಸವಿತ್ತು. ಕಾವೇರಪ್ಪ ಹಾಗೂ ಕುಶಾಲಪ್ಪ ಅವಳಿ-ಜವಳಿ ಸಹೋದರರಾಗಿದ್ದು ಕುಶಾಲಪ್ಪನೂ ಶೇ. 96.18 ಫಲಿತಾಂಶಗಳಿಸಿದ್ದ. ಆದರೆ ಕಾವೇರಪ್ಪನಿಗೆ ಪೂರ್ಣ ಅಂಕ ಸಿಗುವ ಆಶಾಭಾವನೆಯಿತ್ತು. ಇದು ನಿಜವಾಗಿದೆ ಎಂದು ಅವರುಗಳು ‘ಶಕ್ತಿ’ಯೊಂದಿಗೆ ಹೆಮ್ಮೆಯಿಂದ ಹೇಳಿದರು.

ಕೇವಲ ಎಸ್.ಎಸ್.ಎಲ್.ಸಿ.ಯ ಪುಸ್ತಕಗಳನ್ನು ಮಾತ್ರ ಕಾವೇರಪ್ಪ ಓದುತ್ತಿರಲಿಲ್ಲ. ಬೇರೆ ಪುಸ್ತಕಗಳನ್ನು ಅನುಕರಣೆ ಮಾಡುವ ಹವ್ಯಾಸವಿತ್ತು. ಈತ 5ನೇ ತರಗತಿಯಲ್ಲಿದ್ದಾಗ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಕೊಡಗಿನವರೇ ಆದ ತುಳಸಿ ವಿಠಲ ಎಂಬವರು ಶಾಲೆ ಬದಲಿಸದಂತೆ ಸಲಹೆ ನೀಡಿ ರಾಜ್ಯದಲ್ಲಿ ರ್ಯಾಂಕ್ ಪಡೆಯುವ ವಿಶ್ವಾಸ ತೋರಿದ್ದರು ಎಂದು ಕಾಳಪ್ಪ ಸ್ಮರಿಸಿದರು. ಈ ಶಾಲೆಯ ಇತರ ಶಿಕ್ಷಕರೂ ತುಂಬಾ ಪ್ರೋತ್ಸಾಹ ನೀಡಿರುವದಾಗಿ ಹೇಳಿದ ತಾಯಿ ಪವಿತ್ರಾ ಪುತ್ರನೂ ಆರಂಭದಿಂದಲೇ ಕಷ್ಟಪಟ್ಟು ಓದುತ್ತಿದ್ದುದಾಗಿ ಹೇಳಿದರು. ಅವರು ಅತ್ಯುನ್ನತ ಸ್ಥಾನದ ನಿರೀಕ್ಷೆ ಆರಂಭದಿಂದಲೂ ಇತ್ತು ಎಂದರು. ಕಾಳಪ್ಪ ಅವರು ಹಾಸನದ ಕ್ಯೂರಿಂಗ್ ವಕ್ರ್ಸ್‍ವೊಂದರಲ್ಲಿ ಉದ್ಯೋಗಿಯಾಗಿದ್ದು, ಈ ಕುಟುಂಬ ಹಾಸನದಲ್ಲಿ ನೆಲೆಸಿದೆ.

- ಶಶಿ ಸೋಮಯ್ಯ.