ಮಡಿಕೇರಿ. ಜೂ. 8: ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಮೇಲ್ಮನೆಯ ಎರಡು ಸ್ಥಾನಗಳಿಗೆ ಇಂದು ಮಡಿಕೇರಿಯಲ್ಲಿ ಮಳೆಯ ನಡುವೆಯೇ ಮತದಾನ ಪ್ರಕ್ರಿಯೆ ಆರಂಭ ಗೊಂಡಿತು. ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಶಿಕ್ಷಕರ ಕ್ಷೇತ್ರಕ್ಕೂ, ನಗರಸಭೆ ಸಭಾಂಗಣದ ಮತಗಟ್ಟೆಯಲ್ಲಿ ಪದವೀಧರ ಕ್ಷೇತ್ರಕ್ಕೂ ಮತದಾನ ನಡೆಯಿತು.ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭ ಗೊಂಡಿತ್ತಾದರೂ, ಸುಮಾರು ಒಂದು ಗಂಟೆಗಳ ಸಮಯ ಎಂಟು ಗಂಟೆ ತನಕ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಮತ್ತು ಬಿಜೆಪಿಯ ಮತಗಟ್ಟೆ

(ಮೊದಲ ಪುಟದಿಂದ) ಏಜೆಂಟರ ಹೊರತಾಗಿ ಯಾರೊಬ್ಬರೂ ಮಳೆಯಿಂದಾಗಿ ಇತ್ತ ಕಡೆ ಸುಳಿದಿರಲಿಲ್ಲ.

ಬೋಪಯ್ಯ ದಂಪತಿ : ಎಂಟು ಗಂಟೆಯ ಸುಮಾರಿಗೆ ಮೂರ್ನಾಲ್ಕು ಮಂದಿ ಶಿಕ್ಷಕ ಮತದಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಪತ್ನಿ ಸಮೇತರಾಗಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಒಂಭತ್ತು ಗಂಟೆ ವೇಳೆಗೆ ಉಭಯ ಕ್ಷೇತ್ರಗಳಲ್ಲಿ ತಲಾ 9 ಮತಗಳು ಚಲಾಯಿಸಲಾಗಿತ್ತು. ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಠಾಣಾಧಿಕಾರಿ ಷಣ್ಮುಖಪ್ಪ ಸಿಬ್ಬಂದಿ ಯೊಂದಿಗೆ ಆಗಮಿಸಿ ಮತಗಟ್ಟೆ ಆಸುಪಾಸಿನ ಅಂಗಡಿ ಮಳಿಗೆಗಳನ್ನು ಕ್ಷಿಪ್ರಗತಿಯಲ್ಲಿ ಮುಚ್ಚಿಸಿ, ಅಲ್ಲಿ ಸುಳಿದಾಡುತ್ತಿದ್ದ ಸಾರ್ವಜನಿಕರನ್ನು ನಗರಸಭಾ ಹೊರಾಂಗಣದಿಂದ ಕಳುಹಿಸಿ ಗೇಟ್ ಮುಚ್ಚಿಸಿದರು.

ವರ್ತಕರ ಅಸಮಾಧಾನ : ನಗರಸಭೆ ಆವರಣದ ಬೇಕರಿ, ಹೊಟೇಲ್, ಮತ್ತಿತರ ಮಳಿಗೆಗಳ ವರ್ತಕರು ಈ ಬಗ್ಗೆ ಅಸಮಾಧಾನದೊಂದಿಗೆ ಸಂತೆ ದಿನವಾದ ಶುಕ್ರವಾರದ ವ್ಯಾಪಾರ ಹಾಳುಗೆಡವಿ ತಮಗಾಗಿರುವ ನಷ್ಟಕ್ಕೆ ಯಾರು ಹೊಣೆ ಎಂದು ಶಪಿಸತೊಡಗಿದ್ದ ದೃಶ್ಯ ಎದುರಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಉಪವಿಭಾಗಾಧಿಕಾರಿ ರಮೇಶ್ ಕೋನಾರೆಡ್ಡಿ, ತಹಶೀಲ್ದಾರ್ ಶಾರದಾಂಭ ಮೊದಲಾದವರು ಮಳೆಯ ನಡುವೆಯೂ ಮತಗಟ್ಟೆ ಬಳಿ ಮೊಕ್ಕಾಂ ಹೂಡುವದರೊಂದಿಗೆ ಪೊಲೀಸ್ ಬೆಂಗಾವಲಿನಲ್ಲಿ ಶಾಂತಿಯುತ ಮತದಾನ ನಡೆಯುವಂತೆ ನಿಗಾ ವಹಿಸಿದ್ದರು.

ಗಮನ ಸೆಳೆದ ಕ್ಷಣ : ಮಳೆಯ ನಡುವೆ ಕೆ.ಜಿ. ಬೋಪಯ್ಯ ಹಾಗೂ ಕುಂತಿ ಬೋಪಯ್ಯ ದಂಪತಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರೆ, ಮೇಲ್ಮನೆ ಸದಸ್ಯೆ ವೀಣಾಅಚ್ಚಯ್ಯ ಸೊಸೆಯೊಡನೆ ಮೊಮ್ಮಗುವಿನೊಂದಿಗೆ ಆಗಮಿಸಿ ಮತ ಚಲಾಯಿಸಿದ್ದು, ಎಲ್ಲರ ಗಮನ ಸೆಳೆಯಿತು. ಕಾಂಗ್ರೆಸ್ ಹಿರಿಯ ಮುಖಂಡ ಟಿ.ಪಿ. ರಮೇಶ್, ಶಾಸಕ ಕೆ.ಜಿ. ಬೋಪಯ್ಯ ಮತ್ತಿತರರು ಪರಸ್ಪರ ಉಭಯ ಕುಶಲೋಪರಿಯಲ್ಲಿ ತೊಡಗಿದ್ದು, ವಿಶೇಷವಾಗಿತ್ತು.

ಜಿಲ್ಲಾಧಿಕಾರಿ ಆಗಮನ : ಆ ನಂತರದಲ್ಲಿ 10 ಗಂಟೆಯ ಆಸುಪಾಸಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮತಗಟ್ಟೆ ಕೇಂದ್ರದತ್ತ ಆಗಮಿಸಿದರು. ಈ ವೇಳೆ ಮತದಾನಕ್ಕೆ ಆಗಮಿಸಿದ್ದ ಶಾಸಕ ಕೆ.ಜಿ. ಬೋಪಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್, ನಗರ ಅಧ್ಯಕ್ಷ ಮಹೇಶ್ ಜೈನಿ, ಪಕ್ಷದ ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್, ಉಮೇಶ್ ಸುಬ್ರಮಣಿ, ರವಿ ಕುಶಾಲಪ್ಪ, ಬೆಲ್ಲು ಸೋಮಯ್ಯ ಸೇರಿದಂತೆ ಇತರರು ಅಲ್ಲಿನ ಬೇಕರಿಯೊಂದರ ಎದುರುಗಡೆ ಪರಸ್ಪರ ಉಭಯಕುಶಲೋಪರಿಯೊಂದಿಗೆ ನಿಂತಿದ್ದರು.

ಸಿಡಿಮಿಡಿಗೊಂಡ ಶ್ರೀವಿದ್ಯಾ: ಜಿಲ್ಲಾಧಿಕಾರಿ ಪಿ.ಐ. ಶ್ರೀ ವಿದ್ಯಾ ಸಿಡಿಮಿಡಿಗೊಂಡು ಅವರುಗಳನ್ನು ಅಲ್ಲಿಂದ ಹೊರಹೋಗುವಂತೆ ಸೂಚಿಸಿದಾಗ, ಬಿಜೆಪಿಯ ಮಂದಿ ತೀಕ್ಷ್ಣ ಪ್ರತಿಕ್ರಿಯೆಯೊಂದಿಗೆ ತಾವಿಲ್ಲಿ ಮತದಾರರಾಗಿ ಬಂದಿರುವದಾಗಿಯೂ, ಶಾಪಿಂಗ್ ಕಾಂಪ್ಲೆಕ್ಸ್‍ನೊಳಗೆ ಮತಗಟ್ಟೆ ಸ್ಥಾಪಿಸಿರುವ ಔಚಿತ್ಯವನ್ನು ಪ್ರಶ್ನಿಸುತ್ತಾ, ಅಸಮಾಧಾನ ಹೊರ ಹಾಕಿದರು.

ಪೊಲೀಸರಿಗೆ ತರಾಟೆ : ಈ ವೇಳೆ ಜಿಲ್ಲಾಧಿಕಾರಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹರಿಹಾಯ್ದರಲ್ಲದೆ, ಪೊಲೀಸ್ ವರಿಷ್ಠರಿಗೆ ದೂರವಾಣಿ ಕರೆ ಮಾಡಿ, ಸೂಕ್ತ ಕ್ರಮಕ್ಕೂ ನಿರ್ದೇಶಿಸಿದರು. ಅತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಹಾಗೂ ಇತರರು ಎಡಿಜಿಪಿ ಭಾಸ್ಕರ್‍ರಾವ್ ಅವರನ್ನು ಮಡಿಕೇರಿಗೆ ಬರಮಾಡಿಕೊಳ್ಳುವ ತಯಾರಿಯಲ್ಲಿದ್ದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಉಪಾಧ್ಯಕ್ಷ ಬಿಜೆಪಿಯ ಟಿ.ಎಸ್. ಪ್ರಕಾಶ್ ಸೇರಿದಂತೆ ಪಕ್ಷದ ನಗರಸಭಾ ಸದಸ್ಯರುಗಳು, ಕಾರ್ಯಕರ್ತರು ಕೂಡ ಮತಗಟ್ಟೆ ಬಳಿ ಕಾಣಿಸಿಕೊಂಡರಾದರೂ ಜಿಲ್ಲಾಧಿಕಾರಿ ನಿರ್ದೇಶನ ಬಳಿಕ ಎಲ್ಲರೂ ಮತಗಟ್ಟೆ ಬಳಿ ನಿಲ್ಲದೆ ಬೇರೆಡೆಗೆ ತೆರಳಿದ ದೃಶ್ಯ ಎದುರಾಯಿತು. ಅಪರಾಹ್ನ ಬಳಿಕ ಮತದಾರರು ತಮ್ಮ ಪಾಡಿಗೆ ತಾವೇ ಆಗಮಿಸಿ ಹಕ್ಕು ಚಲಾಯಿಸಿ ನಿರ್ಗಮಿಸುತ್ತಿದ್ದ ಮುಕ್ತ ವಾತಾವರಣವಿದ್ದು, ಯಾವ ರಾಜಕೀಯ ಮಂದಿಯೂ ಕಾಣಿಸಿಕೊಳ್ಳಲಿಲ್ಲ.