ಮಡಿಕೇರಿ, ಜೂ. 8: ರಾಜ್ಯದ ಹಲವು ಕಡೆಗಳಲ್ಲಿ ಈತನಕ ಕಂಡುಬಂದಿದ್ದ ವಾಯು- ವರುಣನ ಅಬ್ಬರ ಜೂನ್ 7ರಿಂದ ಕೊಡಗು ಜಿಲ್ಲೆಯಲ್ಲಿಯೂ ಮೆಲ್ಲಮೆಲ್ಲನೆ ಗೋಚರಿಸುತ್ತಿದ್ದು, ಜಿಲ್ಲೆಯಲ್ಲಿ ಇದೀಗ ನೈಜ ಮುಂಗಾರಿನ ಚಿತ್ರಣ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಸ್ವಲ್ಪ ಮಟ್ಟಿಗೆ ಬಿಸಿಲಿನ ವಾತಾವರಣದೊಂದಿಗೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತುಸು ಕಡಿಮೆ ಇತ್ತು. ಇದೀಗ ಕೊಡಗು ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಮಳೆ ಬಿರುಸಾಗುತ್ತಿರುವ ಬಗ್ಗೆ ವರದಿಯಾಗಿದೆ. ಮಳೆಯೊಂದಿಗೆ ಚಳಿ- ಗಾಳಿಯ ವಾತಾವರಣವೂ ಆರಂಭವಾಗಿದ್ದು, ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಗಾಲ ಮುಂದಡಿಯಿಡುತ್ತಿದೆ. ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಡೀ ಧಾರಾಕಾರವಾಗಿ ಮಳೆ ಸುರಿದಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲೂ ಇಂದು ಬೆಳಿಗ್ಗೆಯಿಂದಲೇ ಆಗಾಗ್ಗೆ ಮಳೆ ಸುರಿದಿದ್ದು, ನಗರದ ರಸ್ತೆಗಳ ಅವ್ಯವಸ್ಥೆ ಹಾಗೂ ವಾಹನಗಳ ಭರಾಟೆಯಿಂದ ಜನರು ಕಿರಿಕಿರಿ ಎದುರಿಸುವಂತಾಗಿತ್ತು. ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿಗೆ ಸಂಬಂಧಿಸಿದ ಕೆಲಸಗಳು ಚುರುಕುಗೊಳ್ಳುತ್ತಿವೆ.

(ಮೊದಲ ಪುಟದಿಂದ) ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 2.57 ಇಂಚು, ಕಳೆದ ವರ್ಷ ಇದೇ ದಿನ 0.05 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 20.64 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 13.53 ಇಂಚು ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.35 ಇಂಚು, ಕಳೆದ ವರ್ಷ ಇದೇ ದಿನ 0.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 30.50 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 16.37 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.87 ಇಂಚು, ಕಳೆದ ವರ್ಷ ಇದೇ ದಿನ 0.04, ಜನವರಿಯಿಂದ ಇಲ್ಲಿಯವರೆಗಿನ ಮಳೆ 15.22 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 13.08 ಇಂಚು ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.49 ಇಂಚು, ಕಳೆದ ವರ್ಷ ಇದೇ ದಿನ 0.21 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 16.19 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 11.14 ಇಂಚು ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 4.04, ನಾಪೋಕ್ಲು 3.40, ಸಂಪಾಜೆ 4.20, ಭಾಗಮಂಡಲ 5.74, ವೀರಾಜಪೇಟೆ ಕಸಬಾ 2.74, ಹುದಿಕೇರಿ 1.92, ಶ್ರೀಮಂಗಲ 1.71, ಪೊನ್ನಂಪೇಟೆ 1.94, ಅಮ್ಮತ್ತಿ 1.62, ಬಾಳೆಲೆ 1.32, ಸೋಮವಾರಪೇಟೆ ಕಸಬಾ 2.74, ಶನಿವಾರಸಂತೆ 0.97, ಶಾಂತಳ್ಳಿ 2.18, ಕೊಡ್ಲಿಪೇಟೆ 1.41, ಕುಶಾಲನಗರ 1, ಸುಂಟಿಕೊಪ್ಪ 2.04 ಇಂಚು ಮಳೆಯಾಗಿದೆ.

ವೀರಾಜಪೇಟೆ

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನ 8 ಗಂಟೆಯ ತನಕ ಒಟ್ಟು 2.8 ಇಂಚು ಮಳೆ ಸುರಿದಿದೆ. ನಿನ್ನೆ ಬೆಳಗ್ಗಿನಿಂದಲೇ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಪೂರ್ತಿ ಗುಡುಗು ಮಿಂಚು ಸಹಿತ ಮಳೆ ಸುರಿದು ಅರಸುನಗರ, ನೆಹರೂ ನಗರ ಹಾಗೂ ಮಲೆತಿರಿಕೆ ಬೆಟ್ಟ, ಅಯ್ಯಪ್ಪಬೆಟ್ಟದಲ್ಲಿರುವ ನಿವಾಸಿಗಳು ಭಯಬೀತರಾಗಿದ್ದರು.

ನಿನ್ನೆ ರಾತ್ರಿ ಮಳೆಗೆ ಇಲ್ಲಿನ ಮಗ್ಗುಲದ ತಿರುವಿನ ಬಳಿ ಮರ ಉರುಳಿ ಬಿದ್ದು, ಬೆಳಗಿನ ಜಾವ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಕೊಡಗು - ಕೇರಳ ಗಡಿಪ್ರದೇಶವಾದ ಪೆರುಂಬಾಡಿ, ಮಾಕುಟ್ಟ ಗಡಿಯಲ್ಲಿ ರಾತ್ರಿ ಭಾರೀ ಮಳೆ ಸುರಿದಿದೆ. ಇಂದು ಅಪರಾಹ್ನ ಕೂಡ ಈ ವಿಭಾಗಕ್ಕೆ ಮಳೆ ಸುರಿದಿದೆ. ಮೋಡ ಕವಿದ ವಾತಾವರಣ ಮುಂದುವರೆದಿದೆ.

ನಾಪೆÇೀಕ್ಲು

ನಾಪೆÇೀಕ್ಲು ವ್ಯಾಪ್ತಿಯಲ್ಲಿ ಗುರುವಾರ ಸಂಜೆಯಿಂದ ಮುಂಗಾರು ಮಳೆಯು ತನ್ನ ಬಿರುಸನ್ನು ಪ್ರದರ್ಶಿಸಿದೆ. ಸಂಜೆಯಿಂದ ಆರಂಭಗೊಂಡ ಮಳೆಯು ಬೆಳಗ್ಗಿನವರೆಗೆ ಎಡೆಬಿಡದೆ ಸುರಿದಿದ್ದು, ಸುಮಾರು 2.95 ಇಂಚಿಗಿಂತಲೂ ಹೆಚ್ಚಿನ ಮಳೆಯಾಗಿದೆ.

ಇಂದು ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಸ್ವಲ್ಪ ಬಿಡುವಿದ್ದರೂ, ಸಂಜೆ 5 ಗಂಟೆಯ ನಂತರ ಭಾರೀ ಮಳೆ ಸುರಿಯಲಾರಂಬಿಸಿದೆ. ಮಳೆಯ ಪರಿಣಾಮ ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಪ್ರವಾಹ ಉಂಟಾಗುವ ಭೀತಿ ಮೂಡಿದೆ.

ಕೂಡಿಗೆ

ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಬಸವನತ್ತೂರು ಗ್ರಾಮದ ಗಬ್ಬರ್ ಎಂಬವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಹಾನಿಗೊಳಗಾಗಿವೆ. ಮನೆಯಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಂದಾಯ ಇಲಾಖೆಯ ನಿರೀಕ್ಷಕ ಮಧುಕುಮಾರ್, ಗ್ರಾಮ ಲೆಕ್ಕಿಗ ಸಚಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.

ಶನಿವಾಸಂತೆ : ಕೊಡ್ಲಿಪೇಟೆ-ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ಉತ್ತಮ ಮಳೆ ಸುರಿಯಿತು. ಆಷಾಢದ ಗಾಳಿಯನ್ನು ನೆನಪಿಸುವ ರಭಸದ ಗಾಳಿಯೊಂದಿಗೆ ಜೋರಾಗಿ ಮಳೆ ಸುರಿದು ಕ್ಷಣ ಬಿಡುವು ನೀಡಿ ಮತ್ತೆ ಸುರಿಯುತ್ತಿತ್ತು. ಪಟ್ಟಣ ವ್ಯಾಪ್ತಿಯಲ್ಲಿ 50 ಸೆಂಟ್ (ಅರ್ಧ ಇಂಚು) ಮಳೆಯಾಗಿದೆ. ಶುಕ್ರವಾರ ಮೃಗಶಿರ ಮಳೆ ಆರಂಭವಾಗಿದ್ದು, ಉತ್ತಮವಾಗಿ ಸುರಿಯುವ ಭರವಸೆ ರೈತರಲ್ಲಿ ಮೂಡಿಸಿದೆ. ಹೀಗೆ ಮಳೆಯಾದರೆ ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆಗೆ ಒಳ್ಳೆಯದು. ಆದರೆ, ಶುಂಠಿ, ಹಸಿರು ಮೆಣಸಿನಕಾಯಿ ಬೆಳಿಗ್ಗೆ ಶೀತ ಹೆಚ್ಚಾಗಿ ಕೊಳೆಯುವ ಭೀತಿ ಮೂಡಿಸಿದೆ ಎನ್ನುತ್ತಾರೆ ಕೆರಳ್ಳಿ ಗ್ರಾಮದ ಬೆಳೆಗಾರ ಕೆ.ಎಂ. ನಾಗರಾಜ್.