ಮಡಿಕೇರಿ, ಜೂ. 8: ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಇಂದು ನಡೆದ ಚುನಾವಣಾ ಪ್ರಕ್ರಿಯೆಯು, ಮಳೆಯ ನಡುವೆ ಶಾಂತಿಯುತವಾಗಿ ಜರುಗಿತು. ಶಿಕ್ಷಕರ ಕ್ಷೇತ್ರದಲ್ಲಿ ಶೇ. 83.44 ಮತದಾನ ನಡೆದಿದ್ದು, ಪದವೀಧರ ಕ್ಷೇತ್ರದಲ್ಲಿ ಶೇ. 74.83 ರಷ್ಟು ಮಂದಿ ಹಕ್ಕು ಚಲಾಯಿಸಿದರು.ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ನಗರಸಭಾ ಆವರಣದಲ್ಲಿ ಉಭಯ ಕ್ಷೇತ್ರಗಳ ಮತದಾನಕ್ಕೆ ಸಂಬಂಧಿಸಿದಂತೆ ಸ್ಥಾಪಿಸಲಾಗಿದ್ದ ಎರಡು ಪ್ರತ್ಯೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಭಾರೀ ಮಳೆಯ ನಡುವೆಯೂ ಶಿಕ್ಷಕರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು. ಒಟ್ಟು ಈ ಮತಗಟ್ಟೆ ವ್ಯಾಪ್ತಿಯ 268 ಮತದಾರರ ಪೈಕಿ 223 ಮಂದಿ ತಮ್ಮ ಹಕ್ಕು ಚಲಾಯಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಮತಗಟ್ಟೆಯಲ್ಲಿ ಶಿಕ್ಷಕರ ಕ್ಷೇತ್ರದ 415 ಮಂದಿ ಮತದಾರರ ಪೈಕಿ 332 ಮಂದಿ ಮತದಾನ ಮಾಡಿದರು. ಕುಶಾಲನಗರ ಮತಗಟ್ಟೆಯಲ್ಲಿ ಆ ಭಾಗದ ಒಟ್ಟು 348 ಮತದಾರರ ಪೈಕಿ 302 ಮಂದಿ ಮತ ಚಲಾಯಿಸಿದರು. ಸೋಮ ವಾರಪೇಟೆ

(ಮೊದಲ ಪುಟದಿಂದ) ಮತಗಟ್ಟೆ ವ್ಯಾಪ್ತಿಯ 219 ಶಿಕ್ಷಕರಲ್ಲಿ 186 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರ ಕ್ಷೇತ್ರದಿಂದ ಜಿಲ್ಲೆಯ ಒಟ್ಟು 1250 ಮಂದಿ ಮತದಾರರಲ್ಲಿ 1043 ಮಂದಿ ಹಕ್ಕು ಚಲಾಯಿಸಿದ್ದು, ಶೇ. 83.44 ಸಾಧನೆ ಕಂಡು ಬಂತು.

ಪದವೀಧರ ಕ್ಷೇತ್ರ : ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಮತಗಟ್ಟೆ ವ್ಯಾಪ್ತಿಯ ಒಟ್ಟು 486 ಮಂದಿ ಮತದಾರರ ಪೈಕಿ 346 ಮಂದಿ ಮತದಾನ ಮಾಡಿದರು. ಇನ್ನು ಸೋಮವಾರಪೇಟೆ ಮತಗಟ್ಟೆ ಸುತ್ತಮುತ್ತಲಿನ ಒಟ್ಟು 467 ಮಂದಿಯ ಪೈಕಿ 357 ಜನರು ತಮ್ಮ ಹಕ್ಕು ಚಲಾಯಿಸಿದರು.

ಕುಶಾಲನಗರದಲ್ಲಿ ಸ್ಥಾಪಿಸಲಾಗಿದ್ದ ಮತದಾನ ಕೇಂದ್ರ ವ್ಯಾಪ್ತಿಯ ಒಟ್ಟು 321 ಜನ ಮತದಾರರ ಪೈಕಿ, ಅಲ್ಲಿನ 249 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಅತ್ತ ವೀರಾಜಪೇಟೆ ಮತಗಟ್ಟೆ ಕೇಂದ್ರ ವ್ಯಾಪ್ತಿಯಲ್ಲಿ ಒಟ್ಟು 359 ಜನರ ಪೈಕಿ 270 ಮಂದಿ ಮತದಾನದಲ್ಲಿ ಭಾಗವಹಿಸಿದರು. ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಒಟ್ಟು 1633 ಮತದಾರರ ಪೈಕಿ ಇಂದು 1222 ಜನ ಹಕ್ಕು ಚಲಾಯಿಸುವದರೊಂದಿಗೆ ಶೇ. 74.83 ರಷ್ಟು ಸಾಧನೆ ಗೋಚರಿಸಿತು.

ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ಮತಗಟ್ಟೆಗಳ ಬಳಿ ಶಿಕ್ಷಕರು ಹಾಗೂ ಪದವೀಧರರು ಪ್ರತ್ಯೇಕ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಅನೇಕರು ಹೊಸದಾಗಿ ಈ ಮೊದಲು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿರುವ ಹೆಸರುಗಳು ಪಟ್ಟಿಯಲ್ಲಿ ಲಭಿಸದ ಕುರಿತು ಅಸಮಾಧಾನದಿಂದ ಹಿಂತೆರಳಿದ ದೃಶ್ಯ ಎದುರಾಯಿತು. ಕೆಲವರ ಹೆಸರು - ಭಾವಚಿತ್ರ ಅದಲು - ಬದಲಾಗಿದ್ದರೆ, ಎರಡು ಕಡೆ ಒಬ್ಬೊಬ್ಬರಿಗೆ ಎರಡೆರಡು ಹೆಸರು ಕೂಡ ಪಟ್ಟಿಯಲ್ಲಿ ಅಚ್ಚರಿಗೆ ಕಾರಣವಾಯಿತು.

ಸೋಮವಾರಪೇಟೆ: ಕರ್ನಾಟಕ ವಿಧಾನಪರಿಷತ್‍ನ ನೈಋತ್ಯ ಪದವೀಧರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಗಣ್ಯರು, ರಾಜಕೀಯ ಮುಖಂಡರು ಮತದಾನ ಮಾಡಿದರು.

ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದ್ದ ಪರಿಣಾಮ ಇಲ್ಲಿನ ಪಟ್ಟಣ ಪಂಚಾಯಿತಿಯ ಮತಗಟ್ಟೆಯಲ್ಲಿ ಮತದಾನ ಮಂದಗತಿಯಲ್ಲಿ ನಡೆಯಿತು. ಮಧ್ಯಾಹ್ನದ ಎರಡು ಗಂಟೆಗೆ ಶೇ.50ರಷ್ಟು ಮತದಾನವಾಗಿತ್ತು.

ಮಧ್ಯಾಹ್ನದ ನಂತರ ಮತದಾನ ಕೊಂಚ ಬಿರುಸು ಪಡೆಯಿತು. ಕೊಡ್ಲಿಪೇಟೆ, ಶನಿವಾರಸಂತೆ, ಬೆಟ್ಟದಳ್ಳಿ, ಆಲೂರುಸಿದ್ದಾಪುರ ಸೇರಿದಂತೆ ತಾಲೂಕಿನ ಗಡಿ ಭಾಗಗಳಿಂದ ಮತದಾರರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಪದವೀಧರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 467 ಮತದಾರರಿದ್ದು, ಇದರಲ್ಲಿ 357 ಮಂದಿ ಹಕ್ಕು ಚಲಾಯಿಸುವ ಮೂಲಕ ಶೇ.76.44, ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 219 ಮತದಾರರ ಪೈಕಿ 186 ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ.85ರಷ್ಟು ಮತದಾನವಾಯಿತು.

ಮಾಜಿ ಸಚಿವ ಬಿ.ಎ.ಜೀವಿಜಯ, ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ.ಅಭಿಮನ್ಯುಕುಮಾರ್, ತಾಪಂ ಸದಸ್ಯ ಬಿ.ಬಿ.ಸತೀಶ್, ಎಪಿಎಂಸಿ ಸದಸ್ಯ ಸಿ.ಎಸ್.ನಾಗರಾಜ್, ಕಾಂಗ್ರೆಸ್‍ನ ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಂಚಾಲಕ ಬಿ.ಇ.ಜಯೇಂದ್ರ ಸೇರಿದಂತೆ ಮತ್ತಿತರ ಪ್ರಮುಖರು ಮತ ಚಲಾಯಿಸಿದರು.

ಬಿಜೆಪಿಯ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬ್ಲಾಕ್ ಕಾಂಗ್ರೆಸ್‍ನ ಕೆ.ಎಂ.ಲೋಕೇಶ್, ಪಪಂ ಸದಸ್ಯ ಕೆ.ಎಂ.ಆದಂ ಮತ್ತಿತರರು ಮತಗಟ್ಟೆಯ ಸುತ್ತಮುತ್ತ ಮತಯಾಚಿಸಿದರು. ಪಟ್ಟಣದ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪೇಟೆಯಿಂದ ಮಡಿಕೇರಿ ಕಚೇರಿಗೆ ಧಾವಿಸಿದರು.

ವೀರಾಜಪೇಟೆ: ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಯು ಎರಡು ಪ್ರತ್ಯೇಕ ಮತಗಟ್ಟೆಗಳಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶಾಂತಿಯುತವಾಗಿ ನಡೆಯಿತು.

ಮತದಾರರ ಪಟ್ಟಿಯಲ್ಲಿ ಬಹುತೇಕ ಮತದಾರರ ಹೆಸರು ಮಾಯವಾಗಿತ್ತು. ಕೆಲವು ಮತದಾರರ ಹೆಸರು ಶಿಕ್ಷಕರ ಕೇತ್ರದಲ್ಲಿದ್ದು ಪದವೀಧರರ ಕೇತ್ರದಲ್ಲಿ ಕಣ್ಮರೆಯಾಗಿತ್ತು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದನ್ನು ನೋಡಿ ಕೆಲವು ಮತದಾರರು ನಿರಾಶೆಯಿಂದ ಹಿಂತಿರುಗಿದರು. ಪದವೀಧರರ ಕ್ಷೇತ್ರ್ರಕ್ಕಿಂತಲೂ ಶಿಕ್ಷಕರ ಕ್ಷೇತ್ರದಲ್ಲಿ ಮತದಾರರು ಹುರುಪಿನಿಂದ ಮತ ಚಲಾಯಿಸಿದರು. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡ ತಕ್ಷಣ ಶಿಕ್ಷಕರ ಕ್ಷೇತ್ರದಲ್ಲಿ ಮತಚಲಾಯಿಸಲು ಮತದಾರರು ಸರದಿಯಲ್ಲಿ ಆರಂಭಿಸಿದರು. ಮಧ್ಯಾಹ್ನ 1.30ರ ತನಕ ಈ ಕ್ಷೇತ್ರದಲ್ಲಿ ಒಟ್ಟು 415 ಮತದಾರರ ಪೈಕಿ ಶೇಕಡ 64ರಷ್ಟು ಮತದಾನವಾಗಿತ್ತು.

ಪದವೀಧರರ ಕ್ಷೇತ್ರದಲ್ಲಿ ಒಟ್ಟು 359 ಮತದಾರರಿದ್ದು ಅಪರಾಹ್ನ 1-30ರ ವೇಳೆಗೆ ಶೇಕಡ 60ರಷ್ಟು ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಮಧ್ಯಾಹ್ನದವರೆಗೆ ನಿರಾಶದಾಯಕ ವಾಗಿ ಮತದಾನ ಮುಂದುವರೆದಿತ್ತು.

ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ನಗರ ಸಮಿತಿ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಬ್ಲಾಕ್ ಕಾಂಗ್ರೆಸ್‍ನ ಅಬ್ದುಲ್ ಸಲಾಂ, ಧರ್ಮಜ ಉತ್ತಪ್ಪ, ಸಿ.ಕೆ. ಪೃಥ್ವಿನಾಥ್ ಇತರ ಕಾರ್ಯಕರ್ತರುಗಳು, ಭಾರತೀಯ ಜನತಾಪಾರ್ಟಿಯ ಅರುಣ್ ಭೀಮಯ್ಯ, ರಘು ನಾಣಯ್ಯ, ಎಂ.ಕೆ.ದೇಚಮ್ಮ, ಜಿಲ್ಲಾ ಪಂಚಾಯಿತಿಯ ಶಶಿ ಸುಬ್ರಮಣಿ, ಅಜಿತ್ ಕರುಂಬಯ್ಯ,

ಮತ್ತಿತರರು ಮತಗಟ್ಟೆಯಿಂದ ನೂರು ಮೀಟರ್ ದೂರದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಶಾಸಕ ಕೆ.ಜಿ. ಬೋಪಯ್ಯ ಕೂಡ ಭೇಟಿ ನೀಡಿದ್ದರು. ಎರಡು ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಮತಗಟ್ಟೆಗಳಿಗೆ ಭೇಟಿ ನೀಡಿ ಬಂದೋಬಸ್ತ್ ಕುರಿತು ಪರಿಶೀಲನೆ ನಡೆಸಿದರು.

ಗೆಲುವಿನ ಆಶಯ : ಕುಶಾಲನಗರದಲ್ಲಿ ಕಾಂಗ್ರೆಸ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ತಮ್ಮ ಹಕ್ಕು ಚಲಾಯಿಸುವದರೊಂದಿಗೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಕಾಂಗ್ರೆಸ್ ಮುಖಂಡ ಟಿ.ಪಿ. ರಮೇಶ್ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಆಶಯ ಹಂಚಿಕೊಂಡರು.

ಬಿಜೆಪಿ ವಿಶ್ವಾಸ : ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ಮತ್ತು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಪ್ರತಿಕ್ರಿಯಿಸಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

ಪ್ರಮುಖರ ಅನಿಸಿಕೆ

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿರುವ ಬೋಜೇಗೌಡ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ನೈಋತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಯ ಇಲ್ಲಿನ ಪಟ್ಟಣ ಪಂಚಾಯಿತಿಯ ಮತದಾನದ ಮತಗಟ್ಟೆಗೆ ಭೇಟಿ ನೀಡಿದ ಸಂಕೇತ್ ಪೂವಯ್ಯ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಬೋಜೆಗೌಡರ ಪರ ಪ್ರಚಾರ ಮಾಡಿದರು.

ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್, ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್, ಮಹಿಳಾ ಘಟಕದ ಸುಮಿತ್ರ, ಉಪಾಧ್ಯಕ್ಷೆ ವೀಣಾ, ತಾಲೂಕು ಯುವ ಘಟಕದ ಅಧ್ಯಕ್ಷ ಅಮ್ಮಂಡ ವಿವೇಕ್, ಸಾಮಾಜಿಕ ಜಾಲತಾಣದ ಕುಯ್ಮಂಡ ರಾಕೇಶ್ ಬಿದ್ದಪ್ಪ ಮತ್ತಿತರರು ಹಾಜರಿದ್ದರು.