ಸಿದ್ದಾಪುರ, ಜೂ. 8: ಮತ್ತೊಂದು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಒಟ್ಟು ಆರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದಂತಾಗಿದೆ.

ಗುರುವಾರ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಹೆಣ್ಣಾನೆಯೊಂದಕ್ಕೆ ರೇಡಿರೋ ಕಾಲರ್ ಅಳವಡಿಸಿದ ಬೆನ್ನಲ್ಲೆಯೇ ಇದೀಗ ಕರಡಿಗೋಡುವಿನ ಬುವನಳ್ಳಿ ತೋಟದಲ್ಲಿ ಇದ್ದ ಅಂದಾಜು 28 ವರ್ಷ ಪ್ರಾಯದ ಹೆಣ್ಣಾನೆಯ ಕುತ್ತಿಗೆಗೆ ರೇಡಿಯೋ ಕಾಲರ್ ಅಳವಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇದರೊಂದಿಗೆ ಒಟ್ಟು 6 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ಕಾಡಾನೆ ಹಿಂಡಿನ ಚಲನವಲನ ಅರಿಯಲು ಇದು ಸಹಕಾರಿಯಾಗಲಿದೆ.

ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಹಾಗೂ ಕೃಷ್ಣ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಂದಾಜು 28 ವರ್ಷ ಪ್ರಾಯದ ಹೆಣ್ಣಾನೆಯನ್ನು ಗುಂಪಿನಿಂದ ಬೇರ್ಪಡಿಸಿ ರೇಡಿಯೋ ಕಾಲರ್ ಅಳವಡಿಸಿದ್ದಾರೆ. ಇದಕ್ಕೂ ಮೊದಲು ಕಾಡಾನೆಯು ಸಿಟ್ಟಿನಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಓಡಿಸಲು ಪ್ರಯತ್ನಿಸಿದ್ದು, ಬಳಿಕ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದಾರೆ.

ಕರಡಿಗೋಡು ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೆಳೆಗಾರ ಮೋಹನ್‍ದಾಸ್ ಎಂಬವರನ್ನು ಕಾಡಾನೆ ಧಾಳಿ ನಡೆಸಿ ಕೊಂದು ಹಾಕಿತ್ತು. ಸಿದ್ದಾಪುರ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಈ ಕಾರ್ಯಾಚರಣೆಯನ್ನು ಮಾಡಿದೆ.

ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಡಿಸಿಎಫ್ ಮರಿಯಕ್ರ್ರಿಸ್ತುರಾಜ್ ನೇತೃತ್ವದಲ್ಲಿ ಎ.ಸಿ.ಎಫ್. ರೋಷಿಣಿ, ಆರ್.ಎಫ್.ಓ. ಗೋಪಾಲ್, ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್, ಉಪವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಗಣೇಶ್, ಹಾಗೂ ಆರ್.ಆರ್.ಟಿ ತಂಡದವರು ಭಾಗವಹಿಸಿದ್ದರು.

- ಎ.ಎನ್ ವಾಸು, ಕಾಳಯ್ಯ