* ಸಿದ್ದಾಪುರ, ಜೂ. 8: ಕಾಡಾನೆ ಹಾವಳಿ ತಡೆ ಸಂಬಂಧ ಕ್ರಮಕೈಗೊಳ್ಳುವ ಸಲುವಾಗಿ ಏರ್ಪಡಿಸಲಾಗಿದ್ದ ಸಭೆಗೆ ಬಂದ ಗ್ರಾಮಸ್ಥರು ಸಭೆ ರದ್ದಾದ ಹಿನ್ನೆಲೆಯಲ್ಲಿ ವಾಪಸ್ ಊರಿಗೆ ಮರಳಿ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ತಾತ್ಕಾಲಿಕ ಪರಿಹಾರ ಕಂಡುಕೊಂಡಿರುವ ಪ್ರಸಂಗ ಇಂದು ನಡೆದಿದೆ.
ಕಾಡಾನೆ ಹಾವಳಿ ತಡೆಗಟ್ಟುವ ಸಲುವಾಗಿ ಅರಣ್ಯ ಇಲಾಖಾಧಿಕಾರಿ ಗಳೊಂದಿಗೆ ಚರ್ಚಿಸುವ ಸಲುವಾಗಿ ಶಾಸಕ ಅಪ್ಪಚ್ಚುರಂಜನ್ ಅವರು ಇಂದು ಅರಣ್ಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮನು ಮಹೇಶ್ ನೇತೃತ್ವದಲ್ಲಿ ನಂಜರಾಯಪಟ್ಟಣ, ಅಭ್ಯತ್‍ಮಂಗಲ, ವಾಲ್ನೂರು - ತ್ಯಾಗತ್ತೂರು ಮುಂತಾದ ಕಡೆಗಳಿಂದ ಗ್ರಾಮಸ್ಥರು ಅರಣ್ಯ ಭವನಕ್ಕೆ ಬಂದಿದ್ದರು. ಆದರೆ, ಅರಣ್ಯ ಅಧಿಕಾರಿಗಳು ಉಚ್ಛ ನ್ಯಾಯಾಲಯದಲ್ಲಿ ದಾವೆ ಸಂಬಂಧ ತೆರಳಿದ್ದರಿಂದ ಸಭೆ ನಡೆಯಲಿಲ್ಲ. ಅಧಿಕಾರಿಗಳು ಇಲ್ಲದಿರುವ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಇರಲಿಲ್ಲ.
ಹಾಗಾಗಿ ಬಂದ ದಾರಿಗೆ ಸುಂಕವಿಲ್ಲದಂತಾಯಿತೆಂದು ಹಿಂತೆರಳಿದ ಗ್ರಾಮಸ್ಥರು ವಾಲ್ನೂರಿಗೆ ಹಿಂತಿರುಗಿ ಗ್ರಾಮದ ಕಾಫಿ ತೋಟಗಳಲ್ಲಿ ಕಳೆದ 4 ತಿಂಗಳಿನಿಂದ ಬೀಡು ಬಿಟ್ಟು ಹಾನಿ ಮಾಡುತ್ತಿದ್ದ 4 ಕಾಡಾನೆಗಳನ್ನು ಮೀನುಕೊಲ್ಲಿ ಮೀಸಲು ಅರಣ್ಯ ವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್ ನೇತೃತ್ವದಲ್ಲಿ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಸಂಜೆವರೆಗೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾವೇರಿ ನದಿ ದಾಟಿಸಿ, ದುಬಾರೆ ಅರಣ್ಯಕ್ಕೆ ಅಟ್ಟಲಾಯಿತು. ಈ ಸಂದರ್ಭ ಮನುಮಹೇಶ್, ಮುಂಡ್ರ ಗಗನ್, ಲಿಖಿತ್, ಗಿರೀಶ್, ಸುದೇಶ್, ಗೋಣಿದರ ಲೋಹಿತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
- ಅಂಚೆಮನೆ ಸುಧಿ