ಕುಶಾಲನಗರ, ಜೂ. 8: ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿಯ ಲೋಪಗಳನ್ನು ಮರೆಮಾಚಲು ಜಲಮಂಡಳಿಯ ಅಧಿಕಾರಿಗಳು ತ್ಯಾಜ್ಯ ಸಂಸ್ಕರಣಾ ಘಟಕದ ನೆಪವೊಡ್ಡುತ್ತಿದ್ದಾರೆ ಎಂದು ಕುಶಾಲನಗರ ಗೌಡ ಯುವಕ ಸಂಘದ ಪ್ರಮುಖರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಾಜದ ಪ್ರಮುಖರಾದ ಆನಂದ್ ಕರಂದ್ಲಾಜೆ, ಹಿಂದಿನ ಕಂದಾಯ ಅಧಿಕಾರಿ ಯೊಬ್ಬರು ಉದ್ದೇಶ ಪೂರ್ವಕವಾಗಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗವನ್ನು ಒಳಚರಂಡಿ ಯೋಜನೆಗೆ ಮಂಜೂರು ಮಾಡಿರುವದು ಈ ಎಲ್ಲಾ ಆವಾಂತರಕ್ಕೆ ಕಾರಣವಾಗಿದೆ. ಒಳಚರಂಡಿ ಯೋಜನೆ ಬಹುತೇಕ ಅವೈಜ್ಞಾನಿಕವಾಗಿ ನಡೆದಿದ್ದು ಜನವಲಯದಲ್ಲಿ ತಪ್ಪು ಸಂದೇಶ ನೀಡುವ ಸಲುವಾಗಿ ಎಸ್‍ಟಿಪಿ ಘಟಕದ ಜಾಗದ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಮೂಲಕ ಗೌಡ ಜನಾಂಗಕ್ಕೆ ಹಾನಿಯುಂಟು ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೈಜೋಡಿಸಿ ರುವದು ವಿಷಾದನೀಯ ಎಂದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ತಪ್ಪಾಗಿ ಗುರುತಿಸಿದ ಜಾಗದ ಬದಲೀ ಜಾಗದಲ್ಲಿ ಎಸ್‍ಟಿಪಿ ಘಟಕ ನಿರ್ಮಾಣ ಮಾಡಲು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ತಕ್ಷಣ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸಬೇಕಾಗಿರುವದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯವಾಗಿದೆ ಎಂದಿದ್ದಾರೆ.

ಗೌಡ ಸಮಾಜದ ಪ್ರಮುಖರಾದ ಪೊನ್ನಚ್ಚನ ಮೋಹನ್ ಮಾತನಾಡಿ, ಯುಜಿಡಿ ಕಾಮಗಾರಿಯ ನಡುವೆ ಗೌಡ ಸಮುದಾಯದ ಹೆಸರನ್ನು ದುರ್ಬಳಕೆ ಮಾಡುವದನ್ನು ಖಂಡಿಸುವದಾಗಿ ಹೇಳಿದ ಅವರು, ಈ ಯೋಜನೆಯಲ್ಲಿ ಕೆಲವು ಅಧಿಕಾರಿಗಳು ಪಲಾಯನವಾದ ಅನುಸರಿಸುತ್ತಿರುವದು ಸರಿಯಲ್ಲ. ಕಾಮಗಾರಿಯನ್ನು ಸಮರ್ಪಕವಾಗಿ ನಡೆಸುವ ಮೂಲಕ ಊರಿನ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಹೇಳಿದರು.

ಅನವಶ್ಯಕವಾಗಿ ಮಾಧ್ಯಮಗಳಲ್ಲಿ ಗೊಂದಲದ ಹೇಳಿಕೆಯೊಂದಿಗೆ ಜನರಲ್ಲಿ ತಪ್ಪು ಗ್ರಹಿಕೆ ಉಂಟಾಗುವದನ್ನು ಕೈಬಿಡಬೇಕಾಗಿದೆ ಎಂದರು. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಗೌಡ ಸಮಾಜದ ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಯುವಕ ಸಂಘದ ಅಧ್ಯಕ್ಷ ಪಿ.ಬಿ. ಯತೀಶ್, ಕಾರ್ಯದರ್ಶಿ ಕೊಡಗನ ಹರ್ಷ ಇದ್ದರು.