ಸೋಮವಾರಪೇಟೆ, ಜೂ. 7: ನೈರುತ್ಯ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕಾಗಿದ್ದ ಶಿಕ್ಷಕರು, ಜೆಡಿಎಸ್ ಅಭ್ಯರ್ಥಿ ಪರವಾಗಿ ಹಣವನ್ನು ಹಂಚುವ ಮೂಲಕ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ. ಇಂತಹ ಕೀಳುಮಟ್ಟದ ಕೃತ್ಯಕ್ಕೆ ಇಳಿದ ಶಿಕ್ಷಕರನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಪರವಾಗಿ ಹೆಬ್ಬಾಲೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಧರ್ಮಪ್ಪ ಹಾಗೂ ಕೂಡಿಗೆ ಗ್ರಾಪಂ ಸದಸ್ಯ ವಿಶ್ವನಾಥ್ ಅವರುಗಳು ಶಿಕ್ಷಕರುಗಳಿಗೆ ರೂ.1 ಸಾವಿರದಂತೆ ಹಣವನ್ನು ಹಂಚಿದ್ದು, ಈಗಾಗಲೇ ದೂರು ದಾಖಲಾಗಿದೆ. ಇದರಿಂದ ಪವಿತ್ರವಾದ ಶಿಕ್ಷಣ ಕ್ಷೇತ್ರಕ್ಕೆ ಅಪಚಾರ ಎಸಗಿದಂತಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಅವರ ಅಭ್ಯರ್ಥಿತನವನ್ನು ರದ್ದುಗೊಳಿಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವದು ಎಂದು ಅಭಿಮನ್ಯುಕುಮಾರ್ ಹೇಳಿದರು.

ಕೊಡಗಿನಲ್ಲಿ ಶಿಕ್ಷಕರು ಮತ್ತು ಪದವೀಧರ ಮತದಾರರು ಕಡಿಮೆ ಸಂಖ್ಯೆಯಲ್ಲಿರುವದರಿಂದ, ಪ್ರತಿಯೊಬ್ಬರೂ ಮತ ಚಲಾಯಿಸಬೇಕೆಂದು ಈ ಸಂದರ್ಭ ಅಭಿಮನ್ಯುಕುಮಾರ್ ಮನವಿ ಮಾಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಕಳೆದ 40 ವರ್ಷಗಳಿಂದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಪಕ್ಷದ ಭದ್ರಕೋಟೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಜೆಡಿಎಸ್ ಪಕ್ಷದ ನಿಲುವು ಬಯಲಾಗಿದೆ. ಇನ್ನೂ ರಾಜ್ಯದ ಅಪವಿತ್ರ ಮೈತ್ರಿ ಸರ್ಕಾರ ಆರಂಭವಾದ ಕೆಲವೇ ದಿನಗಳಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವದು ಕುಮಾರಸ್ವಾಮಿಯವರ ಸರ್ಕಾರದ ಕಾರ್ಯವನ್ನು ಜಗಜ್ಜಾಹೀರು ಮಾಡಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ತಾಲೂಕು ಶಿಕ್ಷಕ ಪ್ರಕೋಷ್ಠ ಅಧ್ಯಕ್ಷ ಜೆ.ಸಿ.ಶೇಖರ್ ಉಪಸ್ಥಿತರಿದ್ದರು.