ಕುಶಾಲನಗರ, ಜೂ. 7: ಕಾವೇರಿ ನದಿ ತಟದ ಪುನಶ್ಚೇತನ ಯೋಜನೆಗೆ ಕುಶಾಲನಗರದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆಶ್ರಯದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಗ್ರೀನ್ ಸಿಟಿ ಫೋರಂ ಸಹಯೋಗದೊಂದಿಗೆ ಹಮ್ಮಿ ಕೊಂಡಿರುವ ಯೋಜನೆಗೆ ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನಡೆದ ಕಾರ್ಯಕ್ರಮಕ್ಕೆ ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗಿಡಗಳನ್ನು ನೆಟ್ಟು ಪೋಷಿಸಿದ್ದಲ್ಲಿ ಭೂಮಿಯಲ್ಲಿನ ಅಂತರ್ಜಲ ಮಟ್ಟ ವೃದ್ಧಿಸಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಪರಿಸರ ಕಾಳಜಿ ಹೊಂದಬೇಕಾಗಿದೆ. ಅರಣ್ಯ ವೃದ್ಧಿಸಲು ಇಲಾಖೆಯಿಂದ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ಸಾಲಿನಲ್ಲಿ ಮಡಿಕೇರಿ ವಿಭಾಗದಿಂದ 13.5 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳಿಗೆ ಸಸಿಗಳನ್ನು ವಿತರಣೆ ಮಾಡಲಾಗುತ್ತದೆ. ಜಿಲ್ಲೆಯ ವಿವಿಧೆಡೆ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಾಗೂ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ ಎಂದರು.

ಈ ಸಂದರ್ಭ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೊಂಗೇಟಿರ ಬೋಪಯ್ಯ, ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮೂಲಕ ಕಾವೇರಿ ನದಿ ಹಾಗೂ ಲಕ್ಷ್ಮಣತೀರ್ಥ ನದಿ ತಟದ ಪುನಶ್ಚೇತನ ಯೋಜನೆ ಹಿನ್ನೆಲೆ ಅಂದಾಜು 3 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯ ಸಹಕಾರ ಪಡೆಯಲಾಗಿದ್ದು ಸ್ಥಳೀಯ ಸಂಘ- ಸಂಸ್ಥೆಗಳೊಂದಿಗೆ ಕಾರ್ಯ ಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗೆ ಸಂಪೂರ್ಣ ಸಹಕಾರ ನೀಡುವದರೊಂದಿಗೆ ಕಾವೇರಿ ನದಿ ತಟದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಲಕ್ಷವೃಕ್ಷ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದರು. ಕುಶಾಲನಗರ ಕಾವೇರಿ ನದಿ ತಟದಲ್ಲಿ ಗಿಡಗಳನ್ನು ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಗ್ರೀನ್ ಸಿಟಿ ಫೋರಂ ಸಂಚಾಲಕರಾದ ಚೈಯ್ಯಂಡ ಸತ್ಯ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕೃಷ್ಣ ಬೋಪಯ್ಯ, ರಾಜಪ್ಪ, ಜೀಜಾ ದಿನೇಶ್, ರಾಗಿಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅರುಣ್, ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷರಾದ ವಿ.ಎನ್. ವಸಂತ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹರೀಶ್, ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್‍ನ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು ಮತ್ತಿತರರು ಇದ್ದರು.