ಮಡಿಕೇರಿ, ಜೂ. 7: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದೆರಡು ದಿನಗಳ ಹಿಂದ ಇದ್ದಂತಹ ವಾತಾವರಣ ಇಂದು ಬದಲಾವಣೆಯಾಗಿತ್ತು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತಾ. 7ರ ಬೆಳಿಗ್ಗೆಯಿಂದಲೇ ಆಗಾಗ್ಗೆ ಸುರಿಯುತ್ತಿದ್ದ ಮಳೆಯೊಂದಿಗೆ ಚಳಿಯ ವಾತಾವರಣವೂ ಕಂಡುಬಂದಿತ್ತು. ಆದರೆ ಮಳೆ... ಚಳಿಗೆ ಒಂದೆರಡು ಪೆಗ್ ಏರಿಸಿ ಮೈಬಿಸಿ ಮಾಡಿಕೊಳ್ಳುತ್ತಿದ್ದ ಪಾನಪ್ರಿಯರು ಜಿಲ್ಲೆಯಾದ್ಯಂತ ಮದ್ಯದ ವಹಿವಾಟನ್ನು ಬಂದ್ ಮಾಡಿದ್ದರಿಂದ ಪರದಾಡುತ್ತಿದ್ದರು. ರಾಜ್ಯ ವಿಧಾನಸಭೆಗೆ ಇತ್ತೀಚೆಗಷ್ಟೇ ಚುನಾವಣೆ ನಡೆದಿದ್ದು, ಆ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ಮುಚ್ಚಿಸಲಾಗಿತ್ತು. ಪಾನಪ್ರಿಯರಿಗೆ ಇದರ ಅರಿವು ಇತ್ತು. ಆದರೆ ತಾ. 8ರಂದು (ಇಂದು) ನಡೆಯಲಿರುವ ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯನ್ನು ಜನತೆ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲವೇನೋ... ಸುಮಾರು ಐದೂವರೆ ಲಕ್ಷದಷ್ಟು ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಇರುವದೇ ಬೆರಳೆಣಿಕೆಯ ಮತದಾರರು... ಶಿಕ್ಷಕರ ಕ್ಷೇತ್ರದಲ್ಲಿ 1250 ಮಂದಿ ಹಾಗೂ ಪದವೀಧರ ಕ್ಷೇತ್ರದಲ್ಲಿ 1633 ಮತದಾರರು ಸೇರಿ ಈ ಚುನಾವಣೆಗೆ ಜಿಲ್ಲೆಯಲ್ಲಿರುವ ಒಟ್ಟು ಮತದಾರ ಸಂಖ್ಯೆ 2883 ಮಾತ್ರವಾಗಿದ್ದರಿಂದ ಜನತೆಯ ಮಟ್ಟಿಗೆ ಇದು ‘ಮಹಾ ಚುನಾವಣೆ’ಯೇನೂ ಆಗಿರಲಿಲ್ಲ.

ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಮಾತ್ರ ಮತಗಟ್ಟೆಗಳಿವೆ.

ಆದರೆ ಈ ಚುನಾವಣೆಗೆ ಸಂಬಂಧಿಸಿದಂತೆ ಇಡೀ ಜಿಲ್ಲೆಯಾದ್ಯಂತ ಮದ್ಯದ ವಹಿವಾಟನ್ನು ತಾ. 6ರ ಸಂಜೆಯಿಂದಲೇ ಸ್ಥಗಿತಗೊಳಿಸಲಾಗಿದ್ದು, ಬಹುತೇಕರಿಗೆ ಇದರ ಅರಿವು ಇರಲೇ ಇಲ್ಲ. ಇದರೊಂದಿಗೆ ಜಿಲ್ಲೆಯ ಹಲವಾರು ಕಡೆಗಳಲ್ಲಿ ಮದುವೆ ಮತ್ತಿತರ ಶುಭ ಕಾರ್ಯಗಳು ನಿಗದಿಯಾಗಿದ್ದು, ಮಳೆ... ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಒಂದೆರಡು ‘ಪೆಗ್’ ಏರಿಸಿ ಮೈ ಬಿಸಿಮಾಡಿಕೊಳ್ಳುವ ತವಕದಲ್ಲಿದ್ದವರಿಗೆ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿ - ಬಾರ್‍ಗಳು ‘ಶಾಕ್’ ನೀಡಿವೆ. ಇನ್ನು ಮಳೆ - ಚಳಿಯ ನಡುವೆ ತೋಟ- ಗದ್ದೆಗಳಲ್ಲಿ ಕಾರ್ಯನಿರ್ವಹಿಸುವವರು, ಕೂಲಿಕಾರ್ಮಿಕರು ಈ ‘ಔಷಧಿ’ ಸಿಗದೆ ಪರದಾಡಿದ್ದಾರೆ. ಸಮಾರಂಭದ ಆಯೋಜಕರೂ ಬಂಧುಮಿತ್ರರನ್ನು ತೃಪ್ತಿಪಡಿಸಲಾಗದೆ ಪರಿತಪಿಸಿದ್ದಾರೆ. ಬೇರೆ ಜಿಲ್ಲೆಗಳಲ್ಲಿನ ವಾತಾವರಣವೇ ಒಂದು ರೀತಿಯಾಗಿರುತ್ತದೆ. ಆದರೆ ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಅದರಲ್ಲೂ ಪಾನಪ್ರಿಯರ ಸಂಖ್ಯೆ ಹೆಚ್ಚಿರುವ ಈ ಜಿಲ್ಲೆಯಲ್ಲಿ 2833 ವಿದ್ಯಾವಂತ ಮತದಾರರು ಮತ ಚಲಾಯಿಸಲು ಇದರಿಂದ ಹೊರತಾಗಿದ್ದವರಿಗೆ ಏಕೆ ಈ ಶಿಕ್ಷೆ ಎಂದು ಕೈ ಕೈ ಹಿಸುಕಿಕೊಂಡಿದ್ದಾರೆ. ತಾ.6ರ ಸಂಜೆಯೂ ಇಲ್ಲ. ತಾ. 7ರಂದು ಮಾತ್ರವಲ್ಲ, ತಾ. 8ರಂದೂ ಮದ್ಯದಂಗಡಿಗಳ ಬಾಗಿಲು ತೆರೆಯುವದಿಲ್ಲ ಎಂದು ಅರಿತು ಯಾರದೋ ಲಾಭಕ್ಕೆ ಯಾರಿಗೋ ಶಿಕ್ಷೆ ಎಂದು ಗೊಣಗುತ್ತಿದ್ದುದು ಇಂದು ಜಿಲ್ಲೆಯಲ್ಲಿ ಸಾಮಾನ್ಯವಾಗಿತ್ತು. ರಾಜಕೀಯ ಪಕ್ಷದವರಾದರೂ ಚುನಾವಣಾ ಆಯೋಗಕ್ಕೆ ಸನ್ನಿವೇಶದ ಅರಿವು ಮಾಡಿಕೊಡಬಹುದಿತ್ತು. ಈ ಆದೇಶದಿಂದ ಸರಕಾರದ ಬೊಕ್ಕಸ ಸೇರಿದಂತೆ ಇದರ ಅವಲಂಬಿತ ಉದ್ಯಮದಲ್ಲಿ ತೊಡಗಿರುವವರಿಗೂ ಸಮಸ್ಯೆಯಲ್ಲವೇ ಎಂಬದು ಹಲವರ ಅಂಬೋಣ.