ಮಡಿಕೇರಿ, ಜೂ. 7: ಕಳೆದ ಆರು ವರ್ಷಗಳಿಂದ ಕೂಡಿಗೆ ಸೈನಿಕ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಮ್ಮನ್ನು ಮತ್ತೆ ಗುತ್ತಿಗೆ ಆಧಾರದಲ್ಲೆ ಹುದ್ದೆಗೆ ನೇಮಿಸಿಕೊಳ್ಳದಿದ್ದಲ್ಲಿ ತಾ. 11 ರಿಂದ ಸೈನಿಕ ಶಾಲೆಯ ಎದುರು ಕುಟುಂಬ ಸಹಿತರಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವದಾಗಿ ಹತ್ತು ಮಂದಿ ನೌಕರರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತಿಗೆ ನೌಕರ ಮಧು ಕುಮಾರ್, ಕೂಡಿಗೆ ಸೈನಿಕ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ 13 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಮೇ 30ಕ್ಕೆ ಗುತ್ತಿಗೆ ಆಧಾರದ ಅವಧಿ ಮುಕ್ತಾಯಗೊಂಡಿದೆ. ಆದರೆ ಅವಧಿ ಪೂರ್ಣಗೊಂಡ ನಂತರ ಮೂವರಿಗೆ ಮಾತ್ರ ಉದ್ಯೋಗವನ್ನು ನೀಡಿರುವ ಸೈನಿಕ ಶಾಲೆಯ ಆಡಳಿತ ಮಂಡಳಿ ಉಳಿದ ಹತ್ತು ಮಂದಿಗೆ ಸದÀÀ್ಯಕ್ಕೆ ಹುದ್ದೆ ಇಲ್ಲವೆಂದು ತಿಳಿಸಿದೆ. ಇದರಿಂದ ನಮ್ಮ ಬದುಕು ಅತಂತ್ರವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಕ್ಷಣ ಸೈನಿಕ ಶಾಲೆಯ ಆಡಳಿತ ಮಂಡಳಿ ‘ಡಿ’ ಗ್ರೂಪ್ ಹುದ್ದೆಯ ಗುತ್ತಿಗೆ ಅವಧಿಯನ್ನು ನವೀಕರಿಸುವ ಮೂಲಕ ಕಳೆದ ಆರು ವರ್ಷಗಳಿಂದ ದುಡಿಯುತ್ತಿರುವ ನಮಗೆ ಮತ್ತೆ ಉದ್ಯೋಗ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಕೂಡಿಗೆಯಲ್ಲಿ ಸೈನಿಕ ಶಾಲೆ ಆರಂಭವಾದಾಗ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಅದೇ ಪ್ರಕಾರವಾಗಿ ಸ್ಥಳೀಯರಾದ ನಾವುಗಳು ಉದ್ಯೋಗ ಖಾಯಂಗೊಳ್ಳಬಹುದು ಎನ್ನುವ ಭರವಸೆಯೊಂದಿಗೆ ಕಳೆÉದ ಆರು ವರ್ಷಗಳಿಂದ ‘ಡಿ’ ಗ್ರೂಪ್ ನೌಕರರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇವೆ. ಆರಂಭದಲ್ಲಿ ಇದ್ದ ಅಧಿಕಾರಿಗಳು ಉದ್ಯೋಗದ ಭದ್ರತೆಯ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಿದ್ದರು.

ಆದರೆ, ಪ್ರಸ್ತುತ ಇರುವ ಅಧಿಕಾರಿ, ಇದ್ದ ಹುದ್ದೆಯನ್ನು ಇಲ್ಲದಂತೆ ಮಾಡಿದ್ದಾರೆ ಎಂದು ಮಧುಕುಮಾರ್ ಆರೋಪಿಸಿದರು. ಕಳೆದ ಆರು ವರ್ಷಗಳಿಂದ ದಿನಗೂಲಿ ಆಧಾರದಲ್ಲಿ ಕೇವಲ 12 ಸಾವಿರ ರೂ. ವೇತನವನ್ನು ಪಡೆಯುತ್ತಿದ್ದೇವೆ. ಸರ್ಕಾರದ ನಿಯಮದಂತೆ ಪಿಎಫ್, ಇಎಸ್‍ಐ ಸೇರಿದಂತೆ ಯಾವದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಇದೀಗ ಗುತ್ತಿಗೆ ಅವಧಿಯನ್ನು ನವೀಕರಿಸುವ ಹಂತದಲ್ಲೆ ಹತ್ತು ಮಂದಿಗೆ ಉದ್ಯೋಗವಿಲ್ಲವೆಂದು ಹೇಳುವ ಮೂಲಕ ನಮ್ಮ ಜೀವನವನ್ನು ಅತಂತ್ರಗೊಳಿಸಿದ್ದಾರೆ ಎಂದು ಆರೋಪಿಸಿದ ಇತರ ನೌಕರರು, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಕೋರಿಕೆಗೂ ಅಧಿಕಾರಿ ಸ್ಪಂದಿಸಿಲ್ಲವೆಂದು ಟೀಕಿಸಿದರು. ಮುಂದಿನ ಮೂರು ದಿನಗಳ ಒಳಗೆ ನಮಗೆ ಗುತ್ತಿಗೆ ಆಧಾರದಲ್ಲೆ ‘ಡಿ’ಗ್ರೂಪ್ ಹುದ್ದೆಯನ್ನು ನೀಡದಿದ್ದಲ್ಲಿ ಕುಟುಂಬ ಸಹಿತರಾಗಿ ಸೋಮವಾರದಿಂದ ಸೈನಿಕ ಶಾಲೆಯ ಎದುರು ಉಪವಾಸ ಸತ್ಯಾಗ್ರಹ ಆರಂಭಿಸುವದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆರ್. ಪ್ರಶಾಂತ್, ಬಿ.ಪಿ.ಕಿರಣ್, ಕೆ.ಎಸ್. ರವಿ, ಎಸ್.ಸಿ. ಚಂದ್ರಕುಮಾರ್ ಹಾಗೂ ಆರ್.ತೇಜಮೂರ್ತಿ ಉಪಸ್ಥಿತರಿದ್ದರು.