ಶನಿವಾರಸಂತೆ, ಜೂ. 7: ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ದೈತ್ಯ ಶಂಕುಹುಳು ತಾಲೂಕಿನ ಬೆಳ್ಳಾರಳ್ಳಿ ಹಾಗೂ ಹಂಡ್ಲಿ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳು ತ್ತಿದ್ದು, ಗಂಭೀರ ಚಿಂತನೆ ಅಗತ್ಯ ಎಂದು ಕಾಫಿ ಮಂಡಳಿ ಉಪ ನಿರ್ದೇಶಕ ರಾಮಗೌಂಡರ್ ಅಭಿಪ್ರಾಯಪಟ್ಟರು.

ಪಟ್ಟಣದ ಕಾಫಿ ಮಂಡಳಿ ವಿಸ್ತರಣಾ ಹಾಗೂ ಸಂಶೋಧನಾ ವಿಭಾಗದ ವತಿಯಿಂದ ‘ಆಫ್ರಿಕನ್ ದೈತ್ಯ ಶಂಕು ಹುಳು ಬಗ್ಗೆ ಮಾಹಿತಿ ಹಾಗೂ ಹತೋಟಿ ಕ್ರಮಗಳು’ ವಿಷಯದ ಬಗ್ಗೆ ಹಂಡ್ಲಿ ಗ್ರಾಮದಲ್ಲಿ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಂಕುಹುಳು ನಿಯಂತ್ರಣದ ಬಗ್ಗೆ ಕೇಂದ್ರ ಸರಕಾರದಿಂದಲೂ ಪ್ರಯತ್ನ ನಡೆದಿದ್ದು, ಬೆಳೆಗಾರರ ಸಂಘ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ಮಾಡಬಹುದು, ಸಮಸ್ಯೆ ಪರಿಹಾರಕ್ಕೆ ಸರಕಾರದ ಯೋಜನೆಗಳೇ ಆಗಬೇಕಿಲ್ಲ. ಬೆಳೆಗಾರರು ಸ್ವಂತಿಕೆಯಿಂದ ಯೋಜನೆ ರೂಪಿಸಿಕೊಳ್ಳಬಹುದು ಎಂದು ರಾಮಗೌಂಡರ್ ಸಲಹೆ ನೀಡಿದರು.

‘ನಮ್ಮ ಬೆಳೆಗಾರರ ಸಂಘ’ದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಮಾತನಾಡಿ, ಪ್ರತಿ ಮಳೆಗಾಲಕ್ಕೆ ಬರುವ ಅತಿತಿ ಶಂಕುಹುಳುವಿನ ಬಾಧೆ ಅಂಡು ಜಾಡ್ಯದಂತೆ, ಔಷಧಿ ಸಿಂಪಡಿಸಿ ಸಣ್ಣ ಹುಳುವಾಗಿರುವಾಗಲೇ ನಾಶಪಡಿಸಬೇಕು. ನಿಯಂತ್ರಣಕ್ಕೆ ಸರಕಾರ ಹಾಗೂ ಗ್ರಾ.ಪಂ. ಹೆಚ್ಚಿನ ಮುತುವರ್ಜಿ ತೋರಿಸಬೇಕಿದೆ ಎಂದು ಮನವಿ ಮಾಡಿದರು.

ಹಿರಿಯ ಸಂಪರ್ಕಾಧಿಕಾರಿ ಎಚ್.ಆರ್. ಮುರಳೀಧರ್ ಮಾತನಾಡಿ, ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಇತರ ಗ್ರಾಮಗಳ 350 ಎಕರೆ ಪ್ರದೇಶದಲ್ಲಿ ಹುಳುವಿನ ಬಾಧೆ ವ್ಯಾಪಿಸಿದೆ. ಮೊಟ್ಟೆ ನಾಶ ಮೊದಲಿಗೆ ಮಾಡಬೇಕು. ಕಳೆದ ವರ್ಷ ಬೆಳೆಗಾರರ ಸಂಘದ ‘ಹಿಡಿಕೊಲ್ಲು’ ಕಾರ್ಯಕ್ರಮ ಯಶಸ್ವಿಯಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ರೂ. 10 ಲಕ್ಷ ಬಿಡುಗಡೆಯಾಗಿದ್ದು, 45 ಕೋಟಿ ಶಂಕು ಹುಳು ನಿಯಂತ್ರಣ ಮಾಡಲಾಗಿದೆ. ಇದು ಅತ್ಯುತ್ತಮ ಸಾಧನೆಯಾಗಿದೆ. ಬೆಳ್ಳಾರಳ್ಳಿ, ಹಂಡ್ಲಿಯಲ್ಲಿ 20 ಸಾವಿರ ಕೆ.ಜಿ. ಹುಳು ಸಂಗ್ರಹಿಸಿ ನಾಶ ಮಾಡಲಾಗಿದೆ ಎಂದರು.

ಮಂಡಳಿ ಉಪ ನಿರ್ದೇಶಕ ಜಗದೀಶ್ ಮಾತನಾಡಿ, ವೈಯಕ್ತಿಕ ವಾಗಿ ಹುಳುಗಳ ಹತೋಟಿ ಸಾಧ್ಯವಿಲ್ಲ. ಸಾಮೂಹಿಕ ಪ್ರಯತ್ನವಾಗಬೇಕಿದೆ. ನಿಯಂತ್ರಿಸಿದಷ್ಟೂ ವೃದ್ಧಿಸುತ್ತವೆ. ಸಂಘ-ಸಂಸ್ಥೆ ಹಾಗೂ ಬೆಳೆಗಾರರು ಕಾಫಿ ಮಂಡಳಿಯೊಂದಿಗೆ ಸಹಕರಿಸಬೇಕು ಎಂದರು.

ಕಾಫಿ ಮಂಡಳಿ ಮಾಜಿ ಸದಸ್ಯ ಕೆ.ವಿ. ಮಂಜುನಾಥ್ ಮಾತನಾಡಿ, ಕಾಫಿ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿದ್ದು, ಬೆಳೆಗಾರರ ಸಂಘವೂ ಸಹಕಾರ ನೀಡುತ್ತಿದೆ. ಅರೆಬಿಕಾ ಕಾಫಿ ಬೆಳೆಗಾರರು ಬಹಳ ಶ್ರಮಿಸಬೇಕಿದೆ. ಸಂಪೂರ್ಣ ನಿಯಂತ್ರಣ ಸಾಧ್ಯವಾಗದಿದ್ದರೇ ರಿ ಪ್ಲಾಂಟೇಶನ್ ವ್ಯವಸ್ಥೆ ಆಗಬೇಕು ಎಂದರು.

ಕಿರಿಯ ಸಂಪರ್ಕಾಧಿಕಾರಿ ಪಿ. ವಿಶ್ವನಾಥ್ ಮಾತನಾಡಿದರು. ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ವಿಜ್ಞಾನಿ ರಂಜಿತ್‍ಕುಮಾರ್ ಶಂಕುಹುಳುವಿನ ಜೀವನ ಶೈನಿ, ಹಾವಳಿ, ನಿಯಂತ್ರಣದ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ವಿಸ್ತರಣಾಧಿಕಾರಿ ಎಮಿ ವರ್ಗೀಶ್ ಹಾಗೂ ಬೆಳೆಗಾರರು ಇದ್ದರು.