ಮಡಿಕೇರಿ, ಜೂ. 7: ಇಲ್ಲಿಗೆ ಸನಿಹದ ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವಯ 2017-18ನೇ ಸಾಲಿನಲ್ಲಿ ರೂ. 21 ಲಕ್ಷ ಲಾಭಗಳಿಸಿದೆ.
ವಿಎಸ್ಎಸ್ಎನ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿಯೊಂದಿಗೆ ಲಾಭದತ್ತ ಸಾಗುತ್ತಿದೆ ಎಂದು ತಿಳಿಸಿದರು. ಸದಸ್ಯರುಗಳ ಸಹಕಾರದಿಂದ ಬ್ಯಾಂಕ್ ಪ್ರಗತಿ ಸಾಧಿಸುತ್ತಿದ್ದು, ಬಂದ ಲಾಭದಲ್ಲಿ ಸದಸ್ಯರುಗಳಿಗೆ ಶೇ. 10 ಡಿವಿಡೆಂಟ್ ನೀಡಲು ತೀರ್ಮಾನಿಸಿರುವದಾಗಿ ಹೇಳಿದರು. ಒಟ್ಟು ರೂ. 6 ಕೋಟಿಯಷ್ಟು ಕೆಸಿಸಿ ಸಾಲ ವಿತರಿಸಲಾಗಿದ್ದು, ಶೇ. 100 ರಷ್ಟು ಮರು ವಸೂಲಾತಿಯಾಗಿದೆ ಎಂದು ಮಾಹಿತಿ ನೀಡಿದರು. ಸಂಘವು ರೈತರ, ಕೃಷಿಕರ ಪರವಾಗಿದ್ದು, ಸಂಘದ ಮೂಲಕ ಎರಡು ಅಂತಸ್ತಿನ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗುದ್ದು, ಸಾರ್ವಜನಿಕರಿಗೆ ಕಡಿಮೆ ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಹಿರಿಯ ಸರಕಾರಿ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಮಾಜಿ ಅಧ್ಯಕ್ಷ ಕುಂಬಗೌಡನ ಉತ್ತಪ್ಪ ಅವರು ಕೃಷಿಕರ ಪರವಾಗಿರುವ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭ ಸಂಘದ ವತಿಯಿಂದ ಎಸ್ಎಸ್ಎಲ್ಸಿಯಲ್ಲಿ ಶೇ. 100 ರಷ್ಟು ಸಾಧನೆ ಮಾಡಿದ ಮಕ್ಕಂದೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಸೇರಿದಂತೆ ಶಿಕ್ಷಕ ವೃಂದ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಚೌಕಿಮನೆ ರಘು ತಿಮ್ಮಯ್ಯ, ನಿರ್ದೇಶಕರುಗಳಾದ ಸುಲೋಚನ ಮೋಹನ್, ಉಕ್ಕೇರಿಯಂಡ ನೀಲಮ್ಮ, ಶಾಂತೆಯಂಡ ದೇವರಾಜ್, ಕನ್ನಿಕಂಡ ಶಾಂ ಸುಬ್ಬಯ್ಯ ಇದ್ದರು. ಕಾರ್ಯನಿರ್ವಹಣಾಧಿಕಾರಿ ಚೆನ್ನಪಂಡ ಕುಟ್ಟಪ್ಪ ವರದಿ ಮಂಡಿಸಿದರು. ನಿರ್ದೇಶಕಿ ಪಡೇಟ್ಟಿರ ಕವಿತಾ ಪ್ರಾರ್ಥಿಸಿದರೆ, ಅಣ್ಣೆಚ್ಚಿರ ಸತೀಶ್ ಸ್ವಾಗತಿಸಿ, ಕುಂಬಗೌಡನ ಪ್ರಸನ್ನ ವಂದಿಸಿದರು