ವೀರಾಜಪೇಟೆ, ಜೂ. 7: ಪೆಟ್ರೋಲ್, ಡಿಸೇಲ್ ದರ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆ ಈಗಿನ ಆಟೋ ದರವನ್ನು ತಕ್ಷಣದಿಂದ ಪರಿಷ್ಕರಣೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವನ್ನು ಒತ್ತಾಯಿಸುವದಾಗಿ ವೀರಾಜಪೇಟೆ ನಗರ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ. ಶಶಿಧರನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಶಿಧರನ್, ನಾಲ್ಕು ವರ್ಷಗಳ ಹಿಂದೆ ಸಾರಿಗೆ ಪ್ರಾಧಿಕಾರ ಆಟೋ ದರವನ್ನು ಪರಿಷ್ಕರಿಸಿತ್ತು. ಈಗ ತೈಲ ಬೆಲೆ ಏರಿಕೆಯೊಂದಿಗೆ ಷೋ ರೂಂ ಆಟೋ ದರ, ಇದರ ಬಿಡಿಭಾಗಗಳ ದರ, ಇನ್ಸೂರೆನ್ಸ್, ನೋಂದಣಿ ವೆಚ್ಚ ಎಲ್ಲವೂ ಏರಿಕೆಯಾಗಿದೆ. ಆದ್ದರಿಂದ ಆಟೋ ಸಂಘಟನೆಯ ಮನವಿಗೆ ಸ್ಪಂದಿಸಿ ಮುಂದಿನ 15 ದಿನಗಳೊಳಗೆ ದರವನ್ನು ಪರಿಷ್ಕರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಎ.ಆರ್. ಚಂದ್ರರಾವ್, ಖಜಾಂಚಿ ಎಂ.ಎಸ್. ಸತೀಶ್, ರಜಿನಾ ಪ್ರಕಾಶ್, ಪೊನ್ನಪ್ಪ ರೈ, ಎಂ.ಎಸ್. ಮಂಜುನಾಥ್ ರಫೀಕ್ ಹಾಜರಿದ್ದರು.