ಕುಶಾಲನಗರ, ಜೂ. 6: ಸ್ವಚ್ಛ ಕಾವೇರಿ ಹಾಗೂ ಸ್ವಚ್ಛ ಪರಿಸರಕ್ಕಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನಿಂದ ಶ್ರೀರಂಗಪಟ್ಟಣ ತನಕ ಕಾಲ್ನಡಿಗೆ ಜಾಥಾ ನಡೆಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪುರಸಭೆ ಶ್ರೀರಂಗಪಟ್ಟಣ ಮತ್ತಿತರ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಜಾಥಾಗೆ ಮೈಸೂರು ಅರಮನೆ ಬಳಿಯಿಂದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಜಲಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ನದಿ ಸಂರಕ್ಷಣೆಗೆ ಸರಕಾರದ ಮೂಲಕ ಕಾರ್ಯಯೋಜನೆಗಳು ಸಿದ್ದವಾಗ ಬೇಕೆಂದು ತಿಳಿಸಿದರು.

ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಯೋಜನಕರಾದ ವೇ.ಬ್ರ.ಡಾ. ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ನಡೆದ ಜಾಥಾಗೆ ಮೊದಲು ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಾಲಯ ದಲ್ಲಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿ ರಾಜ್ಯ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್, ಜನರಿಗೆ ನದಿ ಸಂರಕ್ಷಣೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸ್ವಚ್ಛವಾಗಿ ಹರಿಯುತ್ತಿರುವ ನದಿಯನ್ನು ಯಾವದೇ ರೀತಿಯಲ್ಲಿ ಕಲುಷಿತ ಗೊಳಿಸದಂತೆ ಎಚ್ಚರ ವಹಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಬಾರಿ ಮಡಿಕೇರಿಯಿಂದ ಕುಶಾಲನಗರ ತನಕ ಜಾಥಾ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಸಮಿತಿಯ ಸಂಸ್ಥಾಪಕರಾದ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳಾದ ಉದಯಕುಮಾರ್, ಪ್ರಕಾಶ್ ಮತ್ತಿತರರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಜಾಥಾದ ಸಮಾರೋಪ ಶ್ರೀರಂಗಪಟ್ಟಣ ಶ್ರೀರಂಗನಾಥ ದೇವಾಲಯ ಬಳಿ ನಡೆಯಿತು. ಈ ಸಂದರ್ಭ ಸಮಿತಿಯ ತಮಿಳುನಾಡು ಪ್ರಾಂತ್ಯದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ ಮತ್ತಿತರರು ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ನದಿ ಸಂರಕ್ಷಣೆಯ ಬಗ್ಗೆ ಯೋಜನೆ ರೂಪಿಸಲು ಮನವಿ ಪತ್ರ ಸಲ್ಲಿಸಲಾಯಿತು. ಜಲಮೂಲಗಳು ನದಿಗಳ ಸಂರಕ್ಷಣೆಗಾಗಿ ಸರಕಾರದ ಮೂಲಕ ಕೇಂದ್ರ ಸರಕಾರದ ರಿವರ್ ಬೋರ್ಡ್ ಆಕ್ಟ್ 1956ರ ಕಾಯ್ದೆ ರೂಪಿಸಿ ಅನುಷ್ಠಾನಗೊಳಿಸುವ ದರೊಂದಿಗೆ ಮುಂದಿನ ಬಜೆಟ್‍ನಲ್ಲಿ ಕಾವೇರಿ ನದಿ ಸಂರಕ್ಷಣೆಗೆ ಅನುದಾನ ಕಲ್ಪಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.

ಜಾಥಾದಲ್ಲಿ ಪಾಲ್ಗೊಂಡವರಿಗೆ ಸಮಿತಿ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.

ಜಾಥಾದಲ್ಲಿ ಜಿಲ್ಲೆಯಿಂದ ಗ್ರೀನ್ ಸಿಟಿ ಫೋರಂ ಸಂಚಾಲಕರಾದ ಚೈಯ್ಯಂಡ ಸತ್ಯ, ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೊಂಗೇಟಿರ ಬೋಪಯ್ಯ, ಕೃಷ್ಣ ಬೋಪಯ್ಯ, ಎಂ.ಬಿ. ಜೋಯಪ್ಪ, ವೀರಾಜಪೇಟೆಯ ಶನೇಶ್ವರ ಯುವಕ ಮಂಡಳಿಯ ಯುವರಾಜ್, ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಎಸ್. ಮೋಹನ್, ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಜಿ. ಮನು, ಕೆ.ಎನ್. ದೇವರಾಜ್, ಶಿವಾಜಿ, ಮಂಜು, ವಿನೋದ್, ಕೃಷ್ಣ, ಉಮಾಶಂಕರ್, ಎಂ.ಎನ್. ಕುಮಾರಸ್ವಾಮಿ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.