ಸೋಮವಾರಪೇಟೆ, ಜೂ.4: ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರು ಜಯಗಳಿಸಿದ ಅಂಗವಾಗಿ ಸೋಮವಾರಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಇಲ್ಲಿನ ವಿವೇಕಾನಂದ ವೃತ್ತದಿಂದ ಅಬ್ಬರದ ಸಂಗೀತ, ವಾದ್ಯಗೋಷ್ಠಿ ಯೊಂದಿಗೆ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ಬಸವೇಶ್ವರ ದೇವಾಲಯ ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ಜೇಸೀ ವೇದಿಕೆಯವರೆಗೆ ಮೆರವಣಿಗೆ ನಡೆಸಿದರು.

ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾಸಕ ಅಪ್ಪಚ್ಚು ರಂಜನ್ ಪರವಾಗಿ ಜಯಘೋಷ ಮೊಳಗಿಸಿದರು. ಶಾಸಕ ರಂಜನ್, ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಕ್ಷೇತ್ರ ಅಧ್ಯಕ್ಷ ಕುಮಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ವಕ್ತಾರ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯೆ ಸರೋಜಮ್ಮ, ಪ್ರಮುಖರಾದ ಎಸ್.ಬಿ. ಭರತ್‍ಕುಮಾರ್ ಅವರುಗಳು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತೆರಳಿದರು.

ಅಪ್ಪಚ್ಚು ರಂಜನ್ ಸವಾಲು

ಜಾತಿ ರಾಜಕೀಯ ಮಾಡಿಲ್ಲ; ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಬಿಜೆಪಿಯೇ ಜಾತಿ. ಜಾತಿ ಆಧಾರಿತ ರಾಜಕಾರಣ ಮಾಡುವ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರಿಗೆ ತಾಕತ್ತಿದ್ದರೆ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಲಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸವಾಲೆಸೆದರು.

ಶಾಸಕರಾಗಿ ಆಯ್ಕೆಯಾದ ಹಿನ್ನೆಲೆ ಸೋಮವಾರಪೇಟೆಯಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ದಲ್ಲಿ ಭಾಗವಹಿಸಿ ಮಾತನಾಡಿದ ರಂಜನ್, ಕೊಡವ ಸಮುದಾಯ ಅಧಿಕವಿರುವ ವೀರಾಜಪೇಟೆಯಲ್ಲಿ ಗೌಡ ಜನಾಂಗದ ಅಭ್ಯರ್ಥಿ, ಗೌಡ ಸಮುದಾಯ ಹೆಚ್ಚಿರುವ ಮಡಿಕೇರಿ ಕ್ಷೇತ್ರದಲ್ಲಿ ಕೊಡವ ಅಭ್ಯರ್ಥಿಗಳು ಗೆದ್ದಿರುವದು ಕಾರ್ಯಕರ್ತರ ಅವಿರತ ಶ್ರಮದಿಂದ ಹೊರತು, ಜಾತಿ ಆಧಾರಿತ ರಾಜಕೀಯದಿಂದಲ್ಲ ಎಂದರು.

ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿಎಸ್‍ವೈ ಮುಖ್ಯಮಂತ್ರಿ ಯಾಗಲಿದ್ದು, ಕೊಡಗಿನ ಅಭಿವೃದ್ಧಿಗೆ ವೇಗ ಸಿಗಲಿದೆ. 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಸೋತಿದ್ದರೂ ಸಹ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು. 79ರ ವೃದ್ಧನೊಂದಿಗೆ 38ರ ಮಹಿಳೆಯ ಮದುವೆ ಮಾಡಿದ್ದಾರೆ. ಈ ಮದುವೆ ಜಾಸ್ತಿ ದಿನ ಉಳಿಯುವದಿಲ್ಲ ಎಂದು ಛೇಡಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಅಪವಿತ್ರ ಮೈತ್ರಿ ಸರ್ಕಾರದಲ್ಲಿ ಈಗಾಗಲೇ ಕಚ್ಚಾಟ ಪ್ರಾರಂಭವಾಗಿದೆ. ಮುಂದೆ ಬಿಜೆಪಿ ಸರ್ಕಾರ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಗಣೇಶ್ ಅವರುಗಳು ಮಾತನಾಡಿದರು.

ವೇದಿಕೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಕುಮಾರಪ್ಪ, ಜಿ.ಪಂ. ಸದಸ್ಯೆ ಸರೋಜಮ್ಮ, ಶಿಕ್ಷಕ ಪ್ರಕೋಷ್ಠದ ಅಧ್ಯಕ್ಷ ಶೇಖರ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಸತೀಶ್, ರಾಜ್ಯ ಸಮಿತಿ ಸದಸ್ಯೆ ಸುಮಾ ಸುದೀಪ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.