ಮಡಿಕೇರಿ, ಜೂ. 4: ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟ ಶ್ರೇಣಿಯ ಮಾಂದಲಪಟ್ಟಿಗೆ ಆಗಮಿಸುತ್ತಿರುವ ಪ್ರವಾಸಿಗರ ಹಾವಳಿ ಮತ್ತು ವಾಹನ ಚಾಲಕರಿಂದ ಅಧಿಕ ಹಣ ವಸೂಲಿ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟಲು ಜಿಲ್ಲಾ ಆಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಅರಣ್ಯ ಅಧಿಕಾರಿ, ಸಾರಿಗೆ ಪ್ರಾಧಿಕಾರ ಅಧಿಕಾರಿ ಸಹಿತ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲದೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಉಪಸ್ಥಿಯಲ್ಲಿ ಇತರ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿ ಮಾಂದಲಪಟ್ಟಿ ವನ್ಯಜೀವಿ ಧಾಮಕ್ಕೆ ಯಾವದೇ ವಾಹನ ಅಥವಾ ಪ್ರವಾಸಿಗರ ಪ್ರವೇಶಕ್ಕೆ ಇಲಾಖೆಯಿಂದ ಸಂಬಂಧಪಟ್ಟ ಅಧಿಕಾರಿಗಳ ಅನುಮತಿಗೆ ನಿರ್ದೇಶನ ನೀಡಿದೆ.
ಆ ಪ್ರಕಾರ ಮಾಂದಲಪಟ್ಟಿಗೆ ತೆರಳುವ ಮಾರ್ಗದ ರಸ್ತೆಗೆ ಹೊಂದಿ ಕೊಂಡಿರುವ ಈಗಿನ ನಿಲುಗಡೆ ಶುಲ್ಕ ವಸೂಲಿ ಸ್ಥಳದಲ್ಲೇ ವಾಹನಗಳ ತಪಾಸಣೆಗೆ ನಿಗಾವಹಿಸ ಲಾಗುತ್ತದೆ. ಮಾಂದಲಪಟ್ಟಿಗೆ ವಾಹನಗಳಿಂದ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಿರುವ ಗಾಳಿಬೀಡು ಗ್ರಾ.ಪಂ.ನಿಂದ ಈ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆಯೊಂದಿಗೆ ಸಿಸಿ ಕ್ಯಾಮರಾ ಇತ್ಯಾದಿ ಅಳವಡಿಸುವ ಮುಖಾಂತರ ಮುಂಜಾಗ್ರತೆ ವಹಿಸಬೇಕಿದೆ. ಅಲ್ಲಿ ಪ್ರಸಕ್ತ ಅರಣ್ಯ ಇಲಾಖೆ ಅಳವಡಿಸಿ ರುವ ಗೇಟ್‍ನಿಂದ ವನ್ಯಧಾಮ ಪ್ರದೇಶದತ್ತ ತೆರಳುವ ಮುನ್ನ ಈ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ. ಅಲ್ಲದೆ ಸಂಬಂಧಿಸಿದ ಪ್ರವೇಶ ದ್ವಾರದಿಂದ ನಿರ್ಮಿಸಿರುವ ಪುಷ್ಪಗಿರಿ ಅರಣ್ಯ ವನ್ಯಧಾಮ ಹೆಬ್ಬಾಗಿಲು ತನಕ ಮಾತ್ರ ವಾಹನಗಳು ತೆರಳಬಹುದಾಗಿದ್ದು, ಇಲಾಖೆಯ ಷರತ್ತುಗಳಿಗೆ ಒಳಪಡಬೇಕಿದೆ.
ಮುಖ್ಯ ರಸ್ತೆಯಿಂದ ಅಲ್ಲಿಯ ತನಕ ಅನುಮತಿ ಪಡೆದು ಪ್ರವಾಸಿಗಳನ್ನು ಜೀಪಿನಲ್ಲಿ ಕರೆದೊಯ್ಯುವ ಚಾಲಕರು ರೂ. 300 ಮಾತ್ರ ಬಾಡಿಗೆ ಪಡೆಯಬೇಕು. ಯಾವದೇ ಕಸ, ಪ್ಲಾಸ್ಟಿಕ್, ನಿರುಪಯೋಗಿ ವಸ್ತುಗಳು, ಮಾದಕ ಸಾಮಗ್ರಿ ಒಯ್ಯುವಂತಿಲ್ಲ. ಎಲ್ಲೆಂದರಲ್ಲಿ ಎಸೆಯುವಂತೆಯೂ ಇಲ್ಲ. ಇಡೀ ಪ್ರದೇಶದಲ್ಲಿ ನಿಶಬ್ಧ ಕಾಪಾಡುವಂತಿದ್ದು, ಸೌಜನ್ಯದಿಂದ ವರ್ತಿಸಬೇಕಿದೆ. ಬದಲಾಗಿ ನಿಯಮ ಮೀರಿ ಅಥವಾ ಷರತ್ತುಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆಯ ರಸ್ತೆ ಸಾರಿಗೆ ಪ್ರಾಧಿಕಾರದಿಂದ ಕಾನೂನು ಕ್ರಮ ಜರುಗಿಸುವದಾಗಿ ಗೊತ್ತಾಗಿದೆ.
ಈ ಹಿಂದೆ ಮಾಂದಲಪಟ್ಟಿಗೆ ಪೈಪೋಟಿಯಲ್ಲಿ ವಾಹನಗಳನ್ನು ಓಡಿಸುವದು, ಪ್ರವಾಸಿಗರಿಂದ ಮನ ಬಂದಂತೆ ವಸೂಲಿ, ದೈಹಿಕ ಹಲ್ಲೆ, ಬೆದರಿಕೆವೊಡ್ಡುವದು ಇತ್ಯಾದಿ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಸಾರಿಗೆ ಪ್ರಾಧಿಕಾರ ಸಮಿತಿ ಈ ನಿರ್ಧಾರ ತೆಗೆದುಕೊಂಡಿರುವದಾಗಿ ಮೂಲಗಳಿಂದ ಗೊತ್ತಾಗಿದೆ.