ಸುಂಟಿಕೊಪ್ಪ, ಜೂ. 5: ಸುಂಟಿಕೊಪ್ಪ ರಸ್ತೆಯಲ್ಲಿ ಅಡ್ಡಲಾಗಿ ಮಗುಚಿಕೊಂಡಿದ್ದ ಕಾಂಕ್ರೀಟ್ ಸಾಗಿಸುವ ಲಾರಿಯ ನೆರವಿಗೆ ಧಾವಿಸಿದ ಇನ್ನೊಂದು ಲಾರಿಯ ಚಾಲಕನಿಗೆ ಮತ್ತೊಂದು ಹತ್ತು ಚಕ್ರದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಅಸುನೀಗಿರುವ ದಾರುಣ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ ಅಂದಾಜು 10.45 ರ ಸಂದರ್ಭ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾಂಕ್ರೀಟ್ ತುಂಬಿದ ಲಾರಿಯು ಚಾಲಕನ ನಿಯಂತ್ರಣ ಕಳೆದುಕೊಂಡು ಗದ್ದೆಹಳ್ಳದ ಆರ್ ಆರ್ ಕಾರ್ ಗ್ಯಾರೇಜ್ ಸಮೀಪದ ತಿರುವಿನಲ್ಲಿ (ಹಳೆ ವಂದನಾ ಬಾರ್) ಸನಿಹ ಮಗುಚಿಕೊಂಡಿದೆ. ಇದಾದ ನಂತರ ಇದೇ ಲಾರಿಯ ಮಾಲೀಕ ಸ್ಥಳೀಯ ಗುತ್ತಿಗೆದಾರರೊಬ್ಬರ ಇನ್ನೊಂದು ಲಾರಿಯು ಮಗುಚಿಕೊಂಡಿದ್ದ ಲಾರಿಯ ನೆರವಿಗೆ ಬಂದಿದೆ ಅದರ ಚಾಲಕನಾಗಿದ್ದ ಮೂಲತಃ ಚೇರಂಬಾಣೆ ನಿವಾಸಿಯಾದ ರಾಜೇಶ್ ಇತ್ತೀಚೆಗೆ ಕುಶಾಲನಗರದ ಸುಂದರನಗರದಲ್ಲಿ ನೆಲೆಸಿದ್ದು, ತಾನು ತಂದಿದ್ದ ಲಾರಿಯಲ್ಲಿ ಮಗುಚಿಕೊಂಡಿದ್ದ ಲಾರಿಯ ಕಾಂಕ್ರೀಟ್‍ನ್ನು ತುಂಬಿಸಿದ್ದಾರೆ. ಬಳಿಕ ಬೇರೆ ಚಾಲಕನಿಗೆ ಲಾರಿಯನ್ನು ಒಪ್ಪಿಸಿ ವಾಪಾಸ್ಸು ಕಳುಹಿಸಿದ ರಾಜೇಶ್ ಮಗುಚಿಕೊಂಡಿದ್ದ ಕಾಂಕ್ರೀಟ್ ಲಾರಿಯ ಬದಿಯಲ್ಲಿ ನಿಂತಿದ್ದರು ಎನ್ನಲಾಗಿದೆ. ದುರದೃಷ್ಟವಶಾತ್ (ಮೊದಲ ಪುಟದಿಂದ) ಇದೇ ಸಮಯದಲ್ಲಿ ಸುಂಟಿಕೊಪ್ಪ ಕಡೆಯಿಂದ ಮಂಗಳೂರು ಕಡೆಗೆ ಸರಕು ತುಂಬಿಸಿಕೊಂಡು ತೆರಳುತ್ತಿದ್ದ 10 ಚಕ್ರದ ಲಾರಿಯೊಂದು ಚಾಲಕ ರಾಜೇಶ್‍ಗೆ ಡಿಕ್ಕಿಗೊಳಿಸಿದೆ. ಪರಿಣಾಮ ಗಂಭೀರ ಗಾಯಗೊಂಡ ರಾಜೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅವರೊಂದಿಗೆ ಇದ್ದ ಇನ್ನೋರ್ವ ಕಾರ್ಮಿಕ ಪ್ರಶಾಂತ್‍ಗೂ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಲಾರಿ ಚಾಲಕ ಗಿರೀಶ್ ಎಂಬಾತನ ವಿರುದ್ಧ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.