ಮಡಿಕೇರಿ, ಜೂ. 5 : ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆ ನಮ್ಮ ಮನೆ ಮತ್ತು ಕಚೇರಿಯಿಂದಲೇ ಆರಂಭ ವಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ‘ವಿಶ್ವ ಪರಿಸರ ದಿನಾಚರಣೆ’ಯ ಸಭಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರ ಶುಚಿತ್ವ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರತಿನಿತ್ಯವೂ ಅರಿವು ಇರಬೇಕು. ಕೇವಲ ಪರಿಸರ ದಿನಾಚರಣೆಯಂದು ಪರಿಸರ ಸಂರಕ್ಷಣೆ ಬಗ್ಗೆ ಹೇಳಿದರಷ್ಟೆ ಸಾಲದು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ವಿಶ್ವದಲ್ಲಿ 100 ಮಿಲಿಯನ್ ಟನ್‍ಗಳಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, 7 ಸಾವಿರ ಟನ್‍ರಷ್ಟು ಪ್ಲಾಸ್ಟಿಕ್ ತ್ಯಾಜ್ಯವಾಗುತ್ತಿದೆ. ಇದು ಹಳ್ಳಕೊಳ್ಳ, ಕಾಲುವೆ, ನದಿ, ಸಮುದ್ರ ಸೇರಿ ಇಡೀ ಜೀವಜಲದ ಪ್ರಾಣವನ್ನೇ ಹಿಂಡುತ್ತಿದೆ ಎಂದು ವಿಷಾದಿಸಿದರು.
(ಮೊದಲ ಪುಟದಿಂದ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಪ್ರತಿ ವರ್ಷ ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ಪ್ಲಾಸ್ಟಿಕನ್ನು ತರುತ್ತಾರೆ. ಈ ಪ್ಲಾಸ್ಟಿಕ್‍ನ್ನು ಮರು ಬಳಕೆ ಮಾಡುವಂತಾಗಲು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸ ಬೇಕಿದೆ ಎಂದು ಸಲಹೆಯಿತ್ತರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಮಂಜುನಾಥ್ ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ವಿತರಿಸಲಾಗುತ್ತಿದ್ದು, ಇವುಗಳನ್ನು ಪೋಷಣೆ ಮಾಡಿದ್ದಲ್ಲಿ ಪ್ರೋತ್ರಾಹಧನ ನೀಡಲಾಗುವದು. ಜೊತೆಗೆ ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ವಿತರಿಸಲಾಗಿರುವ ಗಿಡಗಳನ್ನು ಸಮರ್ಪಕವಾಗಿ ಸಂರಕ್ಷಣೆ ಮಾಡಿದ್ದಲ್ಲಿ ಅಂತಹ ಶಾಲಾ-ಕಾಲೇಜುಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವದು ಎಂದು ಇದೇ ಸಂದರ್ಭ ಪ್ರಕಟಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಉಪಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, ಪರಿಸರ ದಿನಾಚರಣೆ ನಿತ್ಯೋತ್ಸವ ಕಾರ್ಯಕ್ರಮವಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಘನತ್ಯಾಜ್ಯದಲ್ಲಿ ಶೇ.20 ರಷ್ಟು ಮಾತ್ರ ಪ್ಲಾಸ್ಟಿಕ್ ಬಳಕೆಯಲ್ಲಿದೆ. ಆದರೆ ಪ್ಲಾಸ್ಟಿಕ್‍ನ್ನು ಸರಿಯಾಗಿ ಬಳಸಿ ಮರು ಬಳಕೆ ಮಾಡುವಂತಾಗಬೇಕು ಎಂದರು. ಪರಿಸರ ಸಂರಕ್ಷಣೆ ಕುರಿತು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆಂಚಪ್ಪ, ತಹಶೀಲ್ದಾರರಾದ ಶಾರದಾಂಭ ಇತರರು ಇದ್ದರು.
ಪರಿಸರ ಸಂರಕ್ಷಣೆ ಮತ್ತು ಮಹತ್ವ ಕುರಿತು ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ, ಚಿತ್ರಕಲೆ ಹಾಗೂ ಘೋಷ ವಾಕ್ಯ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸ ಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರ ಮಹತ್ವ ಕುರಿತು ನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.
ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಪರಿಸರ ಸಂರಕ್ಷಣೆ ಕುರಿತು ಹಾಡು ಹಾಡಿದರು. ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯರು ನಾಡಗೀತೆ ಹಾಡಿದರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಅವರು ನಿರೂಪಿಸಿ, ವಂದಿಸಿದರು.