ಗೋಣಿಕೊಪ್ಪ ವರದಿ, ಜೂ. 6 : ರುದ್ರಬೀಡು ಗ್ರಾಮದಲ್ಲಿ ಸೇರಿಕೊಂಡು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡು ಸಮೀಪದ ಮತ್ತೂರು ಗ್ರಾಮದಲ್ಲಿ ಸೇರಿಕೊಂಡು ಆತಂಕ ಮೂಡಿಸಿದೆ.
ಇದೀಗ 16 ಆನೆಗಳು ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದಲ್ಲಿ ಸೇರಿಕೊಂಡು ದಾಂಧಲೆ ನಡೆಸುತ್ತಿವೆ. ಅರಣ್ಯ ಇಲಾಖೆಯಿಂದ ಕಾಡಿಗಟ್ಟುವ ಕಾರ್ಯಾಚರಣೆ ಮತ್ತೆ ಆರಂಭಗೊಂಡಿದ್ದು, ಮಳೆಯಿಂದಾಗಿ ಕಾರ್ಯಾಚರಣೆಗೆ ತೊಡ ಕುಂಟಾಯಿತು.
ರುದ್ರಬೀಡು ಗ್ರಾಮಕ್ಕೆ ಬಂದಿದ್ದ 16 ಆನೆಗಳನ್ನು ತಿತಿಮತಿ ಆರ್‍ಆರ್‍ಟಿ ತಂಡ ಕಾಡಿಗಟ್ಟುವ ಸಂದರ್ಭ 7 ಆನೆಗಳು ಬೇರ್ಪಟ್ಟು ಮತ್ತೂರು ಗ್ರಾಮಕ್ಕೆ ಸೇರಿಕೊಂಡಿದ್ದವು. ಇದರಂತೆ 6 ಆನೆಗಳನ್ನು ಮಾಯಮುಡಿಯವರೆಗೆ ಅಟ್ಟಿಕೊಂಡು ಬರಲಾಗಿತ್ತು. ಆದರೆ, ಮತ್ತೆ ಈ ಆನೆಗಳು ರಾತ್ರೋರಾತ್ರಿ ಮತ್ತೂರು ಗ್ರಾಮಕ್ಕೆ ನುಸುಳಿವೆ. ಇದರಿಂದಾಗಿ ಇದೀಗ 16 ಆನೆಗಳು ಗ್ರಾಮದಲ್ಲಿ ಬೀಡು ಬಿಟ್ಟಿವೆ.
ಮತ್ತೂರು ಗ್ರಾಮದಿಂದ ಕಾಡಾನೆಗಳನ್ನು ಕಾಡಿಗಟ್ಟಲು ತಿತಿಮತಿ ಹಾಗೂ ಪೊನ್ನಂಪೇಟೆ ಆರ್‍ಆರ್‍ಟಿ ತಂಡ ಒಟ್ಟಾಗಿ ಕಾರ್ಯಾಚರಣೆ ನಡೆಸಿವೆ. ಮಧ್ಯಾಹ್ನ ಅಲ್ಲಿನ ಕಾಡಿನಲ್ಲಿ ಆನೆಗಳು ಪತ್ತೆಯಾದವು. ನಂತರ 4 ಗಂಟೆ ಸುಮಾರಿಗೆ ಕಾಡಿಗಟ್ಟಲು ಯೋಜನೆ ರೂಪಿಸಿದರಾದರೂ ಆನೆಗಳು ಮುಖ್ಯ ರಸ್ತೆ ದಾಟಿ ಬರಲು ಹಿಂದೇಟು ಹಾಕಿದವು. ಈ ಸಂದರ್ಭ ಸುರಿದ ಭಾರಿ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಡಕುಂಟಾಯಿತು. ಆನೆಗಳು ಮತ್ತೆ ಅದೇ ಗ್ರಾಮದಲ್ಲಿ ಸೇರಿಕೊಂಡಿವೆ. ಇದರಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಹಿಂಡಿನಲ್ಲಿ ಮರಿಗಳು ಸೇರಿಕೊಂಡಿರುವದರಿಂದ ತೊಂದರೆಯಾಗಿದೆ.