ಸೋಮವಾರಪೇಟೆ, ಜೂ. 5: ಸಮೀಪದ ಐಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಾಜೂರಿನಲ್ಲಿ ಮಧ್ಯರಾತ್ರಿ, ಮಧ್ಯರಸ್ತೆಯಲ್ಲಿಯೇ ಮದಗಜಗಳ ಕಾದಾಟ ನಡೆದಿದ್ದು, ಅರಣ್ಯದಂಚಿನಲ್ಲಿದ್ದ ತೇಗದ ಮರಗಳು ಧ್ವಂಸಗೊಂಡಿವೆ. ರಸ್ತೆಯ ಮಧ್ಯೆಯೇ ಹೋರಾಟನಿರತವಾಗಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖಾ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದು, ರಸ್ತೆಯಲ್ಲಿ ತೆರಳುವ ವಾಹನಗಳಿಗೆ ತಡೆಯೊಡ್ಡಿ, ರಾತ್ರಿ ಇಡೀ ಪಟಾಕಿ ಸಿಡಿಸಿ ಕೊನೆಗೂ ಆನೆಗಳನ್ನು ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ 2 ಆನೆಗಳು ಕಾಜೂರು ರಸ್ತೆಯಲ್ಲಿಯೇ ಕಾದಾಟಕ್ಕೆ ಇಳಿದಿದ್ದು, ರಸ್ತೆಯ ಬದಿಯಿದ್ದ ಸಣ್ಣ ತೇಗದ ಮರಗಳು ನೆಲಕ್ಕುರುಳಿವೆ. ಕೋರೆಯಿಂದ ತಿವಿದ ಪರಿಣಾಮ ಗಾಯಗಳುಂಟಾಗಿದ್ದು, ರಸ್ತೆಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ.

ಮದಗಜಗಳ ಕಾದಾಟದಿಂದ ಅರಣ್ಯ ಇಲಾಖಾ ಸಿಬ್ಬಂದಿಗಳು ರಾತ್ರಿ ಇಡೀ ನಿದ್ರೆ ಬಿಟ್ಟಿದ್ದು, ರಸ್ತೆಯಲ್ಲಿ ತೆರಳುವ ವಾಹನಗಳನ್ನು ನಿಲುಗಡೆಗೊಳಿಸಿ ಪಟಾಕಿ ಸಿಡಿಸುವ ಮೂಲಕ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ್ದಾರೆ. ಸುಮಾರು 2 ಕಿ.ಮೀ. ದೂರದವರೆಗೂ ರಸ್ತೆಯಲ್ಲಿ ಹೋರಾಟ ನಡೆಸಿರುವ ಕುರುಹುಗಳು ಕಂಡುಬಂದಿವೆ.

ಈ ಭಾಗದಲ್ಲಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಗಳಿಗೆ ಸೋಲಾರ್ ಬೇಲಿ ಅಳವಡಿಸಿದ್ದು, ಅರಣ್ಯದಿಂದ ಇತ್ತ ಕಡೆ ದಾಟದಂತೆ ಅರಣ್ಯ ಇಲಾಖೆಯಿಂದ ಆನೆ ಕಂದಕ ನಿರ್ಮಿಸಲಾಗಿದೆ. ಆದರೂ ಈ ಭಾಗದಲ್ಲಿ 3 ಆನೆಗಳು ಪ್ರತ್ಯೇಕವಾಗಿ ಸಂಚರಿಸುತ್ತಿದ್ದು, ಎದುರು ಬದುರಾಗುವ ಸಂದರ್ಭ ಕಾದಾಟಗಳು ನಡೆಯುತ್ತಲೇ ಇರುತ್ತವೆ. ಕಳೆದ ಮೂರು ವಾರಗಳ ಹಿಂದೆಯೂ ರಸ್ತೆಯಲ್ಲಿಯೇ ಆನೆಗಳು ಕಾದಾಡುತ್ತಿದ್ದವು ಎಂದು ಕಾಜೂರು ನಿವಾಸಿ ಅವಿಲಾಶ್ ತಿಳಿಸಿದ್ದಾರೆ.

ಸೋಲಾರ್ ಬೇಲಿ: ಆನೆಕಂದಕದಿಂದಾಗಿ ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಓಡಾಡುತ್ತಿವೆ. ಸ್ಥಳೀಯರು ಪ್ರಾಣ ಭಯದಿಂದ ದಿನದೂಡಬೇಕಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ನಂತರ ಆನೆಕಂದಕವನ್ನು ನಿರ್ಮಿಸಿದರೆ ಕಾಡಾನೆಗಳ ಉಪಟಳದಿಂದ ಪಾರಾಗಬಹುದು. ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕೆಂದು ಸ್ಥಳೀಯರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

- ವಿಜಯ್